ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯಕುಮಾರ್ ಅವರು ಚಿತ್ರರಂಗಕ್ಕೆ : ಅಪ್ಪನ ನಿರ್ದೇಶನದಲ್ಲೇ ಮೊದಲ ಚಿತ್ರ

KannadaprabhaNewsNetwork |  
Published : Sep 06, 2024, 01:04 AM ISTUpdated : Sep 06, 2024, 04:42 AM IST
ಮೋನಿಷಾ ವಿಜಯಕುಮಾರ್ | Kannada Prabha

ಸಾರಾಂಶ

ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯಕುಮಾರ್ ಅವರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರ ನಟನೆಯ ಮೊದಲ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ ಮೋನಿಷಾ ಹೇಳಿರುವ ಮಾತುಗಳು ಇಲ್ಲಿವೆ.

ಅಪ್ಪನ ನಿರ್ದೇಶನದಲ್ಲೇ ನಿಮ್ಮ ಮೊದಲ ಚಿತ್ರ ಸೆಟ್ಟೇರಿದ್ದು ಹೇಗನಿಸುತ್ತಿದೆ?

ನಾನು ಲಕ್ಕಿ. ನಿಜ ಜೀವನದಲ್ಲಿ ಮಕ್ಕಳಿಗೆ ಅಪ್ಪನೇ ಹೀರೋ. ನನ್ನ ಮೊದಲ ಚಿತ್ರವನ್ನು ನಿರ್ದೇಶಿಸುವ ಮೂಲಕ ನನ್ನ ಕನಸಿಗೂ ಅವರೇ ಸಾರಥಿಯಾಗಿದ್ದಾರೆ.

ಸಿಟಿ ಲೈಟ್ಸ್‌ ಹೆಸರು ಮತ್ತು ಫಸ್ಟ್ ಲುಕ್ ನೋಡಿದಾಗ ಏನಿಸಿತು?

ವಾವ್ಹ್‌... ಅನಿಸಿತು. ಏನೋ ವಿಶೇಷವಾದದ್ದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ. ಟೈಟಲ್‌ ನನಗೆ ತುಂಬಾ ಕನೆಕ್ಟ್‌ ಆಗಿದೆ. ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು ಸಿಟಿ. ನಟನೆ ಕಲಿತಿದ್ದು ನ್ಯೂಯಾರ್ಕ್‌ ಸಿಟಿಯಲ್ಲಿ. ಹೀಗಾಗಿ ಸಿಟಿ ಮತ್ತು ನನಗೂ ತುಂಬಾ ನಂಟು.

ಸಿಟಿ ಲೈಟ್ಸ್‌ ಕತೆ ಏನು?

ತುಂಬಾ ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿನಂತಹ ಮಹಾನಗರಕ್ಕೆ ಬರುವವರ ಸುತ್ತ ಮಾಡಿರುವ ಅಪರೂಪದ ಸ್ಟೋರಿ. ಎಲ್ಲರ ಮನಸ್ಸುಗಳಿಗೂ ತುಂಬಾ ಹತ್ತಿರ ಆಗುತ್ತದೆ.

ಕತೆ ಕೇಳಿದ ಮೇಲೆ ಅನಿಸಿದ್ದೇನು?

ನನ್ನ ಪಾತ್ರದ ಅಭಿನಯಕ್ಕೆ ತುಂಬಾ ಸ್ಕೋಪ್‌ ಇದೆ. ಜತೆಗೆ ಸವಾಲಿನ ಪಾತ್ರ ಅನಿಸಿತು. ನನ್ನ ಅಪ್ಪ ಧೈರ್ಯ ತುಂಬಿದ್ದಾರೆ. ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ.

ನೀವು ಚಿತ್ರರಂಗಕ್ಕೆ ಬರಬೇಕು ಅನಿಸಿದ್ದು ನಿಮ್ಮ ತಂದೆಯವರೂ ಚಿತ್ರರಂಗದಲ್ಲಿದ್ದಾರೆ ಎನ್ನುವ ಕಾರಣಕ್ಕಾ?

ಹಾಗೆ ಟೇಕನ್‌ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿಲ್ಲ. ನನಗೆ ಚಿಕ್ಕಂದಿನಿಂದಲೂ ಆಸಕ್ತಿ ಇತ್ತು. ನಾನೂ ಸಿನಿಮಾ ನಟಿಯಾಗಬೇಕು ಅಂತ ನನ್ನ ತಂದೆಗೆ ತುಂಬಾ ಪೀಡಿಸಿದ್ದೇನೆ. ‘ನೀನು ಓದು. ಸಿನಿಮಾ ಬೇಡ’ ಅಂತಲೇ ಅವರು ಹೇಳುತ್ತಿದ್ದರೂ. ಕೊನೆಗೂ ನಾನೇ ಅಪ್ಪನನ್ನು ಕನ್ವಿನ್ಸ್‌ ಮಾಡಿ ಚಿತ್ರರಂಗಕ್ಕೆ ಬಂದಿದ್ದೇನೆ.

ನಿಮಗೆ ನೀವು ನಟಿಯಾಗಬಹುದು ಅನ್ನೋ ವಿಶ್ವಾಸ ಬಂದಿದ್ದು ಯಾವಾಗ?

ಬೆಂಗಳೂರಿನಲ್ಲಿ ಥಿಯೇಟರ್‌ ಸ್ಟಡಿ ಮುಗಿಸಿದ ಮೇಲೆ. ಬ್ಯಾಚುಲರ್‌ ಆಫ್‌ ಥಿಯೇಟರ್‌ ಕೋರ್ಸ್‌ ಮುಗಿಸಿಕೊಂಡಿದ್ದೆ. ಥಿಯೇಟರ್‌ನಲ್ಲಿ ಸಿಕ್ಕ ಅನುಭವ ನಾನೂ ನಟಿಯಾಗಬಹುದು ಅನ್ನುವ ವಿಶ್ವಾಸ ತುಂಬಿತು. ಅದೇ ವಿಶ್ವಾಸ ನನ್ನ ತಂದೆಯನ್ನೂ ಒಪ್ಪಿಸಕ್ಕೆ ಸಾಧ್ಯವಾಯಿತು.

ನಿಮ್ಮ ತಂದೆ ನಟನೆಯ ಯಾವ ಚಿತ್ರಗಳು ನಿಮಗೆ ತುಂಬಾ ಕಾಡಿದ್ದು?

‘ದುನಿಯಾ’ ಮತ್ತು ‘ವೀರಬಾಹು’. ಈ ಚಿತ್ರಗಳಲ್ಲಿ ಅವರ ಮುಗ್ಧ ನಟನೆ ನೋಡಿ ಬೆರಗಾಗಿದ್ದೆ. ತೆರೆ ಮೇಲೆ ತಂದೆಯವರ ಪಾತ್ರ ನೋಡುವಾಗ ನನಗೇ ಗೊತ್ತಿಲ್ಲದೆ ಕಣ್ಣೀರು ಹಾಕಿದ್ದೇನೆ.

ನ್ಯೂಯಾರ್ಕ್‌ನ ಫಿಲಮ್‌ ಅಕಾಡೆಮಿಯಲ್ಲಿ ಕಲಿತಿದ್ದೇನು?

ಇದು ಒಂದು ವರ್ಷದ ಕೋರ್ಸ್‌ ಇದು. ಪ್ರತಿ ಕ್ಲಾಸ್‌ ಕೂಡ ಕ್ಯಾಮೆರಾ ಮುಂದೆಯೇ ಹೇಳಿಕೊಡುತ್ತಾರೆ. ಮೆಥೆಡ್‌ ಆ್ಯಕ್ಟಿಂಗ್‌, 13 ರೀತಿಯ ವಾಯ್ಸ್‌ ಕ್ಲಾಸ್‌, ಸ್ಟೆಂಟ್‌ ಕ್ಲಾಸ್‌, ಕ್ಯಾಮೆರಾ ಹಿಂದಿನ ಕೆಲಸಗಳನ್ನು ಅರ್ಥಪಡಿಸಲು ಫಿಲಮ್‌ ಕ್ರಾಫ್ಟ್‌, ಆನ್‌ ಸ್ಪಾಟ್‌ ಇಂಪ್ರೂವ್ ಕ್ಲಾಸ್‌... ಹೀಗೆ ಬೇರೆ ಬೇರೆ ರೀತಿಯ ತಯಾರಿಗಳನ್ನು ಮಾಡಿಸುತ್ತಾರೆ. ಇದು 2 ಸೆಮಿಸ್ಟರ್‌ಗಳಲ್ಲಿ ನಡೆಯುತ್ತದೆ.

ನಟಿಯರಾಗಿ ಅಕ್ಕ-ತಂಗಿ ಇಬ್ಬರೂ ಚಿತ್ರರಂಗಕ್ಕೆ ಬರುತ್ತಿದ್ದೀರಿ. ಮುಂದೆ ನಿಮ್ಮಬ್ಬರಲ್ಲಿ ಸ್ಪರ್ಧೆಯಾದರೆ?

ನಾನು ಮತ್ತು ನನ್ನ ಅಕ್ಕ ರೀತನ್ಯಾ ಫ್ರೆಂಡ್ಸ್‌. ಅಂಥ ಕಾಂಪಿಟೇಷನ್‌ ಬರಕ್ಕೆ ಅವಕಾಶ ಇರಲ್ಲ ಅಂದುಕೊಳ್ಳುತ್ತೇನೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌