ಸುಡುವ ದಾರಿಯಲ್ಲಿ ಕಾಡುವ ನಿಜ ಬದುಕಿನ ಪಾತ್ರಗಳು

KannadaprabhaNewsNetwork |  
Published : Mar 16, 2024, 01:49 AM ISTUpdated : Mar 16, 2024, 01:28 PM IST
Photo

ಸಾರಾಂಶ

ಉತ್ಸವ್ ಗೊನವಾರ ನಿರ್ದೇಶನದ ಫೋಟೋ ಸಿನಿಮಾ ಒಂದೆರಡು ಪಾತ್ರಗಳ ಮೂಲಕ ಇಡೀ ದೇಶದ ಕತೆಯನ್ನು ತುಂಬಾ ಆಪ್ತವಾಗಿ ಹೇಳುತ್ತದೆ. ಸಿನಿಮಾ ನೋಡಿದ ಮೇಲೆ ಮಾತಿಗಿಂತ ಹೆಚ್ಚಾಗಿ ಮೌನವೇ ಆವರಿಸಿಕೊಳ್ಳುತ್ತದೆ. ಅತ್ಯಂತ ಸಹಜತೆಯಿಂದ ಕೂಡ ಈ ಚಿತ್ರ, ಲಾಕ್‌ಡೌನ್‌ ಸಮಯದಲ್ಲಿ ನೋವುಂಡ ಪ್ರತಿಯೊಬ್ಬರ ಕತೆಯಾಗುತ್ತದೆ.

ಆರ್‌. ಕೇಶವಮೂರ್ತಿ

ತಾರಾಗಣ: ವೀರೇಶ್ ಗೊನವಾರ, ಮಹಾದೇವ ಹಡಪದ, ಜಹಾಂಗೀರ್‌, ಸಂಧ್ಯಾ ಅರಕೆರೆ, ಡಿಂಗ್ರಿ ನರೇಶ್

ನಿರ್ದೇಶನ: ಉತ್ಸವ್‌ ಗೊನವಾರರೇಟಿಂಗ್‌: 

ನಮ್ಮನ್ನು ಇನ್ನಿಲ್ಲದಂತೆ ಕಾಡಿದ ಘಟನೆ, ಸನ್ನಿವೇಶ, ಸಂದರ್ಭ ಅಥವಾ ಕಾಲವನ್ನು ಮತ್ತೆ ಮತ್ತೆ ನೆನಪಿಟ್ಟುಕೊಳ್ಳುವುದಕ್ಕೆ ಸಾಧ್ಯವೇ? ಒಂದು ವೇಳೆ ಹಾಗೆ ನೆನಪಿನಲ್ಲಿ ಬಂಧಿಸಿಟ್ಟರೆ ಅದು ಏನೆಲ್ಲ ಕತೆಗಳನ್ನು ಹೇಳಬಹುದು.

ನಮ್ಮೊಳಗೆ ಎಂಥ ಭಾವನೆಗಳನ್ನು ಹುಟ್ಟಿಸಬಹುದು... ‘ಫೋಟೋ’ ಸಿನಿಮಾ ನೋಡಲು ಕೂತಾಗ ಪ್ರೇಕ್ಷಕ ಕೇಳಿಕೊಳ್ಳುವ ಪ್ರಶ್ನೆಗಳಿವು.

ಆದರೆ, ಸಿನಿಮಾ ನೋಡಿ ಮುಗಿಯುವ ಹೊತ್ತಿಗೆ ಗಾಢವಾದ ಮೌನವೊಂದು ಆವರಿಸಿಕೊಳ್ಳುತ್ತದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಕೆಲವು ಚಿತ್ರಗಳು ನೋಡುಗರಿಂದ ತುಂಬಾ ಮಾತನಾಡಿಸುತ್ತವೆ. 

ಆದರೆ, ‘ಫೋಟೋ’ ಸಿನಿಮಾ ಮಾತನಾಡಿಸುವುದಿಲ್ಲ. ‘ಸಾಧ್ಯವಾದರೆ ಒಮ್ಮೆ ನೋಡಿ’ ಎನ್ನುವ ಭಾವನೆಯನ್ನು ಸದ್ದಿಲ್ಲದೆ ದಾಟಿಸುತ್ತದೆ.

ಕೊರೋನಾ ಕಾರಣಕ್ಕೆ ಲಾಕ್‌ಡೌನ್‌ ಹೆಸರಿನಲ್ಲಿ ಇಡೀ ದೇಶ ಬಾಗಿಲು ಹಾಕಿಕೊಂಡಿತ್ತು. ಅದೇ ದೇಶದ ಹೆದ್ದಾರಿಗಳಲ್ಲಿ ಅನ್ನ, ನೀರು ಇಲ್ಲದೆ ನೂರಾರು ನೂರಾರು ಕಿಲೋಮೀಟರ್‌ ದೂರ ಸಾವಿರಾರು ಜನ ಬರಿಗಾಲಿನಲ್ಲಿ ನಡೆಯುತ್ತಿದ್ದರು. ಒಂದು ದಿನ ಎಲ್ಲರು ದೀಪ ಹಚ್ಚಿ ಬೆಳಕಿನಲ್ಲಿ ಚಪ್ಪಾಳೆ ತಟ್ಟಿದರು. 

ಅದೇ ದಿನ ನಡು ರಸ್ತೆಯಲ್ಲಿ ಒಂದು ದುರಂತ ನಡೆಯಿತು. ಈ ಘಟನೆ ಯಾರನ್ನು ಎಷ್ಟರ ಮಟ್ಟಿಗೆ ಕಾಡಿತೋ ಗೊತ್ತಿಲ್ಲ. ಆದರೆ, ನಿರ್ದೇಶಕ ಉತ್ಸವ್‌ ಗೊನವಾರನ್ನು ತುಂಬಾ ಕಾಡಿದೆ. ಈ ಅಮಾನವೀಯ ದುರಂತಕ್ಕೆ ಆತ ಫ್ರೇಮು ಹಾಕಿ ನಮ್ಮ ಮುಂದಿಟ್ಟಿದ್ದಾರೆ.

ಪುಟ್ಟ ಪುಟ್ಟ ಸಂಭಾಷಣೆಗಳು, ತೀರಾ ಸಹಜ ಎನಿಸುವ ದೃಶ್ಯಗಳ ಮೂಲಕ ಮನಸ್ಸಿಗಿಳಿಯುವ ಈ ಸಿನಿಮಾ ರಂಜಿಸುವುದಕ್ಕೆ ಕಾಡುತ್ತದೆ.

ದುರ್ಗ್ಯಾನ ಮುಗ್ಧತೆ, ಗ್ಯಾನಪ್ಪನ ಅನಾಥ ಭಾವನೆ, ತಾಯಿಯ ಸಿಟ್ಟು, ಮನೆ ಮುಂದೆ ಬೋರಲು ಬಿದ್ದಿರುವ ಖಾಲಿ ಗ್ಯಾಸ್‌ ಸಿಲಿಂಡರ್‌ ಇವೆಲ್ಲವೂ ಲಾಕ್‌ಡೌನ್‌ ದಿನಗಳ ಮತ್ತೊಂದು ಕತೆ ಹೇಳಿದರೆ, ಡೈಲಾಗ್‌ನಲ್ಲಿ ಬರುವ ವಿಧಾನಸೌಧ, ಡಿಬಾಸ್‌ ಹೆಸರುಗಳು ಉತ್ತರ ಕರ್ನಾಟಕ ಭಾಗದ ಜನರ ಮುಗ್ಧ ಪ್ರೀತಿಗೆ ಸಾಕ್ಷಿಯಾಗುತ್ತವೆ. 

ಈ ಚಿತ್ರ ಒಂದಿಬ್ಬರ ನೋವಿನ- ವ್ಯಥೆಗೆ ಸೀಮಿತವಲ್ಲ. ಇಡೀ ದೇಶ ಚಿತ್ರಣವನ್ನು ಒಂದೆರಡು ಪಾತ್ರಗಳ ಮೂಲಕ ದಾಖಲಿಸುತ್ತದೆ. ಇದು ಚಿತ್ರದ ಕಥಾ ಹೆಚ್ಚುಗಾರಿಕೆ.

ಉದ್ದಕ್ಕೆ ಚಾಚಿಕೊಂಡಿರುವ ಸುಡುವ ರಸ್ತೆಗಳು, ವಿಶಾಲವಾದ ಹೊಲ-ಗದ್ದೆಗಳನ್ನೇ ರೂಪಕಗಳನ್ನಾಗಿ ಬಳಸಿಕೊಂಡು ನೈಜತೆಯ ನೆರಳಿನಲ್ಲಿ ಸಿನಿಮಾ ಕಟ್ಟುವ ನಿರ್ದೇಶಕರ ಕನಸಿಗೆ ದಿನೇಶ್ ದಿವಾಕರನ್ ಛಾಯಾಗ್ರಹಣ ಹೆಗಲಾಗುತ್ತದೆ. 

ಬಾಯ್ಬಿಟ್ಟ ನೆಲ, ಬಿಕೋ ಎನ್ನುವ ಹೆದ್ದಾರಿ, ಒಣಗಿದ ಎಲೆಗಳು, ಶೋಕ ಗೀತೆಯಂತೆ ಬೀಸುವ ಗಾಳಿಯ ಸದ್ದು ಇವೂ ಕೂಡ ಪಾತ್ರಧಾರಿಗಳಾಗುವುದು ‘ಪೋಟೋ’ ಚಿತ್ರದ ತಾಂತ್ರಿಕತೆಗೆ ಹಿಡಿದ ಕನ್ನಡಿ. 

ದುರ್ಗ್ಯಾನಾಗಿ ವೀರೇಶ್ ಗೊನವಾರ (ವೃತ್ತಿಪರ ನಟನಲ್ಲ), ಗ್ಯಾನಪ್ಪನಾಗಿ ಮಹಾದೇವ ಹಡಪದ, ಹುಸೇನಪ್ಪನಾಗಿ ಜಹಾಂಗೀರ್‌, ತಾಯಿ ಪಾತ್ರಧಾರಿ ಸಂಧ್ಯಾ ಅರಕೆರೆ ಅವರು ತಮ್ಮ ಪಾತ್ರಗಳಲ್ಲಿ ನಟಿಸುವುದಕ್ಕಿಂತ ಜೀವಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ : ಸುದೀಪ್‌