ನಂಗೆ ಎಲ್ಲದರ ಬಗ್ಗೆಯೂ ಕುತೂಹಲ - ಕ್ರಿಯೇಟಿವಿಟಿಯೇ ವಯಸ್ಸಾಗದಂತೆ ತಡೆಯುವ ಟಾನಿಕ್ : ರಮೇಶ್‌ ಅರವಿಂದ್‌

KannadaprabhaNewsNetwork | Updated : Sep 11 2024, 05:56 AM IST

ಸಾರಾಂಶ

ಬೆಳೀತಾ ಇದ್ದಷ್ಟು, ಕಲೀತಾ ಇದ್ದಷ್ಟು ನಿಮಗೆ ವಯಸ್ಸಾಗೋದಿಲ್ಲ. ನಂಗೆ ಯಾವಾಗಲೂ ಎಲ್ಲದರ ಬಗ್ಗೆಯೂ ಕುತೂಹಲ. ಅದು ತಲೆಯನ್ನು ಸದಾ ಕ್ರಿಯೇಟಿವ್‌ ಆಗಿಟ್ಟಿರುತ್ತೆ ಅಂತಾರೆ ನಿಮ್ಮ ಪ್ರೀತಿಯ ರಮೇಶ್.

- ಹೊಸ ಗೆಟಪ್‌ನಲ್ಲಿ ಪೋಟೋಶೂಟ್‌ ಮಾಡಿಸಿಕೊಂಡಿದ್ದೀರಿ?

ಫೋಟೋಶೂಟ್‌ ಮಾಡಿಸದೇ ಬಹಳ ದಿನ ಆಗಿತ್ತು. ಹೊಸ ಲುಕ್‌ನಲ್ಲಿ ಹೇಗೆ ಕಾಣ್ತೀನಿ ಅಂತ ಚೆಕ್‌ ಮಾಡಬೇಕಿತ್ತು. - ಹೊಸ ಸಿನಿಮಾಗಾಗಿಯಾ?

ಹಾಗೂ ಅಂದುಕೊಳ್ಳಬಹುದು. - ನಿಮ್ಮ ವಯಸ್ಸು ಎಲ್ಲಿ ನಿಂತಿದೆ?

ಇದನ್ನು ಅವರವರ ದೃಷ್ಟಿಗೆ ಬಿಟ್ಟಿದ್ದೇನೆ. ಆದಷ್ಟು ನಿಮ್ಮ ಕಣ್ಣಲ್ಲಿ ನನ್ನನ್ನು ಕಡಿಮೆ ವಯಸ್ಸಲ್ಲೇ ನಿಲ್ಲಿಸಿಬಿಡಿ! ಎಮರ್ಸನ್‌ ಹೇಳಿರೋ ಮಾತು ‘ಆ್ಯಸ್‌ ಲಾಂಗ್‌ ಆ್ಯಸ್‌ ಯೂ ಆರ್‌ ಗ್ರೋಯಿಂಗ್‌, ಯೂ ನೆವರ್‌ ಗ್ರೋ ಓಲ್ಡ್‌’ . ಅಂದರೆ ನೀವು ಬೆಳೀತಾ ಇದ್ದಷ್ಟು, ಕಲೀತಾ ಇದ್ದಷ್ಟು ನಿಮಗೆ ವಯಸ್ಸಾಗೋದಿಲ್ಲ. ನಂಗೆ ಯಾವಾಗಲೂ ಎಲ್ಲದರ ಬಗ್ಗೆಯೂ ಕುತೂಹಲ. ಅದು ತಲೆಯನ್ನು ಸದಾ ಕ್ರಿಯೇಟಿವ್‌ ಆಗಿಟ್ಟಿರುತ್ತೆ. ಒಟ್ಟಾರೆ ಕ್ರಿಯೇಟಿವ್‌ ಆಗಿರಬೇಕ್ರೀ.. ಅದುವೇ ಬಹಳ ದೊಡ್ಡ ತೃಪ್ತಿ.

- ಬರ್ತ್‌ಡೇಗೆ ಸಾಲು ಸಾಲು ಸಿನಿಮಾಗಳ ಪೋಸ್ಟರ್‌ ಬಿಡುಗಡೆಯಾಗಿದೆ..

ಹೌದು, ಭೈರಾದೇವಿ ಇನ್ನೇನು ರಿಲೀಸ್‌ ಆಗುತ್ತೆ. ಅದಾಗಿ ದೈಜಿ, ಯುವರ್‌ ಸಿನ್ಸಿಯರ್ಲೀ ರಾಮ್‌ ಶೂಟ್‌ ಮಾಡ್ಬೇಕಿದೆ. ಕೆಡಿ ಆಲ್‌ಮೋಸ್ಟ್ ಮುಗಿದಿದೆ, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಈ ನಾಲ್ಕು ಸಿನಿಮಾಗಳೂ ನನ್ನ ಮಾಮೂಲಿ ಸಿನಿಮಾಗಳಿಗಿಂತ ಹೈ ಬಜೆಟ್‌ ಚಿತ್ರಗಳು. ಇದರ ಕ್ಯಾನ್ವಾಸ್‌ ಸಾಕಷ್ಟು ದೊಡ್ಡದು. ಜೊತೆಗೆ ಒಳ್ಳೆಯ ಕಾಂಬಿನೇಶನ್ಸ್‌ ಇದೆ.

- ಭೈರಾದೇವಿಯಲ್ಲಿ ಆ್ಯಕ್ಷನ್‌ ಪಾತ್ರವಾ?

ಇಲ್ಲ. ಖಡಕ್ ಪೊಲೀಸ್‌ ಆಫೀಸರ್‌ ಪಾತ್ರ. ಆದರೆ ಆ್ಯಕ್ಷನ್‌ ಅಲ್ಲ. ಇದೊಂದು ಹಾರರ್‌ ಸಿನಿಮಾ. ಇದರಲ್ಲಿ ನನ್ನ ಪಾತ್ರ ಸ್ನೇಹಲೋಕ ಸಿನಿಮಾದ ಪಾತ್ರದಂತೆ. ಉದಾಹರಣೆಗೆ ನಮ್ಮ ಮನೆಯ ಹೆಣ್ಣುಮಕ್ಕಳನ್ನು ಬಹಳ ಮುದ್ದಾಗಿ ಬೆಳೆಸಿರ್ತೀವಿ. ಅವರು ಇನ್ನೊಂದು ಮನೆಗೆ ಹೋದಾಗ ಅಲ್ಲೂ ಎಲ್ಲವೂ ಚೆನ್ನಾಗಿರಬೇಕು, ಯಾವುದೂ ತಪ್ಪಾಗಬಾರದು ಅಂತ ಬಯಸ್ತೀವಿ. ಆ ಥರದ ಕಾಳಜಿ ಇರುವ ಪಾತ್ರ. ಬಹಳ ಇಂಟರೆಸ್ಟಿಂಗ್‌ ಆಗಿದೆ.

- ಕೆರಿಯರ್‌ ಗ್ರಾಫ್‌ ಬಗ್ಗೆ ತೃಪ್ತಿ?

ಖಂಡಿತಾ ಇದೆ. ನನ್ನ ಅಪ್ಪ ಸುರ ಸುಂದರಾಂಗ. ಬದುಕಲ್ಲಿ ಅವರಷ್ಟು ಹ್ಯಾಂಡ್‌ಸಮ್‌ ಆಗಿರುವವರನ್ನು ನೋಡಿದ್ದೀನಿ. ಅವರು ಬಹಳ ಶಾರ್ಪ್‌. ಅಷ್ಟು ಶಾರ್ಪ್‌ ಇರುವವರನ್ನೂ ನೋಡಿದ್ದೀನಿ. ಆದರೆ ನಮ್ಮ ಅಪ್ಪನಷ್ಟು ಸಿನ್ಸಿಯರ್‌ ಆಗಿರುವ ವ್ಯಕ್ತಿಯನ್ನು ಈವರೆಗೆ ನೋಡಿಲ್ಲ. ಅಪ್ಪನ ಆ ಗುಣವನ್ನು ನಾನೂ ಅಳವಡಿಸಿಕೊಂಡಿದ್ದೇನೆ. ಅದು 10 ಕೋಟಿ ಸಿನಿಮಾ ಇರಲಿ, ನೂರು ಕೋಟಿಯ ಚಿತ್ರವೇ ಆಗಿರಲಿ, ಸಮಾನ ಶ್ರಮ ಹಾಕ್ತೀನಿ. ಇದು ದೊಡ್ಡದು, ಇದು ಚಿಕ್ಕದು ಅಂತೆಲ್ಲ ನೋಡೋದಿಲ್ಲ. ಅಮ್ಮ ತಾಳ್ಮೆ ಮತ್ತು ತೃಪ್ತಿಯ ಶಿಖರ. ಅಮ್ಮನಿಂದ ನನಗೆ ಈ ಸ್ವಭಾವ ಬಂದಿದೆ. ಈ ಕಾಂಬಿನೇಶನ್ನೇ ಇಷ್ಟು ವರ್ಷಗಳ ಕಾಲ ನನ್ನನ್ನು ಸಿನಿಮಾರಂಗದಲ್ಲಿ ಬೆಳೆಸುತ್ತಾ ಬಂದಿದೆ. ಹಾಗಾಗಿ ಬಹಳ ಖುಷಿ ಇದೆ.

Share this article