ಕನ್ನಡಪ್ರಭ ಸಿನಿವಾರ್ತೆ ಮಾ.ಆನಂದ್ ನಾಯಕನಾಗಿ ನಟಿಸಿರುವ ‘ನಾ ಕೋಳಿಕ್ಕೆ ರಂಗ’ ಸಿನಿಮಾ ನ.10ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಒಂದು ಹಾಡು ಮತ್ತು ಟ್ರೇಲರ್ ಪ್ರದರ್ಶನ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾ. ಆನಂದ್, ‘ಹಳ್ಳಿಯಲ್ಲಿ ಒಂದು ಕೋಳಿ, ರಂಗ ಮತ್ತು ತಾಯಿ ಈ ಮೂವರ ಸುತ್ತ ಸಾಗುವ ಕತೆ ಇಲ್ಲಿದೆ. ಹಾಸ್ಯ, ಭಾವುಕತೆ ಕತೆಯೇ ಹೈಲೈಟ್. ಕತೆಯಲ್ಲಿ ಮಂಡ್ಯ ಹಾಗೂ ಮೈಸೂರು ಸೊಗಡಿನ ಭಾಷೆ ಇದೆ’ ಎಂದರು. ನಿರ್ದೇಶಕ ಗೊರವಾಲೆ ಮಹೇಶ್, ‘ಮೌಢ್ಯಗಳ ಕುರಿತ ಕತೆ ಇಲ್ಲಿದೆ. ಒಂದೊಳ್ಳೆಯ ವಿಷಯವನ್ನು ಹಾಸ್ಯದ ರೂಪದಲ್ಲಿ ಹೇಳಿದ್ದೇವೆ’ ಎಂದರು. ಹಿರಿಯ ನಟಿ ಭವ್ಯಾ ನಾಯಕನ ತಾಯಿ ಪಾತ್ರ ಮಾಡಿದ್ದಾರೆ. ಹೋಟೆಲ್ ಉದ್ಯಮಿ ಸೋಮಶೇಖರ್ ಚಿತ್ರದ ನಿರ್ಮಾಪಕರು. ಅವರ ಪುತ್ರಿ ರಾಜೇಶ್ವರಿ ಚಿತ್ರದ ನಾಯಕಿ. ಗೊರವಾಲೆ ಮಹೇಶ್ ಚಿತ್ರದ ನಿರ್ದೇಶಕರು. ರಾಜು ಎಮ್ಮಿಗನೂರು ಸಂಗೀತ, ಧನಪಾಲ್ ಹಾಗೂ ಬೆಟ್ಟೇಗೌಡ ಛಾಯಾಗ್ರಹಣ ಇದೆ. ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ ನಟಿಸಿದ್ದಾರೆ.