;Resize=(412,232))
ರಾಯ್ಪುರ: ವಿರಾಟ್ ಕೊಹ್ಲಿ 53ನೇ, ಋತುರಾಜ್ ಗಾಯಕ್ವಾಡ್ ಸಿಡಿಸಿದ ಚೊಚ್ಚಲ ಶತಕ ವ್ಯರ್ಥವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಅಂತರದಲ್ಲಿ ಸೋಲನುಭವಿಸಿದೆ. ಬ್ಯಾಟರ್‌ಗಳು ಮಿಂಚಿದರೂ ಬೌಲರ್‌ಗಳು ಕೈಕೊಟ್ಟರು. ಇದರೊಂದಿಗೆ 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿದೆ.
ಮತ್ತೆ ಟಾಸ್ ಸೋತ ಭಾರತ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತು. ಇಬ್ಬರ ಭರ್ಜರಿ ಶತಕದಿಂದಾಗಿ ತಂಡ 5 ವಿಕೆಟ್‌ಗೆ 358 ರನ್ ಕಲೆಹಾಕಿತು. ಮೊದಲ ಪಂದ್ಯದಲ್ಲಿ 350 ರನ್ ಗುರಿಯನ್ನು ಬೆನ್ನತ್ತುವಾಗಿ ಕೊನೆಯಲ್ಲಿ ಎಡವಿದ್ದ ದ.ಆಫ್ರಿಕಾ ಈ ಬಾರಿ ತಪ್ಪು ಮಾಡಲಿಲ್ಲ. ತಂಡ 49.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಜಯಗಳಿಸಿತು.
ಆರಂಭಿಕ ಆಟಗಾರ ಏಡನ್ ಮಾರ್ಕ್‌ರಮ್(98 ಎಸೆತಕ್ಕೆ 110) ಏಕದಿನದಲ್ಲಿ 4ನೇ ಶತಕ ಸಿಡಿಸಿದರೆ, ನಾಯಕ ತೆಂಬಾ ಬವುಮಾ 46, ಮ್ಯಾಥ್ಯೂ ಬ್ರೀಟ್ಸ್‌ಕೆ 68, ಡೆವಾಲ್ಡ್ ಬ್ರೆವಿಸ್ 34 ಎಸೆತಕ್ಕೆ 54 ರನ್ ಸಿಡಿಸಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಕೊನೆಯಲ್ಲಿ ಅಬ್ಬರಿಸಿದ ಕಾರ್ಬಿನ್ ಬಾಶ್ 15 ಎಸೆತಕ್ಕೆ ಔಟಾಗದೆ 29 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ತಲಾ 70ಕ್ಕೂ ಹೆಚ್ಚು ರನ್ ನೀಡಿ ದುಬಾರಿ ಎನಿಸಿಕೊಂಡರು.
ಇದಕ್ಕೂ ಮುನ್ನ ಭಾರತ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡಿತು. ಯಶಸ್ವಿ ಜೈಸ್ವಾಲ್(22) ಮತ್ತೆ ವಿಫಲರಾದರೆ, ರೋಹಿತ್ ಶರ್ಮಾ(14) ಕಳೆದ ಪಂದ್ಯದ ಲಯ ಕಂಡುಕೊಳ್ಳಲು ವಿಫಲರಾದರು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದ ಕೊಹ್ಲಿ ಹಾಗೂ ಋತುರಾಜ್. ಇವರಿಬ್ಬರು 3ನೇ ವಿಕೆಟ್‌ಗೆ 156 ಎಸೆತಗಳಲ್ಲಿ 196 ರನ್ ಜೊತೆಯಾಟವಾಡಿದರು. ದ.ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇವರಿಬ್ಬರೂ ವೈಯಕ್ತಿಕ ಶತಕ ಸಿಡಿಸಿ ಮಿಂಚಿದರು. ಆದರೆ ಇವರಿಬ್ಬರೂ ಶತಕ ಪೂರ್ಣಗೊಳಿಸಿದ ಬೆನ್ನಲ್ಲೇ ಔಟಾದರು. ಕೊಹ್ಲಿ 93 ಎಸೆತಕ್ಕೆ 102, ಋತುರಾಜ್ 83 ಎಸೆತಕ್ಕೆ 105 ರನ್ ಗಳಿಸಿದರು. ಕರ್ನಾಟಕದ ಕೆ.ಎಲ್.ರಾಹುಲ್(ಔಟಾಗದೆ 66) ಸತತ 2ನೇ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ಸ್ಕೋರ್: ಭಾರತ 50 ಓವರಲ್ಲಿ 5 ವಿಕೆಟ್‌ಗೆ 358 (ಋತುರಾಜ್ 105, ಕೊಹ್ಲಿ 102, ರಾಹುಲ್ ಔಟಾಗದೆ 66, ಯಾನ್ಸನ್ 3-66), ದ.ಆಫ್ರಿಕಾ 49.2 ಓವರಲ್ಲಿ 362/6 (ಮಾರ್ಕ್‌ರಮ್ 110, ಬ್ರೀಟ್ಸ್‌ಕೆ 68, ಬ್ರೆವಿಸ್ 54, ಅರ್ಶ್‌ದೀಪ್ 2-54, ಪ್ರಸಿದ್ಧ್ 2-85)
ಭಾರತದಲ್ಲಿ 2ನೇ
ಗರಿಷ್ಠ ರನ್ ಚೇಸ್
ದ.ಆಫ್ರಿಕಾ 359 ರನ್ ಗುರಿ ಬೆನ್ನತ್ತಿ ಗೆದ್ದಿದ್ದು ಭಾರತದಲ್ಲಿ ಜಂಟಿ ಗರಿಷ್ಠ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 360 ರನ್ ಗುರಿ ಬೆನ್ನತ್ತಿ ಗೆದ್ದಿದ್ದು ಈಗಲೂ ದಾಖಲೆ. 2019ರಲ್ಲಿ ಭಾರತ ವಿರುದ್ಧ ಆಸೀಸ್ 359 ರನ್ ಬೆನ್ನತ್ತಿ ಜಯಗಳಿಸಿತ್ತು.