400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಸಾಹುಕಾರ್‌ ಜಾನಕಿ ನೆನಪು

Published : Aug 22, 2026, 11:45 AM IST
Sowcar Janaki

ಸಾರಾಂಶ

ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಸಾಹುಕಾರ್‌ ಜಾನಕಿ ಅವರು ನಿಧನರಾಗಿದ್ದಾರೆ. 1954ರಲ್ಲಿ ಮೂಡಿ ಬಂದ ‘ದೇವಕನ್ನಿಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಬಂದ ಅವರಿಗೆ ಅಕ್ಷರ ನಮನ.

ಸಿನಿವಾರ್ತೆ

ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಸಾಹುಕಾರ್‌ ಜಾನಕಿ ಅವರು ನಿಧನರಾಗಿದ್ದಾರೆ. 1954ರಲ್ಲಿ ಮೂಡಿ ಬಂದ ‘ದೇವಕನ್ನಿಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಬಂದ ಅವರಿಗೆ ಅಕ್ಷರ ನಮನ.

ನನ್ನ ತಾಯಿ ಸಾಹೇಬ ನೋಡಿ ಮೆಚ್ಚಿದ್ದರು: ಜಯಮಾಲ

ನಾನು ಸಾಹುಕಾರ್‌ ಜಾನಕಿ ಅವರ ಜೊತೆಗೆ ನಟಿಸಲಿಲ್ಲ. ಆದರೆ, ಅವರೊಂದಿಗೆ ನಾನು ಉತ್ತಮ ಒಡನಾಟ ಇಟ್ಟುಕೊಂಡಿದ್ದೆ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅವರನ್ನು ನಾವು ಆಹ್ವಾನಿಸುತ್ತಿದ್ದೆವು. ಅವರೂ ಕೂಡ ಪ್ರೀತಿಯಿಂದ ಬರುತ್ತಿದ್ದರು. ತಮ್ಮ ಸೋದರಿ ಕೃಷ್ಣ ಕುಮಾರಿ ಜೊತೆಗೆ ನೆಲೆಸಿದ್ದ ಸಾಹುಕಾರ್‌ ಜಾನಕಿ ಅವರು ಸಾಯಿಬಾಬಾ ಭಕ್ತೆಯಾಗಿದ್ದರು. ಮನೆಗೆ ಯಾರೇ ಹೋದರೂ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದರು. ಭಾರತದ ಅಗ್ರ ನಾಯಕ ನಟರ ಜೊತೆಗೆ ನಟಿಸಿದ್ದ ಸಾಹುಕಾರ್‌ ಜಾನಕಿ ಅವರು, ನನ್ನ ‘ತಾಯಿ ಸಾಹೇಬ’ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ್ದರು. ನಾನು ಅವರನ್ನು ‘ಅಮ್ಮ’ ಅಂತಲೇ ಕರೆಯುತ್ತಿದ್ದೆ.

ಅವರು ನನಗೆ ಹೇಳಿದ ಕೆಲವು ಮಾತುಗಳು ಮರೆಯಲಾರೆ. ‘ಜಯಮಾಲ ಜೀವನದಲ್ಲಿ ಏನೇ ಮಾಡು, ಆದರೆ ಬದುಕಿದ್ದಾಗಲೇ ಮಕ್ಕಳಿಗೆ ಆಸ್ತಿಗಳನ್ನು ಡಿವೈಡ್ ಮಾಡಬಾರದು. ನಾವು ಸತ್ತ ಮೇಲೆ ಅವರೇ ಮಾಡಿಕೊಳ್ಳಬೇಕು’ ಎಂದಿದ್ದರು. ಅಂದರೆ ವಯಸ್ಸಾದ ಮೇಲೆ ಆಸ್ತಿ ಮಕ್ಕಳಿಗೆ ಕೊಟ್ಟು ಅವರಿಂದ ದೂರ ಇರಬಾರದು ಅನ್ನೋ ಯೋಚನೆ ಅವರದ್ದು. ‘ತಡವಾದರೂ ಪರ್ವಾಗಿಲ್ಲ, ನಾನು ಸಾಯಕ್ಕೂ ಮೊದಲೇ ದೇವರ ಪ್ರಸಾದಂತೆ ಬಂತಲ್ಲ’ ಎಂದು ಹೇಳಿ ಸಾಹುಕಾರ್‌ ಜಾನಕಿ ಅವರು ಮನಸಾರೆ ಸಂಭ್ರಮಿಸಿದ್ದು ಪದ್ಮಶ್ರೀ ಪ್ರಶಸ್ತಿ ಬಂದಾಗ.

ಕತೆ ಕೇಳಿ ನಕ್ಕರು, ಡ್ಯಾನ್ಸ್‌ ಮಾಡ್ಬೇಕೆಂದಾಗ ನಾಚಿಕೊಂಡ್ರು: ಕೋಮಲ್‌

ನನ್ನ ನಟನೆಯ ‘ಪುಂಗಿದಾಸ’ ಚಿತ್ರದಲ್ಲಿ ಸಾಹುಕಾರ್‌ ಜಾನಕಿ ಹಾಗೂ ಸುದರ್ಶನ್‌ ಜೋಡಿಯಾಗಿ ನಟಿಸಿದ್ದರು. ನಾನೇ ನಿರ್ದೇಶಕರನ್ನು ಜಾನಕಮ್ಮ ಮನೆಗೆ ಕರೆದುಕೊಂಡು ಹೋಗಿ ಕತೆ ಹೇಳಿಸಿದ್ದೆ. ಕತೆ ಕೇಳಿ ತುಂಬಾ ನಕ್ಕರು. ‘ಕಾಮಿಡಿ ಎಷ್ಟು ಚೆನ್ನಾಗಿದಿಯೋ’ ಎಂದು ಮೆಚ್ಚಿಕೊಂಡರು. ‘ಈ ಚಿತ್ರದಲ್ಲಿ ನನಗೆ ಯಾರು ಜೋಡಿ’ ಅಂತ ಕೇಳಿದರು. ನಾನು ಸುದರ್ಶನ್‌ ಅವರ ಹೆಸರು ಹೇಳಿದಾಗ, ‘ಅಯ್ಯೋ ಅವನು ನನಗಿಂತ ಚಿಕ್ಕವನು ಕಣೋ’ ಎಂದರು. ನಾನು ಜಾನಕಿ ಅವರನ್ನು ಮೇಡಮ್‌ ಅಂತ ಕರೆದಾಗ, ‘ಅಮ್ಮ ಅಂತ ಕರೀರಿ ಸಾಕು’ ಎಂದ ಮಹಾನ್‌ ತಾಯಿ ಗುಣದ ನಟಿ ಅವರು.

ಈ ಚಿತ್ರಕ್ಕಾಗಿ 30 ದಿನ ಡೇಟ್ ಕೊಟ್ಟಿದ್ದರು. ಸಂಭಾವನೆ ವಿಚಾರ ಕೇಳಿದರೆ, ‘ನಾನು ಹಣಕ್ಕಾಗಿ ಈ ಚಿತ್ರದಲ್ಲಿ ಮಾಡುತ್ತಿಲ್ಲವೋ. ಕತೆ ಇಷ್ಟವಾಗಿ ಮಾಡುತ್ತಿದ್ದೇನೆ’ ಎಂದಿದ್ದರು. ಅವರು 30 ದಿನಕ್ಕೆ ತೆಗೆದುಕೊಂಡಿದ್ದು 1.5 ಲಕ್ಷ ರುಪಾಯಿ ಮಾತ್ರ. ನನಗೆ ಸೀಗಡಿ ಮೀನು ಇಷ್ಟ ಎಂದು ಗೊತ್ತಾಗಿ ಜಾನಕಮ್ಮ ಅವರೇ ಮನೆಯಿಂದ ಸೀಗಡಿ ಅಡುಗೆ ಮಾಡಿಕೊಂಡು ಬರುತ್ತಿದ್ದರು. ಚಿತ್ರರಂಗದ ದೇವತೆ ಜೊತೆಗೆ ತೆರೆ ಹಂಚಿಕೊಂಡ ಭಾಗ್ಯವಂತ ನಾನು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ
ನನ್ನ ಸಂಭಾವನೆ 50 ಕೋಟಿ ರೂ.ಗೂ ಹೆಚ್ಚು : ಯಶ್‌