ಚಿತ್ರ: ರಾಮನ ಅವತಾರ
ತಾರಾಗಣ: ರಿಷಿ, ಪ್ರಣೀತಾ, ಅರುಣ್ ಸಾಗರ್, ಶುಭ್ರಾ ಅಯ್ಯಪ್ಪ, ಅನಿರುದ್ಧ ಆಚಾರ್ಯ
ರೇಟಿಂಗ್: 3ಆರ್.ಎಸ್.ಹಳ್ಳಿಯ ಲವಲವಿಕೆ, ಕರಾವಳಿಯ ಸೊಬಗು, ಮಹಾನಗರದ ಬೆರಗು, ಸ್ನೇಹದ ತಾಜಾತನ, ಪ್ರೇಮದ ಆಹ್ಲಾದತೆ, ಭವಿಷ್ಯದ ಸಂದಿಗ್ಧತೆ, ಕತೆಯ ಕುತೂಹಲ ಎಲ್ಲವೂ ಬೆರೆತು ಹೋಗಿರುವ ಸಿನಿಮಾ ಇದು. ರಾಮನ ಕತೆಯನ್ನು ಆಧುನಿಕ ಕಾಲಘಟ್ಟದಲ್ಲಿ ತಮಾಷೆ ಹಿನ್ನೆಲೆಯಲ್ಲಿ ಇಟ್ಟರೆ ಹೇಗಿರಬಹುದು ಎಂಬ ನಿರ್ದೇಶಕರ ಆಲೋಚನೆಯ ಫಲವಿದು.
ರಾಮ ಹಲವು ಊರಿನಲ್ಲಿ ಸಾಗುತ್ತಾ ತನ್ನ ಬದುಕಿನ ಸೀತೆ, ರಾವಣನನ್ನು ಭೇಟಿ ಮಾಡುವುದು ಹೇಗೆ ಎಂಬುದನ್ನು ನಿರ್ದೇಶಕರು ಭಾರಿ ಜಾಣತನದಿಂದ ಕಟ್ಟಿದ್ದಾರೆ. ಇಲ್ಲಿ ವಿಶೇಷ ಅನ್ನಿಸುವುದು ರಿಷಿ ಎಂಬ ಹುರುಪಿನ ನಟನ ಹುಮ್ಮಸ್ಸು. ತರ್ಲೆ, ತುಂಟತನದ ಜೊತೆಗೆ ಜವಾಬ್ದಾರಿ, ಒಳ್ಳೆತನ ಬೆರೆತಿರುವ ಪಾತ್ರವನ್ನು ರಿಷಿ ಲೀಲಾಜಾಲವಾಗಿ ತನ್ನದಾಗಿಸಿಕೊಂಡಿದ್ದಾರೆ. ಅದರಿಂದಲೇ ಪ್ರೇಕ್ಷಕರು ಆ ಪಾತ್ರದ ಮೂಲಕ ಪ್ರಯಾಣ ಮಾಡುತ್ತಾರೆ.ಇದೊಂದು ಹಗುರ ಸಿನಿಮಾ. ಮನರಂಜನೆ ಪ್ರಧಾನ ಗುಣ. ಯಾವುದನ್ನೂ ಭಾರವಾಗಿಸದೆ ಕತೆ ಹೇಳಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಪ್ರಣೀತಾ ತಮ್ಮ ಎಂದಿನ ನಟನಾ ಚಾತುರ್ಯ ಪ್ರದರ್ಶಿಸಿದ್ದಾರೆ. ಅರುಣ್ ಸಾಗರ್ ನಟನೆಯಲ್ಲಿ, ಮಾತಿನ ಓಘದಲ್ಲಿ ಅಬ್ಬಾ ಅನ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಇದೊಂದು ಆಸಕ್ತಿ ಕೆರಳಿಸುವ ವಿಭಿನ್ನ ಕಾನ್ಸೆಪ್ಟಿನ ಸಿನಿಮಾ.