ಹೊಸ ನಿರ್ದೇಶಕರೇ ಸ್ಟ್ರಾಂಗು ಗುರೂ

KannadaprabhaNewsNetwork |  
Published : Apr 02, 2024, 01:06 AM ISTUpdated : Apr 02, 2024, 06:51 AM IST
ಶಾಖಾಹಾರಿ | Kannada Prabha

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಕಂಟೆಂಟ್ ಸಿನಿಮಾ ಬರುತ್ತಿದೆ. ಆ ಕುರಿತ ವಿಶ್ಲೇಷಣಾತ್ಮಕ ಬರಹ.

 ಸಿನಿವಾರ್ತೆ :  ಮಲಯಾಳಂನಲ್ಲಿ ಒಳ್ಳೆಯ ಕಂಟೆಂಟ್ ಸಿನಿಮಾ ಮಾಡ್ತಿದಾರೆ ಕಣ್ರಿ ಅಂತ ಅಂತ ಕೆಲವರು ಹೇಳಿರುವುದನ್ನು ನೀವು ಕೇಳಿರಬಹುದು. ಆ ಧ್ವನಿಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಸ್ವಲ್ಪ ಅಸಹನೆ ಗುರುತಿಸಬಹುದು. ಆದರೆ ಈಗ ಕಾಲ ಬದಲಾಗಿದೆ. ಹೊಸ ನಿರ್ದೇಶಕರು ಹೊಸ ಹೊಸ ಕತೆಯ ಸಿನಿಮಾ ಮಾಡುತ್ತಿದ್ದಾರೆ. ಆದರೆ ಅದನ್ನು ಗಮನಿಸುವ, ಕೈ ಹಿಡಿದು ಮುನ್ನಡೆಸುವವರು ಇಲ್ಲವಾಗಿದೆ.

ಈ ವರ್ಷದ ಮೊದಲ 3 ತಿಂಗಳು ಮುಗಿದಿದೆ. 75ರ ಆಸುಪಾಸು ಸಿನಿಮಾಗಳು ಬಿಡುಗಡೆಯಾಗಿವೆ. ಅಂಥಾ ದೊಡ್ಡ ಯಶಸ್ಸು ಯಾರಿಗೂ ಸಿಕ್ಕಿಲ್ಲ. ಆದರೆ ಹೊಸಬರ ಕೆಲವು ಸಿನಿಮಾಗಳು ಗಮನ ಸೆಳೆಯುತ್ತಿವೆ.

ಅದರಲ್ಲಿ ಮುಖ್ಯವಾಗಿ ಚರ್ಚೆ ಆಗುತ್ತಿರುವ ಸಿನಿಮಾಗಳನ್ನೇ ನೋಡಿ, ಪ್ರತೀ ಸಿನಿಮಾದ ಕಂಟೆಂಟ್ ಕೂಡ ಭಿನ್ನ. ಅವು ಮಾಮೂಲಿ ಸಿನಿಮಾಗಳಲ್ಲ. 25ರ ಹರೆಯದ ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಸಿನಿಮಾ. ಕಡಿಮೆ ಬಜೆಟ್‌ನಲ್ಲಿ ಅಂಥಾ ಸಿನಿಮಾ ಮಾಡಬಹುದು ಅಂತ ತೋರಿಸಿದ್ದಾರೆ. ಜೊತೆಗೆ ಇಡೀ ತಂಡ ಆ ಸಿನಿಮಾವನ್ನು ಹಠ ಕಟ್ಟಿ ಜನರಿಗೆ ತೋರಿಸುತ್ತಿದ್ದಾರೆ. ಆ ಪ್ರಯೋಗ ಸ್ವಲ್ಪ ಫಲ ಕೊಟ್ಟಿದೆ. ಉತ್ಸವ್ ಗೊನವಾರ ನಿರ್ದೇಶನದ ‘ಫೋಟೋ’ ಸಿನಿಮಾ ಕೊರೋನಾ ಕಾಲದ ಒಬ್ಬ ಹುಡುಗನ ಕತೆ. ಅದೂ ತನ್ನ ಕಂಟೆಂಟ್‌ನಿಂದ ಗುರುತಿಸಿಕೊಂಡಿದೆ. ರಾಜ್‌ಗುರು ನಿರ್ದೇಶನದ ‘ಕೆರೆಬೇಟೆ’ ಮಲೆನಾಡಿನ ಸೊಗಡನ್ನು ಕಟ್ಟಿಕೊಟ್ಟ ವಿಶಿಷ್ಟತೆಯ ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆದಿದೆ.

 ಅತ್ತ ದುನಿಯಾ ಸೂರಿ ಶಿಷ್ಯ ಅಭಿ ‘ಸೋಮು ಸೌಂಡ್‌ ಇಂಜಿನಿಯರ್‌’ ಎಂಬ ಉತ್ತರ ಕರ್ನಾಟಕ ಭಾಷೆ, ಬದುಕಿನ ವಿಭಿನ್ನ ಸಿನಿಮಾ ಕೊಟ್ಟಿದ್ದಾರೆ. ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಅದರ ವಿಶಿಷ್ಟ ಗುಣದಿಂದಲೇ ಗೆದ್ದಿತ್ತು. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ‘ಕೇಸ್ ಆಫ್ ಕೊಂಡಾಣ’ ಕೂಡ ವಿಭಿನ್ನ ಕಂಟೆಂಟ್ ಆಗಿತ್ತು.ಇವುಗಳಲ್ಲಿ ಕೆಲವು ಸಿನಿಮಾಗಳನ್ನು ಪ್ರೇಕ್ಷಕರು ಸ್ವಲ್ಪ ಮಟ್ಟಿಗಾದರೂ ಕೈ ಹಿಡಿದಿದ್ದಾರೆ. ಇನ್ನು ಕೆಲವು ಸಿನಿಮಾಗಳಿಗೆ ಆ ಭಾಗ್ಯ ಸಿಕ್ಕಿಲ್ಲ. ಕಂಟೆಂಟ್ ಚೆನ್ನಾಗಿದೆ, ಆದರೆ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ.

ಅದಕ್ಕೆ ಮುಖ್ಯ ಕಾರಣ ಎರಡು. ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲರೂ ಗಮನಿಸಬೇಕಾದ ಕಾರಣಗಳೂ ಹೌದು.

1. ಟಿಕೆಟ್ ದರ

‘ಬ್ಲಿಂಕ್’ ಸಿನಿಮಾ ನಿರ್ದೇಶಕ ಶ್ರೀನಿಧಿ ಬೆಂಗಳೂರು ನೇರವಾಗಿ ಪ್ರೇಕ್ಷಕರು ಬರದೇ ಇರುವುದಕ್ಕೆ ಟಿಕೆಟ್ ದರವೇ ಕಾರಣ ಎನ್ನುತ್ತಾರೆ. ಅದು ನಿಜ ಕೂಡ. ಅಕ್ಕಪಕ್ಕದ ರಾಜ್ಯಗಳಲ್ಲಿ ಚಿತ್ರಮಂದಿರಗಳ ಟಿಕೆಟ್ ದರ ತುಂಬಾ ಕಡಿಮೆ ಇದೆ. ಆದರೆ ಇಲ್ಲಿ ಮಧ್ಯಮ ವರ್ಗಕ್ಕೆ ತುಂಬಾ ಭಾರ ಅನ್ನಿಸುವ ಟಿಕೆಟ್ ದರಗಳಿವೆ. ಹಾಗಾಗಿ ಎಷ್ಟೇ ಒಳ್ಳೆ ಕಂಟೆಂಟ್ ಬಂದರೂ ಅವರ ಬಜೆಟ್ ಅದಕ್ಕೆ ಸಾಕಾಗುವುದಿಲ್ಲ. ಜನ ಸ್ಟಾರ್ ಸಿನಿಮಾಗಾಗಿ ಕಾಯುತ್ತಾರೆ.

2. ಶೋ ಸಮಯ

ಹೊಸಬರ ಸಿನಿಮಾಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಳ್ಳೆಯ ಸಮಯಕ್ಕೆ ಶೋ ಸಿಗುವುದು ಬಹಳ ಕಷ್ಟ. ಎಲ್ಲರೂ ಈ ಬಿಸಿಯನ್ನು ಅನುಭವಿಸಿಯೇ ಇರುತ್ತಾರೆ. ಈ ಹಿಂದೆ ಜನತಾ ಥಿಯೇಟರ್ ಎಂಬ ಕಾನ್ಸೆಪ್ಟ್ ತರಬೇಕು ಎಂಬ ಮಾತುಕತೆ ನಡೆದಿತ್ತು. ಕನ್ನಡ ಸಿನಿಮಾಗಳಿಗಾಗಿಯೇ ಅಂಥದ್ದೊಂದು ಥಿಯೇಟರ್‌ಗಳು ಬರುವ ಅವಶ್ಯಕತೆ ಇದೆ. ಅದಕ್ಕಾಗಿ ಗಮನ ಹರಿಸುವವರು ಗಮನ ಹರಿಸಬೇಕಾಗಿದೆ. ಎಲ್ಲದಿದ್ದರೆ ಹೊಸ ಹೊಸ ತಂಡಗಳಿಗೆ ಅನ್ಯಾಯ ಆಗುತ್ತಲೇ ಇರುತ್ತದೆ. ಎಲ್ಲರೂ ಕಣ್ಣುಮುಚ್ಚಿ ನೋಡಿಕೊಂಡು ಕೂರಬೇಕಾಗುತ್ತದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌