ಸಿಂಪಲ್ ಸುನಿ ನಿರ್ದೇಶನ, ವಿನಯ್ ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಇಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶ್ರೀಮುರಳಿ, ಯುವ ರಾಜ್‌ಕುಮಾರ್, ಧೀರೇನ್ ರಾಮ್‌ಕುಮಾರ್ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಶ್ರೀಮುರಳಿ, ‘ಈ ಸಿನಿಮಾದಲ್ಲಿ ವಿನಯ್ ಪಾತ್ರ ನಿರ್ವಹಿಸಿದ ರೀತಿ ಇಷ್ಟವಾಯ್ತು. ಪಾತ್ರವನ್ನು ಬಹಳ ತೂಕದಿಂದ, ಜವಾಬ್ದಾರಿಯಿಂದ ನಿಭಾಯಿಸಿದಂತೆ ಕಾಣುತ್ತದೆ. ಇಬ್ಬರು ನಾಯಕಿಯರು ಉತ್ತಮ ಅಭಿನಯ ತೋರಿದ್ದಾರೆ. ನಿರ್ದೇಶಕ ಸುನಿ ಅವರ ಮೇಕಿಂಗ್ ಸ್ಟೈಲ್ ಸೂಪರ್. ಸುನಿ ಸಿನಿಮಾ ಪ್ರೀತಿ, ಶ್ರದ್ಧೆ ದೊಡ್ಡದು’ ಎಂದು ಹೇಳಿದರು.ವಿನಯ್ ರಾಜ್‌ಕುಮಾರ್, ‘ಕಳೆದೊಂದು ವಾರದಿಂದ ಸಾಕಷ್ಟು ಪ್ರಚಾರ ಮಾಡಿದ್ದೇವೆ. ತುಂಬಾ ಒಳ್ಳೆ ಪ್ರತಿಕ್ರಿಯೆ ಬಂತು. ಸಾಕಷ್ಟು ಪ್ರೀತಿ ಬಂತು. ಶೂಟಿಂಗ್ ನಂತರ ಎಲ್ಲರನ್ನೂ ನೋಡುತ್ತಿದ್ದೇನೆ. ಖುಷಿಯಾಗುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದರೆ ನನಗೆ ತುಂಬಾ ಇಷ್ಟ. ಮನಸಿಗೆ ಸಾಕಷ್ಟು ಸಮಾಧಾನ ಕೊಡುತ್ತದೆ. ಖುಷಿ, ತೃಪ್ತಿ ಸಿಗುತ್ತದೆ. ಅತಿಶ್‌ಯ ಪಾತ್ರ ಬಹಳ ಖುಷಿ ಕೊಟ್ಟಿದೆ’ ಎಂದರು. ನಿರ್ದೇಶಕ ಸಿಂಪಲ್ ಸುನಿ, ‘ಒಂದು ಸರಳ ಪ್ರೇಮಕಥೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ರಿಜಿಸ್ಟರ್ ಮಾಡಿದ ಶೀರ್ಷಿಕೆ. ಇದೀಗ ಸಿನಿಮಾವಾಗಿ ನಿಮ್ಮ ಎದುರು ಬರಲಿದೆ. ನಮ್ಮನ್ನು ಬೆಂಬಲಿಸಿ’ ಎಂದು ಕೋರಿಕೊಂಡರು. ನಾಯಕಿ ಸ್ವಾತಿಷ್ಠಾ ಕೃಷ್ಣನ್, ‘ಒಂದು ಸರಳ ಪ್ರೇಮ ಕಥೆ ನನ್ನ ಮೊದಲ ಕನ್ನಡ ಸಿನಿಮಾ. ನಾನು ಪತ್ರಕರ್ತೆಯ ಪಾತ್ರ ಮಾಡಿದ್ದೇನೆ. ರಿಯಲ್ ಲೈಫ್‌ನಲ್ಲೂ ನಾನು ಪತ್ರಿಕೋದ್ಯಮಿ ವಿದ್ಯಾರ್ಥಿನಿ’ ಎಂದರು.‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಚಿತ್ರದ ಮತ್ತೊಬ್ಬ ನಾಯಕಿ. ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.