ಸಿನಿವಾರ್ತೆ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ 294 ಕೋಟಿ ರು.ಗಳಷ್ಟು ಗಳಿಕೆ ಮಾಡಿ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಮೊದಲ ದಿನ 223.5 ಕೋಟಿ ರು.ಗಳಷ್ಟು ಕಲೆಕ್ಷನ್ ಮಾಡಿ ಅತ್ಯಧಿಕ ಗಳಿಕೆಯ ಸಿನಿಮಾ ಗುರುತಿಸಿಕೊಂಡಿದ್ದ ರಾಜಮೌಳಿ ಅವರ ‘ಆರ್‌ಆರ್‌ಆರ್’ಯ ದಾಖಲೆಯನ್ನು ಮುರಿದಿದೆ. ಪ್ರಭಾಸ್ ನಟನೆಯ ‘ಬಾಹುಬಲಿ 2’ ಮೊದಲ ದಿನ 217 ಕೋಟಿ ರು. ಗಳಿಕೆ ಮಾಡಿ ಮೂರನೇ ಸ್ಥಾನದಲ್ಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಈ ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರೀ ಮೂವಿ ಮೇಕರ್ಸ್, ‘ಭಾರತೀಯ ಸಿನಿಮಾ ಇತಿಹಾಸದಲ್ಲಿ ಪುಷ್ಪ 2 ಹೊಸ ದಾಖಲೆ ಬರೆದಿದೆ. ಮೊದಲ ದಿನ ಹಿಂದಿ ಭಾಷೆಯೊಂದರಲ್ಲೇ 72 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದಿದೆ. ಹಿಂದಿಯಲ್ಲಿ ಶಾರೂಖ್ ಖಾನ್ ನಟನೆಯ ‘ಜವಾನ್’ ದಾಖಲೆಯನ್ನೂ ‘ಪುಷ್ಪ 2’ ಮುರಿದು ಮುನ್ನುಗ್ಗಿದೆ.
ದೇಶದಲ್ಲಿ ಮೊದಲ ದಿನ ಸುಮಾರು 191 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದ್ದು, ಅತ್ಯಧಿಕ 77 ಕೋಟಿ ರು.ಗಳಷ್ಟು ಸಂಗ್ರಹ ಆಂಧ್ರ, ತೆಲಂಗಾಣಗಳಲ್ಲಾಗಿದೆ. ಈ ಪೈಕಿ ಕರ್ನಾಟಕದಲ್ಲಿ 16.50 ಕೋಟಿ ಕಲೆಕ್ಷನ್ ಮಾಡಿದ್ದು, ಗಳಿಕೆಯಲ್ಲಿ ತೆಲುಗು ರಾಜ್ಯಗಳು ಹೊರತಾಗಿ ನಂತರದ ಸ್ಥಾನದಲ್ಲಿದೆ ಎನ್ನಲಾಗಿದೆ.
ಭಾಷೆಗಳ ಪೈಕಿ ತೆಲುಗು ವರ್ಶನ್ 95 ಕೋಟಿ ರು.ಗೂ ಅಧಿಕ ಕಲೆಕ್ಷನ್ ಮಾಡಿದರೆ, ಹಿಂದಿ ವರ್ಶನ್ 67 ಕೋಟಿ ರು. ಸಂಗ್ರಹಿಸುವ ಮೂಲಕ 2ನೇ ಸ್ಥಾನದಲ್ಲಿದೆ. ಕನ್ನಡದಲ್ಲಿ 1 ಕೋಟಿ ರು.ನಷ್ಟು ಗಳಿಕೆಯಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ‘ಪುಷ್ಪ 2’ ಸಿನಿಮಾ ಅತಿ ಶೀಘ್ರ ಸಾವಿರ ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.