ಸಾಹಿತ್ಯ, ಅಂಬೇಡ್ಕರ್‌, ಸಂವಿಧಾನದ ಓದು ನನ್ನ ಬದುಕಿನ ನಡೆ ಬದಲಿಸುತ್ತಿದೆ : ದುನಿಯಾ ವಿಜಯ್‌

Published : Jan 19, 2026, 02:33 PM IST
Duniya Vijay

ಸಾರಾಂಶ

ದುನಿಯಾ ವಿಜಯ್‌ ತಮ್ಮ ಹುಟ್ಟುಹಬ್ಬವನ್ನು ಎರಡು ದಿನ ಮೊದಲೇ (ಜ.18) ಅಭಿಮಾನಿಗಳ ಜೊತೆಗೆ ನಂದಿ ಲಿಂಕ್ಸ್‌ ಗ್ರೌಡ್‌ನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಾಳೆ (ಜ.20) ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ವಿಜಯ್‌ ಸಂದರ್ಶನ.

 ಆರ್. ಕೇಶವಮೂರ್ತಿ

ನೀವು ಪ್ರತಿ ಹುಟ್ಟುಹಬ್ಬಕ್ಕೆ ಮಿಸ್‌ ಮಾಡದೆ ಮಾಡುತ್ತಿರುವ ಕೆಲಸಗಳೇನು?

ತಮ್ಮ ಪ್ರೀತಿ, ಅಭಿಮಾನ, ಸಮಯ, ಹಣ ಎಲ್ಲವನ್ನೂ ಕೊಟ್ಟು ಜೀವನ ಪರ್ಯಂತವಾಗಿ ನಮ್ಮನ್ನು ಬೆಳೆಸುವ ಅಭಿಮಾನಿಗಳನ್ನು ಭೇಟಿ ಮಾಡಿ, ಅವರ ಜೊತೆ ಊಟ ಮಾಡೋದು..

ಜನ್ಮದಿನಾಚರಣೆಯಲ್ಲಿ ಏನೆಲ್ಲ ವಿಶೇಷತೆಗಳಿವೆ?

ಈ ಬಾರಿ ‘ಅಭಿಮಾನಿಗಳ ಲ್ಯಾಂಡ್‌ ಲ್ಯಾರ್ಡ್‌ ಉತ್ಸವ’. ಅಂದರೆ ಅಭಿಮಾನಿಗಳಿಂದಲೇ ‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿಸಿದ್ದೇನೆ.

ಇತ್ತೀಚೆಗೆ ತುಂಬಾ ಪುಸ್ತಕ ಓದಕ್ಕೆ ಶುರು ಮಾಡಿದ್ದೀರಂತೆ. ಓದಬೇಕು ಅನಿಸಿದ್ದೇಕೆ?

ನಿರ್ದೇಶಕನಕ್ಕೆ ಬಂದಾಗ ‘ಅಯ್ಯೋ ನಾನು ಹೆಚ್ಚು ಶಿಕ್ಷಣ ಪಡೆದುಕೊಂಡಿಲ್ಲ’ ಅಂತ ತುಂಬಾ ಕಾಡಿತು. ಮುಖ್ಯವಾಗಿ ನಾನು ಮಾಡದೆ ಇರುವ ತಪ್ಪಿಗೆ ಎರಡು ಸುಳ್ಳು ಕೇಸುಗಳು ನನ್ನ ಮೇಲೆ ಹಾಕಿದರು. ಯಾಕೆ ಹೀಗೆ ಎನ್ನುವ ಪ್ರಶ್ನೆ ಮಾಡಿದಾಗ ಸಂವಿಧಾನ ಓದಲು ಶುರು ಮಾಡಿದೆ. ನಾನು ಅಮಾಯಕ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಅಮಾಯಕರಿಗೆ ಎಷ್ಟು ಅನ್ಯಾಯ ಆಗುತ್ತಿದೆ ಎಂದು ಸಂವಿಧಾನ ಓದಲಾರಂಭಿಸಿದಾಗ ಅರ್ಥ ಆಯಿತು. ಎರಡು ಸುಳ್ಳು ಪ್ರಕರಣಗಳು, ನಾನು ಹೆಚ್ಚು ಓದಿಲ್ಲ ಎನ್ನುವ ಕೊರತೆಯೇ ನನ್ನನ್ನು ಸಾಹಿತ್ಯದ ಕಡೆಗೆ ಸೆಳೆಯಿತು.

ಯಾರು ಮತ್ತು ಯಾವ ಪುಸ್ತಕಗಳು ಈಗ ನಿಮ್ಮ ಓದಿನ ಆದ್ಯತೆಗಳಾಗಿವೆ?

ಪತ್ರಿಕೆಗಳು, ಸಣ್ಣ ಕತೆಗಳು, ಕಡಿಮೆ ಪುಟಗಳ ಪುಸ್ತಕಗಳಿಂದ ಶುರುವಾಗಿ ಯಾವಾಗ ಸಂವಿಧಾನ ಓದಕ್ಕೆ ಶುರು ಮಾಡಿದ್ನೋ ಆಗ ಬಾಬಾ ಸಾಹೇಬ್‌ ಡಾ ಬಿ.ಆರ್‌.ಅಂಬೇಡ್ಕರ್‌ ಬಗ್ಗೆ ಓದಬೇಕು ಅನಿಸಿತು. ಬಾಬಾ ಸಾಹೇಬರ ಬಗ್ಗೆ ತಿಳ್ಕೊಳ್ಳುತ್ತಾ ಹೋದೆ. ಅವರು ನನಗೆ ಹೆಚ್ಚು ಇಷ್ಟ ಆಗ್ತಾ ಹೋದರು. ರೈಟ್‌ ಫಾರ್ ಈಕ್ವಾಲಿಟಿ, ಸಮಾನತೆ, ಶೋಷಣೆ ಇತ್ಯಾದಿಗಳು ಅರ್ಥ ಮಾಡಿಸಿದ್ದು ಡಾ ಬಿ.ಆರ್‌.ಅಂಬೇಡ್ಕರ್‌ ಪುಸ್ತಕಗಳು. ಅಬ್ಬಾ ಅಂಬೇಡ್ಕರ್ ಎಂಥ ವ್ಯಕ್ತಿ, ವ್ಯಕ್ತಿತ್ವ ಅನಿಸಕ್ಕೆ ಶುರುವಾಯಿತು. ‘ಜೈ ಭೀಮ್‌’ ಅಂತ ಈಗೀಗ ನಾನು ಹೇಳುತ್ತೇನೆ, ಮೊದಲು ಹೇಳುತ್ತಿರಲಿಲ್ಲ. ಆಗ ನಾನು ಓದಿರಲಿಲ್ಲ. ಆ ಪದಗಳ ಅರ್ಥ ಗೊತ್ತಿರಲಿಲ್ಲ. ಈಗ ಗೊತ್ತಾಗಿದೆ. ಹೇಳುತ್ತಿದ್ದೇನೆ. ನನ್ನ ಆಲೋಚನೆಗಳನ್ನು ವಿಸ್ತರಿಸುತ್ತಿರುವ ಡಾ ಬಿ.ಆರ್‌.ಅಂಬೇಡ್ಕರ್‌ ಬಗೆಗಿನ ಓದು ನನ್ನ ಆದ್ಯತೆ ಆಗಿದೆ.

ಬದುಕಿನ ಫಿಲಾಸಫಿಗಳೇನು?

ಸಿಂಪಲ್‌ ಲೀವಿಂಗ್‌ ಹೈ ಥಿಂಕಿಂಗ್‌ ಅನ್ನೋದು ನನ್ನ ಜೀವನದ ಫಿಲಾಸಫಿ. ವಿಚಾರ ಇಲ್ಲದ ಜಾಗದಲ್ಲಿ ನಾನಿರೋದು ವ್ಯರ್ಥ ಅನ್ನೋದು ಅರ್ಥ ಮಾಡಿಕೊಂಡಿದ್ದೇನೆ. ಕಲಿತಾ, ತಿದ್ದಿಕೊಳ್ಳುತ್ತಾ ಹೋಗೋದೆ ಜೀವನ. ಸಾಮಾನ್ಯನಾಗಿರಬೇಕು, ದೊಡ್ಡ ಕನಸುಗಳನ್ನು ಕಾಣಬೇಕು.

ನಿಮಗೆ ತಿರುಗಾಟ ಅಂದ್ರೆ ಇಷ್ಟ. ಯಾವ ಸಂದರ್ಭದಲ್ಲಿ ನಿಮ್ಮನ್ನು ಈ ತಿರುಗಾಟ ಎಳೆಯುತ್ತೆ?

ಬದುಕಿನ ಜಂಜಾಟಗಳಿಂದ ಸಣ್ಣ ವಿರಾಮ ಬೇಕು ಅನಿಸಿದಾಗ. ಒತ್ತಡಗಳಿಂದ ಒಂದಿಷ್ಟು ಗಂಟೆಗಳ ಕಾಲವಾದರೂ ದೂರ ಆಗಬೇಕು ಅನಿಸಿದಾಗ. ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಈ ತಿರುಗಾಟ ಮುಖ್ಯ. ನನಗೆ ನೀವು ಒಂದು ಕೋಟಿ ರೂಪಾಯಿ ಕೊಟ್ಟು ವಿದೇಶಕ್ಕೆ ಹೋಗಿ ಅಂದರೆ ನಾನು ಸೀದಾ ಕಾಡಿಗೆ ಹೋಗುತ್ತೇನೆ. ಕಾಡು, ನೀರು, ಪ್ರಾಣಿಗಳು ಜಗತ್ತು ಯಾಕೆ ನನಗೆ ಇಷ್ಟ ಅಂದರೆ ನಮ್ಮ ಮೂಲ ಅದೇ ಅಲ್ಲವೇ!

ಸಲಗ, ಭೀಮ, ಲ್ಯಾಂಡ್‌ ಲಾರ್ಡ್‌, ಸಿಟಿ ಲೈಟ್ಸ್‌... ಎಲ್ಲದರಲ್ಲೂ ಕಾಮನ್‌ ಪಾಯಿಂಟ್‌ ಕತ್ತಲು. ನಿಮ್ಮನ್ನು ಡಾರ್ಕ್‌ ಲೋಕ ಯಾಕೆ ಹೆಚ್ಚು ಆಕರ್ಷಿಸುತ್ತದೆ?

ಬೆಳಕಿಗೆ ಬರೋಣ ಅಂತ ಪ್ರಯತ್ನಿಸಿದಾಗಲೆಲ್ಲ ಕತ್ತಲಿಗೇ ತಳ್ಳುತ್ತಿದ್ದಾರೆ. ‘ನೀನು ಇದ್ದಲ್ಲಿಯೇ ಇರು’ ಎಂದಾಗ ಅಲ್ಲೊಂದು ಊರು, ಜನ, ಆಚರಣೆ, ನೋವು- ನಲಿವು, ಸಂಭ್ರಮ, ಪರಂಪರೆ ಇದೆ ಅರ್ಥ ಮಾಡಿಕೊಂಡೆ. ನೀವು ಎಲ್ಲಿಗೆ ನನ್ನಂಥವರನ್ನು ತಳ್ಳುತ್ತಿರೋ ಅಲ್ಲೇ ನಿಂತು ಕತೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಕತ್ತಲಿಗೂ ಒಂದು ರೆಪ್ರೆಸೆಂಟ್‌ ಬೇಕು ಅಲ್ಲವೇ? ‘ಕತ್ತಲು’- ‘ನನ್ನಂಥವನು’ ಅಂದರೇನು ಅಂತ ಅವರವರ ಊಹೆ, ಅರ್ಥ, ವ್ಯಾಖ್ಯಾನಕ್ಕೆ ಬಿಟ್ಟಿದ್ದೇನೆ.

‘ಲ್ಯಾಂಡ್‌ ಲಾರ್ಡ್‌’ ಚಿತ್ರದ ಕುರಿತು 5 ಕುತೂಹಲಕಾರಿ ಅಂಶಗಳೇನು?

ಮಣ್ಣಿನ ಕತೆ, ಸಮಾನತೆಯನ್ನು ಹೇಳುತ್ತದೆ, ಹಳ್ಳಿ ಹಳ್ಳಿಗೂ ಸಂವಿಧಾನ ಮುಖ್ಯ ಮತ್ತು ಅಗತ್ಯವೇನು ಅಂತ ಅರ್ಥ ಮಾಡಿಸುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಬಹುಸಂಖ್ಯಾತರ ಜೀವನದ ಸಂಘರ್ಷ ಇದೆ. ಕೋಲಾರ ಮಣ್ಣಿನ ಭಾಷೆ ಇದೆ. ನನ್ನದೇ ಭಾಷೆಗೆ ಮರಳಿದಂತೆ ಅನಿಸಿತು. ನಾವೇನಾದರು ಕೇಳುತ್ತಿದ್ದೇವೆ ಅಂದರೆ ಅದು ಯಾರೋ ಕೊಟ್ಟ ದಾನವೋ, ಭಿಕ್ಷೆಯೋ ಅಲ್ಲ. ಸಂವಿಧಾನ ಕೊಟ್ಟಿರುವ ಹಕ್ಕು... ಇದೆಲ್ಲವೂ ನಿರ್ದೇಶಕ ಜಡೇಶ್‌ ಅಚ್ಚುಕಟ್ಟಾಗಿ ಸಿನಿಮಾ ಆಗಿ ರೂಪಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಗಿಲ್ಲಿ ನಟಗೆ ಬಿಗ್‌ಬಾಸ್‌ 12ನೇ ಸೀಸನ್‌ ಕಿರೀಟ
ಬಾಲಿವುಡ್‌ನಲ್ಲಿ ಕೋಮುತಾರತಮ್ಯ- 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ : ರೆಹಮಾನ್‌