ಪ್ರೇಮಲೋಕ 2’ ಚಿತ್ರದ ಕುರಿತು ಶೀಘ್ರವೇ ಸಂಪೂರ್ಣ ಮಾಹಿತಿ ನೀಡುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ಹುಟ್ಟುಹಬ್ಬದ ಸಂದರ್ಭ
ಸಿನಿವಾರ್ತೆ
‘ಪ್ರೇಮಲೋಕ 2’ ಚಿತ್ರದ ಕುರಿತು ಶೀಘ್ರವೇ ಸಂಪೂರ್ಣ ಮಾಹಿತಿ ನೀಡುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್, ‘ಇನ್ನೊಂದು ವಾರ ಅಥವಾ ಹತ್ತು ದಿನದಲ್ಲಿ ಪ್ರೇಮಲೋಕ 2 ಚಿತ್ರದ ಜತೆಗೆ ನಿಮ್ಮ ಬರುತ್ತೇನೆ’ ಎಂದರು.
‘ನನ್ನ ಹುಟ್ಟುಹಬ್ಬದ ದಿನವೇ ಪ್ರೇಮಲೋಕ 2 ಚಿತ್ರ ಅಧಿಕೃತವಾಗಿ ಘೋಷಣೆ ಆಗಬೇಕಿತ್ತು. ಆದರೆ, ಬರ್ತ್ ಡೇ ಸಂಭ್ರಮ, ದೊಡ್ಡ ಸಿನಿಮಾ ಘೋಷಣೆ ಎರಡೂ ಒಟ್ಟಿಗೆ ಬಂದು ಗೊಂದಲ ಆಗುವುದು ಬೇಡ ಅಂತ ಪ್ರೇಮಲೋಕ 2 ಚಿತ್ರವನ್ನು ಮತ್ತೊಂದು ದಿನ ದೊಡ್ಡದಾಗಿ ಲಾಂಚ್ ಮಾಡಲು ನಿರ್ಧರಿಸಿದೆವು. ಕೃಷ್ಣ ಜ್ಯುವೆಲ್ಲರ್ಸ್‌ನವರು ಈ ಚಿತ್ರದ ನಿರ್ಮಾಪಕರು. ನನ್ನ ಜತೆಗೆ ಇವರು ಮೊದಲ ಬಾರಿಗೆ ಸಿನಿಮಾ ನಿರ್ಮಿಸುತ್ತಿದ್ದಾರೆ. ನಾನು ಮತ್ತು ನನ್ನ ಇಬ್ಬರು ಮಕ್ಕಳು ಒಟ್ಟಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇವೆ’ ಎಂದು ಅವರು ಹೇಳಿದರು.
‘ಬಾಲ ನಟನಾಗಿ ನಟಿಸಿದ್ದು ಸೇರಿ ನಾನು ಚಿತ್ರರಂಗಕ್ಕೆ ಬಂದು 53 ವರ್ಷ ಆಯಿತು. ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಒಂದು ಸಾವಿರ ಕೋಟಿ ಕೊಟ್ಟರೆ ಅಷ್ಟರಲ್ಲಿ ಸಿನಿಮಾ ಮಾಡುವುದು ಹೇಗೆಂದು ಪ್ಲಾನ್ ಮಾಡುತ್ತೇನೆ. ಒಂದು ಕೋಟಿ ಕೊಟ್ಟರೂ ಅಷ್ಟರಲ್ಲೇ ಸಿನಿಮಾ ಮಾಡುತ್ತೇನೆ. ಈಗ ನನ್ನ ಪರಿಸ್ಥಿತಿ ಏನೇ ಇದ್ದರೂ ನನ್ನ ಸಿನಿಮಾ ತಾಕತ್ತು, ನನ್ನೊಳಗಿರುವ ಆಸೆ ಕಡಿಮೆ ಆಗಿಲ್ಲ. ‘ಪ್ರೇಮಲೋಕ 2’ ಮೂಲಕ ದೊಡ್ಡದಾಗಿ ಬರುತ್ತೇನೆ’ ಎಂದು ರವಿಚಂದ್ರನ್ ಹುಮ್ಮಸ್ಸಿನಿಂದಲೇ ಹೇಳಿದ್ದಾರೆ.