ಮಹಾಪ್ರಭು ಪುರಿ ಜಗನ್ನಾಥರ ಮಹಾ ಮಾರ್ಗದಲ್ಲಿ

Published : Jul 16, 2026, 01:28 PM IST
Droupadi Murmu

ಸಾರಾಂಶ

ಶ್ರೀ ಜಗನ್ನಾಥನಿಗೆ ಸಮರ್ಪಿತವಾದ ಹಲವು ಪ್ರಾರ್ಥನೆಗಳು ಮತ್ತು ಸ್ತೋತ್ರಗಳು ಬಾಲ್ಯದಿಂದಲೂ ನನ್ನ ಸ್ಮರಣೆಯಲ್ಲಿವೆ. ಶಾಲೆ ಮತ್ತು ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಮಹಾಪ್ರಭು ಜಗನ್ನಾಥರ ಭಜನೆಗಳನ್ನು ಹಾಡಲು ನನಗೆ ಸಂತೋಷವಾಗುತ್ತಿತ್ತು

-ಶ್ರೀಮತಿ ದ್ರೌಪದಿ ಮುರ್ಮು, ಭಾರತದ ರಾಷ್ಟ್ರಪತಿ, ನವದೆಹಲಿ.

ಶ್ರೀ ಜಗನ್ನಾಥನಿಗೆ ಸಮರ್ಪಿತವಾದ ಹಲವು ಪ್ರಾರ್ಥನೆಗಳು ಮತ್ತು ಸ್ತೋತ್ರಗಳು ಬಾಲ್ಯದಿಂದಲೂ ನನ್ನ ಸ್ಮರಣೆಯಲ್ಲಿವೆ. ಶಾಲೆ ಮತ್ತು ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಮಹಾಪ್ರಭು ಜಗನ್ನಾಥರ ಭಜನೆಗಳನ್ನು ಹಾಡಲು ನನಗೆ ಸಂತೋಷವಾಗುತ್ತಿತ್ತು. ನಾನು ಮಹಾಪ್ರಭುವಿಗೆ ತುಂಬಾ ಹತ್ತಿರವಾಗಿದ್ದೇನೆ ಎಂದು ಅನಿಸುತ್ತಿತ್ತು. ಈಗ ನಾನು ಭಜನೆಗಳನ್ನು ಹಾಡುವುದಿಲ್ಲ. ಆದರೆ, ನಾನು ಮಹಾಪ್ರಭುಗಳನ್ನು ಸ್ಮರಿಸುತ್ತಲೇ ಇರುತ್ತೇನೆ ಮತ್ತು ಪ್ರತಿದಿನ ಅವರ ಭಜನೆಗಳನ್ನು ಗುನುಗುತ್ತೇನೆ. ನನ್ನ ಬಳಿಯೇ ಮಹಾಪ್ರಭು ಇದ್ದಾರೆ ಎಂದು ನಾನು ಸದಾ ಭಾವಿಸುತ್ತೇನೆ. ಸಂಕಟ ಬಂದಾಗ ಭಗವಂತ ನನ್ನನ್ನು ರಕ್ಷಿಸುತ್ತಾನೆ. ಭಕ್ತ ಕವಿ ಮಧುಸೂದನರಾವ್ ರಚಿಸಿದ ಹಾಡನ್ನು ಇಂದಿಗೂ ನಾನು ಗುನುಗುತ್ತೇನೆ: ‘ಮಹಾಪ್ರಭು ಹಗಲಿರುಳು ನನ್ನೊಂದಿಗೆ ಇರುತ್ತಾರೆ; ಈ ಸ್ಮರಣೆಯೊಂದಿಗೆ, ನಾನು ಸದಾ ನನ್ನ ಹೃದಯಾಂತರಾಳದಿಂದ ಆರಾಧಿಸುತ್ತೇನೆ’.

ನನಗೆ ಜಗನ್ನಾಥರ ದರ್ಶನ ಭಾಗ್ಯ:ಲೌಕಿಕ ವಿಷಯಗಳನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳುವ ವಯಸ್ಸನ್ನು ನಾನು ತಲುಪುವ ಹೊತ್ತಿಗೆ, ನಾನು ಮಹಾಪ್ರಭು ಜಗನ್ನಾಥರ ಹಿರಿಮೆಯನ್ನು ಅರಿತುಕೊಂಡಿದ್ದೆ. ನಮ್ಮ ಮನೆಯಲ್ಲಿ, ಮಹಾಪ್ರಭು ಜಗನ್ನಾಥರ ಮಹಿಮೆಯ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಿದ್ದವು. ನಮ್ಮ ಹಳ್ಳಿಯಲ್ಲೂ ಇಂತಹ ಚರ್ಚೆಗಳು ಆಗಾಗ ನಡೆಯುತ್ತಿದ್ದವು. ನಾನು ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದಾಗ, ಭಕ್ತ ಸಲ್ಬೇಗ್ ಬರೆದ ‘ಆಹೆ ನೀಲಾ ಶೈಲಾ’ ಪ್ರಾರ್ಥನೆಯನ್ನು ನಿಯಮಿತವಾಗಿ ಪಠಿಸಲಾಗುತ್ತಿತ್ತು. ನಮ್ಮ ಶಿಕ್ಷಕರು ಮಹಾಪ್ರಭು ಜಗನ್ನಾಥರ ಬಗ್ಗೆ ನಮಗೆ ತುಂಬಾ ಹೇಳುತ್ತಿದ್ದರು: ಪುರಿಯಲ್ಲಿ ಒಂದು ದೊಡ್ಡ ದೇವಾಲಯವಿದ್ದು, ಬೇರೆ ಯಾವುದೇ ದೇವಾಲಯವು ಅಷ್ಟು ಭವ್ಯವಾಗಿಲ್ಲ! 

ದೇವಾಲಯದಲ್ಲಿ, ಮಹಾಪ್ರಭು ಶ್ರೀ ಜಗನ್ನಾಥರನ್ನು ಅವರ ಸಹೋದರಿ ಸುಭದ್ರಾ ಮತ್ತು ಹಿರಿಯ ಸಹೋದರ ಬಲಭದ್ರ ಅವರೊಂದಿಗೆ ಪೂಜಿಸಲಾಗುತ್ತದೆ ಎಂದು ತಿಳಿಸುತ್ತಿದ್ದರು. ಮಹಾಪ್ರಭು ಜಗನ್ನಾಥರು ಗಾಢವಾದ ಬಣ್ಣ ಮತ್ತು ದುಂಡಾದ ಕಣ್ಣುಗಳನ್ನು ಹೊಂದಿದ್ದಾರೆ. ಸುಭದ್ರೆಯ ಮೈಬಣ್ಣ ಹಳದಿಯಾಗಿದ್ದರೆ, ಬಲಭದ್ರ ಬ್ರಹ್ಮಕಮಲದಂತೆ ಬಿಳಿ ಬಣ್ಣದವರಾಗಿದ್ದಾರೆ. ಒಮ್ಮೆ ಈ ದೇವತೆಗಳನ್ನು ನೋಡಿದರೆ, ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಗನ್ನಾಥರು ‘ಮಹಾಪ್ರಭು’, ಅವರ ಪ್ರಸಾದ ‘ಮಹಾಪ್ರಸಾದ’, ಅವರ ದೇವಾಲಯ ‘ಬಡಾ ದೇಗುಲಾ’ ಅಥವಾ ದೊಡ್ಡ ದೇವಾಲಯ, ಅವರ ಮಾರ್ಗ ‘ಬಡಾ ದಂಡ’, ಅಂದರೆ ಮಹಾ ಮಾರ್ಗ ಮತ್ತು ಅವರ ಸಮುದ್ರವು ‘ಮಹೋದಧಿ’ ಅಥವಾ ಮಹಾಸಾಗರ. ಪುರಿಯ ಪುರುಷೋತ್ತಮ ಕ್ಷೇತ್ರವು ನನ್ನ ಹುಟ್ಟೂರಾದ ಮಯೂರ್ಭಂಜ್ ಜಿಲ್ಲೆಯ ಉಪರ್ಬೇಡದಿಂದ ದೂರದಲ್ಲಿದೆ. ಪುರಿಗೆ ಭೇಟಿ ನೀಡುವ ಅವಕಾಶ ನನಗೆ ಹೇಗೆ ಸಿಗಲು ಸಾಧ್ಯ? ಎಂದುಕೊಳ್ಳುತ್ತಿದ್ದೆ. ನಾನು ಬೆಳೆದಂತೆ, ನಾನು ಭುವನೇಶ್ವರಕ್ಕೆ ಹೋಗಿ ಯುನಿಟ್ -2 ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯಾಗಿ ಸೇರಿದೆ. ನಾನು ಅಲ್ಲಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಆಗ ನನಗೆ ಪುರಿ, ಭುವನೇಶ್ವರ ಮತ್ತು ಕೊನಾರ್ಕ್‌ಗೆ ಭೇಟಿ ನೀಡುವ ಅವಕಾಶ ಲಭಿಸಿತು. ಮಹಾಪ್ರಭು ಜಗನ್ನಾಥರ ಮೊದಲ ದರ್ಶನದ ನೆನಪು ಇಂದಿಗೂ ಹಚ್ಚ ಹಸಿರಾಗಿದೆ. ಎಂತಹ ಪ್ರಭಾವ ಬೀರುವಂತಹ ದೇವಾಲಯ, ಅಂಥ ಭವ್ಯ ದೇವರ ಮೂರ್ತಿಗಳು! ಇವುಗಳನ್ನು ಎಂದಾದರೂ ಮರೆಯಲು ಸಾಧ್ಯವೇ?

ರಥಯಾತ್ರೆಯ ವೈಭವ ಅನನ್ಯ:

ಮಹಾಪ್ರಭು ಜಗನ್ನಾಥರ ರಥಯಾತ್ರೆಯನ್ನು ಯಾರಾದರೂ ಮರೆಯಲು ಸಾಧ್ಯವೇ? ಶ್ರೀ ಕ್ಷೇತ್ರದಲ್ಲಿ ವರ್ಷದ ಹನ್ನೆರಡು ತಿಂಗಳುಗಳಲ್ಲಿ ಹದಿಮೂರು ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ರಥಯಾತ್ರೆಯ ವೈಭವ ಅನನ್ಯವಾಗಿದೆ. ಮಹಾಪ್ರಭುಗಳ ದರ್ಶನಕ್ಕಾಗಿ ಭಕ್ತರು ವರ್ಷವಿಡೀ ದೇವಾಲಯಕ್ಕೆ ಬರುತ್ತಾರೆ. ಆದರೆ, ವರ್ಷಕ್ಕೊಮ್ಮೆ ಮಹಾಪ್ರಭುಗಳು ಸ್ವತಃ ದೇವಾಲಯದಿಂದ ಹೊರಬಂದು ವಿಶಾಲ ಪಥದೊಂದಿಗೆ ಗುಂಡಿಚಾ ದೇವಾಲಯಕ್ಕೆ ತೆರಳಿ ತಮ್ಮ ಭಕ್ತರಿಗೆ ದರ್ಶನ ನೀಡುತ್ತಾರೆ. ಮೂರು ಭವ್ಯವಾದ ರಥಗಳಲ್ಲಿ, ಮೂವರು ದೇವತೆಗಳು ಚಕ್ರರಾಜ ಸುದರ್ಶನನೊಂದಿಗೆ ಗುಂಡಿಚಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅವರು ಏಳು ದಿನಗಳ ಕಾಲ ಅಲ್ಲಿಯೇ ಇದ್ದು ನಂತರ ಮರಳುತ್ತಾರೆ. ಮಹಾಪ್ರಭುಗಳ ಈ ಭವ್ಯ ಉತ್ಸವ ಅನುಪಮವಾದ್ದು.

ಬಾಲ್ಯದಿಂದಲೂ ನಾನು ಮಹಾಪ್ರಭು ಜಗನ್ನಾಥರ ಭಕ್ತೆಯಾಗಿದ್ದೇನೆ. ಅವರು ಸದಾ ನನಗೆ ಅತ್ಯಂತ ಪೂಜನೀಯ ದೇವರುಗಳಾಗಿದ್ದಾರೆ. ಅವರು ನನ್ನ ಜೀವನದ ಏರಿಳಿತಗಳನ್ನು ನಿಯಂತ್ರಿಸುತ್ತಾರೆ. ಅವರು ನನ್ನ ಸಂತೋಷ ಮತ್ತು ದುಃಖಗಳ ಚಿಲುಮೆಯಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದೇನೆ. ಮಹಾಪ್ರಭು ಸದಾ ನನ್ನನ್ನು ಆ ಎಲ್ಲಾ ತೊಂದರೆಗಳಿಂದ ಪಾರುಮಾಡಿದ್ದಾರೆ. ಅಷ್ಟಕ್ಕೂ ನಾನು ಅವರ ಪುತ್ರಿಯಲ್ಲವೇ.

ಭಾರತದ ರಾಷ್ಟ್ರಪತಿ ಹುದ್ದೆಗೆ ನನ್ನ ಉಮೇದುವಾರಿಕೆಯನ್ನು ಘೋಷಿಸಿದಾಗ, ನಾನು ಮಹಾಪ್ರಭು ನಾಮವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದೆ. ನಾನು ಮಹಾಪ್ರಭುಗಳನ್ನು ಪ್ರಾರ್ಥಿಸಿದೆ, ‘ನೀವು ನನ್ನನ್ನು ಇಷ್ಟು ಎತ್ತರಕ್ಕೆ ಕರೆದೊಯ್ಯುತ್ತಿದ್ದೀರಿ. ಪ್ರತಿ ಹಂತದಲ್ಲೂ ನನಗೆ ಮಾರ್ಗದರ್ಶನ ನೀಡಿ ಮತ್ತು ಸದಾ ನನ್ನೊಂದಿಗೆ ಇರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ’. ಮಹಾಪ್ರಭು ನನ್ನ ಪ್ರಾರ್ಥನೆಯನ್ನು ಆಲಿಸುತ್ತಾರೆ. ಅವರು ಸದಾ ನನ್ನ ಪ್ರಾರ್ಥನೆಗಳಿಗೆ ಸ್ಪಂದಿಸುತ್ತಾರೆ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ನಾನು ದೆಹಲಿಯಲ್ಲಿ ಉಳಿದಿದ್ದಾಗ ರಥಯಾತ್ರೆಯ ಉತ್ಸವವನ್ನು ಆಚರಿಸಲಾಗುತ್ತಿತ್ತು. ಆದ್ದರಿಂದ, ನನಗೆ ಪುರಿಗೆ ಹೋಗಲು ಸಾಧ್ಯವಾಗಲಿಲ್ಲ. ರಥಯಾತ್ರೆಯ ದಿನ ಮುಂಜಾನೆ ದೆಹಲಿಯ ಹೌಜ್ ಖಾಸ್‌ನಲ್ಲಿರುವ ಶ್ರೀ ಜಗನ್ನಾಥ ದೇವಾಲಯಕ್ಕೆ ಹೋಗಿ ಮಹಾಪ್ರಭುಗಳ ದರ್ಶನ ಪಡೆದೆ. ನನ್ನ ಹೃದಯವು ಸಂತೋಷದಿಂದ ತುಂಬಿತ್ತು. ಅವರು ನನ್ನ ಮೇಲೆ ತಮ್ಮ ಆಶೀರ್ವಾದದ ಮಳೆ ಸುರಿಸಿದರು. ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದೆ. ನಾನು ಚುನಾವಣಾ ಪ್ರಚಾರದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದೆ. 2022ರ ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಂಸತ್ತಿನ ಸೆಂಟ್ರಲ್ ಹಾಲ್‌ಗೆ ಹೋಗುವಾಗ ನಾನು ಮಹಾಪ್ರಭು ಜಗನ್ನಾಥ್ ಅವರನ್ನು ಪ್ರಾರ್ಥಿಸುತ್ತಿದ್ದೆ. ಅವರ ಆಶೀರ್ವಾದದಿಂದ, ಸಮಾರಂಭವು ಬಹಳ ಅಚ್ಚುಕಟ್ಟಾಗಿ ನಡೆಯಿತು.

ರಾಷ್ಟ್ರಪತಿಯಾಗಿ ನನ್ನ ಉದ್ಘಾಟನಾ ಭಾಷಣದ ಸಮಯದಲ್ಲಿ, ಮಹಾಪ್ರಭು ನನ್ನೊಂದಿಗೆ ಇದ್ದಾರೆ ಎಂದು ಅನಿಸುತ್ತಿತ್ತು.

ಆದಾಗ್ಯೂ, ಮಹಾಪ್ರಭುಗಳ ದರ್ಶನ ಪಡೆಯಲು ಪುರಿಗೆ ಹೋಗಲು ನನ್ನ ಹೃದಯ ಹಂಬಲಿಸುತ್ತಿತ್ತು. ದಿನಗಳು ಉರುಳಿದವು, ನನಗೆ ಪುರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಗೂ ಈಡೇರಿತು; ಪರಮಾತ್ಮ ಅವಕಾಶ ಕೊಡದ ಹೊರತು ಯಾರಿಗಾದರೂ ದರ್ಶನ ಸಿಗುವುದಾದರೂ ಹೇಗೆ! ‘ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನನ್ನು ಕ್ಷಮಿಸು, ಮಹಾಪ್ರಭು! ಆದರೆ ದಯವಿಟ್ಟು ನನ್ನನ್ನು ಪುರಿಗೆ ಕರೆಸಿ, ನಿಮ್ಮ ದರ್ಶನವನ್ನು ನನಗೆ ನೀಡು’ ಎಂದು ನಾನು ಮೌನವಾಗಿ ಆತನನ್ನು ಪ್ರಾರ್ಥಿಸಿದೆ. ಆತ ‘ಭಾವ’ ಅಥವಾ ಭಾವನೆಗಳ ಮಹಾಪ್ರಭು. ಅವನು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರಲು ಹೇಗೆ ಸಾಧ್ಯ? ಶೀಘ್ರದಲ್ಲೇ, ಪುರಿಗೆ ಪ್ರವಾಸವನ್ನು ನಿಗದಿಪಡಿಸಲಾಯಿತು.

ಜಗ ರಕ್ಷಕನ ಮುಂದೆ ಶಿಷ್ಟಾಚಾರ ಏಕೆ?:

ಅದು 2022ರ ನವೆಂಬರ್ 10ನೇ ದಿನವಾಗಿತ್ತು. ಪುರಿಗೆ ಬಂದ ನಂತರ, ಕಾರ್ಕೇಡ್ ಶ್ರೀ ಮಂದಿರದತ್ತ ಸಾಗಿತು. ಕಾರ್ಕೇಡ್ ಪುರಿಯ ಬಡಾ ದಂಡವನ್ನು ತಲುಪುತ್ತಿದ್ದಂತೆ, ಅಸಾಧಾರಣ ಭಾವನೆ ನನ್ನನ್ನು ಆವರಿಸಿತು. ಬಡಾ ದಂಡವು ಶ್ರೀ ಜಗನ್ನಾಥನಿಗೆ ಸೇರಿದೆ. ಇಲ್ಲಿ ಯಾವುದೇ ಪ್ರೋಟೋಕಾಲ್ ಅಗತ್ಯವಿದೆಯೇ? ಪುರಿ ಎಲ್ಲಾ ಯಾತ್ರಾ ಸ್ಥಳಗಳ ರಾಜನಾದ ಕ್ಷೇತ್ರರಾಜ ಎಂದು ಪ್ರಸಿದ್ಧವಾಗಿದೆ. ಮಹಾಪ್ರಭು ದೇವತೆಗಳ ದೇವರು. ಹೆಚ್ಚಿನ ಆಲೋಚನೆಗಳಿಲ್ಲದೆ, ನಾನು ನನ್ನ ಕಾರನ್ನು ನಿಲ್ಲಿಸಿದೆ. ನನ್ನ ಕಾರು ನಿಂತಾಗ, ನನ್ನ ಹಿಂಬಾಲಿಸಿದ ಎಲ್ಲಾ ಕಾರುಗಳು ಸಹ ನಿಂತವು. ಏನಾಗುತ್ತಿದೆ ಎಂದು ಯಾರಿಗೂ ಅರ್ಥವಾಗುವ ಮೊದಲು, ನಾನು ಬಡಾ ದಂಡವಾದ ಮಹಾ ಮಾರ್ಗದ ಮೇಲೆ ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿದೆ. ಶ್ರೀ ಮಂದಿರವು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿತ್ತು. ದೇವಾಲಯದ ನೀಲ-ಚಕ್ರ ಮತ್ತು ಶಿಖರದ ಪವಿತ್ರ ಪತಿತ ಪಾವನ ಧ್ವಜದ ಮೇಲೆ ನನ್ನ ಕಣ್ಣುಗಳನ್ನು ಕೇಂದ್ರೀಕರಿಸಿ, ನಾನು ಮುಂದೆ ನಡೆಯುತ್ತಲೇ ಇದ್ದೆ.

ನಾನು ನಡೆಯುವಾಗ, ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಮಕ್ಕಳು, ಮಹಿಳೆಯರು, ಯುವಕರು ಮತ್ತು ವೃದ್ಧರತ್ತ ಕೈಮುಗಿಯುತ್ತಲೇ ಇದ್ದೆ. ನನ್ನ ಗಮನ ಮಹಾಪ್ರಭುಗಳ ಮೇಲೆ ಇತ್ತು. ನಾನು ದೇವಾಲಯದ ಸಿಂಹ-ದ್ವಾರದ ಬಳಿ ತಲುಪಿದ ಕ್ಷಣ, ನನಗೆ ಸುಮ್ಮನೆ ನಿಲ್ಲಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ನಾನು ನನ್ನನ್ನೇ ಮರೆತಿದ್ದೆ. ಪವಿತ್ರ ರಸ್ತೆಯಾದ ಮಹಾಮಾರ್ಗದ ಧೂಳಿನಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಾನು ಮಹಾಪ್ರಭುಗಳಿಗೆ ನನ್ನ ವಿನಮ್ರ ನಮನಗಳನ್ನು ಅರ್ಪಿಸಿದೆ. ನಂತರ ನಾನು ದೇವಾಲಯವನ್ನು ಪ್ರವೇಶಿಸಿದೆ.

 ಗರ್ಭಗೃಹವನ್ನು ತಲುಪಿದ ನಂತರ ಮತ್ತು ನಾಲ್ಕು ದೇವತೆಗಳ ದರ್ಶನ ಪಡೆದ ನಂತರ, ನಾನು ದೈವಿಕ ಆನಂದದಿಂದ ಮುಳುಗಿದೆ. ಮಹಾಪ್ರಭುಗಳು ಬ್ರಹ್ಮಾಂಡದ ರಕ್ಷಕರು. ಎಲ್ಲರೂ ಕೈಬಿಟ್ಟಾಗ ಕೈ ಹಿಡಿಯುವವನು ಆತ. ಇಡೀ ಜಗತ್ತಿನ ಜನರ ದುಃಖವನ್ನು ನಿವಾರಿಸಲು ಅವರು ಸದಾ ಇರುತ್ತಾರೆ. ಅದಕ್ಕಾಗಿಯೇ ಅವನ ದುಂಡಾದ ಕಣ್ಣುಗಳ ರೆಪ್ಪೆಗಳು ಎಂದಿಗೂ ಮಿಟುಕಿಸುವುದಿಲ್ಲ. ಅವನಿಗೆ ಮೇಲು-ಕೀಳು ಎಂಬ ಭೇದವಿಲ್ಲ. ಅವನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲರ ಸಮಾನತೆಯೇ ಆತನ ಮಂತ್ರ. ಮಹಾಪ್ರಭುವಿನ ಸಹಾನುಭೂತಿಯಿಂದ ಆಶೀರ್ವದಿಸಲ್ಪಟ್ಟ ನಾನು ಸಮಾಜದ ಪ್ರತಿಯೊಂದು ವರ್ಗದ ಸೇವೆಗೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ದುಂಡು ಕಣ್ಣುಗಳಿದ್ದ ಮಹಾಪ್ರಭು ಜಗನ್ನಾಥರನ್ನು ನೋಡಿ, ನಾನು ಗೌರವದಿಂದ ಕೈಮುಗಿದು ಪ್ರಾರ್ಥಿಸಿದೆ, ‘ಓ ಮಹಾಬಾಹು, ನಿಮ್ಮ ಆಶೀರ್ವಾದವು ಜನರ ಸೇವೆಗೆ ನನ್ನ ಸಮರ್ಪಣಾ ಮನೋಭಾವವನ್ನು ಶಾಶ್ವತವಾಗಿ ಉಳಿಸಿಕೊಳ್ಳಲಿ! ಓ ಕೃಪಾನಿಧಿ, ನಮ್ಮ ದೇಶಕ್ಕೆ, ಇಡೀ ಜಗತ್ತಿಗೆ ನಿಮ್ಮ ದಯಾಪರ ರಕ್ಷಣೆಯನ್ನು ನೀಡಿ.’ ಹೀಗೆ ಹೇಳುತ್ತಾ, ನಾನು ಭಕ್ತಿ-ಭಾವದಲ್ಲಿ ಮುಳುಗಿ ಹೋದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಬದರೀನಾಥ ದೇಗುಲ ಹುಂಡಿ ಲೂಟಿ : ಪ್ರಮುಖ ಆರೋಪಿ ಪ್ರಮೋದ್‌ ಸೆರೆ
ಪ್ರಜ್ವಲ್‌ ದೇವರಾಜ್ ಹೇಳಿದಂತೆ ನಡೆಯಲಿಲ್ಲ- ಬಾಕಿ ಸಂಭಾವನೆ ಚುಕ್ತಾ ಆಗಿದೆ