ನಟಿ ಹಾಗೂ ಕಿರುತೆರೆ ನಿರೂಪಕಿ ಅನುಪಮಾ ಗೌಡ ಅವರು ಆ್ಯಂಕರಿಂಗ್‌ನಿಂದ ದೂರವಾಗುವ ನಿರ್ಧಾರ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗಳಾಗಿದೆ. ಈ ಹಿನ್ನೆಲೆಯಲ್ಲಿ ಅನುಪಮಾ ಜತೆ ಮಾತುಕತೆ.
ಆರ್. ಕೇಶವಮೂರ್ತಿ
ನಿರೂಪಣೆಯಿಂದ ದೂರವಾಗಬೇಕೆಂಬ ನಿರ್ಧಾರಕ್ಕೆ ಕಾರಣ ಏನು?
ನಾನು ಹೋಸ್ಟ್ ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು. ಮನಸ್ಸಿಗೆ ತೃಪ್ತಿ ಕೊಡದ ಕೆಲಸ ಬೇಡವೆನಿಸಿ ಈ ನಿರ್ಧಾರ ತೆಗೆದುಕೊಂಡೆ.
ಆ್ಯಂಕರಿಂಗ್‌ಗೆ ವಿದಾಯ ಹೇಳಲು ಬೇರೆ ಕಾರಣಗಳಿವೆ ಅಂತಿದ್ದಾರಲ್ಲ?
ಅದೆಲ್ಲವೂ ಸುಳ್ಳು. ನಾನು ಮಾಡುತ್ತಿದ್ದ ಕೆಲಸ ನಾನೇ ಎಂಜಾಯ್ ಮಾಡಕ್ಕೆ ಆಗುತ್ತಿಲ್ಲ, ಇದರ ಜೊತೆಗೆ ವರ್ಷದಲ್ಲಿ ನಾನು ಎರಡೇ ಶೋ ಮಾಡುತ್ತಿದ್ದೆ. ಈ ಎರಡೂ ಶೋಗಳಿಂದ ವರ್ಷದಲ್ಲಿ 6 ತಿಂಗಳು ಕೆಲಸ, ಉಳಿದ 6 ತಿಂಗಳು ಖಾಲಿ ಕೂರಬೇಕಿತ್ತು. ಹಾಗಾಗಿ ಬೇರೆ ಏನಾದರು ಸ್ವಂತವಾಗಿ ಮಾಡೋ ಯೋಚನೆಯಿಂದ ನಿರೂಪಣೆ ಬಿಟ್ಟಿದ್ದು.
ನಿಮ್ಮ ಮತ್ತು ಕಲರ್ಸ್ ವಾಹಿನಿಯ ನಂಟು ಹಳೆಯದು. ಬೇರೆ ಶೋಗಳು ನಿಮಗೆ ಕೊಡಬಹುದಿತ್ತಲ್ಲ?
ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಮಾಡಲಾರೆ. ಯಾಕೆಂದರೆ ಅವರಿಗೂ ವಾಹಿನಿಯಲ್ಲಿ ಶೋಗಳು ಅಪ್ರೂವ್ ಆಗುತ್ತಿರಲಿಲ್ಲ. ಬಂದ ಶೋಗಳನ್ನು ನನಗೆ ಕೊಡುತ್ತಿದ್ದರು. 9 ಶೋಗಳಿಗೆ ಹೋಸ್ಟ್ ಆಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು!?
ನಿರೂಪಣೆ ಜೊತೆಗೆ ಖಾಲಿ ಇರುವಾಗ ಬೇರೆ ಕೆಲಸಗಳನ್ನೂ ಮಾಡಬಹುದಿತ್ತಲ್ಲ?
ಎರಡು ದೋಣಿಯ ಪ್ರಯಾಣ ಅಭ್ಯಾಸ ಇಲ್ಲ. ಸಿನಿಮಾ ಅಂದರೆ ಸಿನಿಮಾ, ನಿರೂಪಣೆ ಅಂದ್ರೆ ನಿರೂಪಣೆ ಮಾತ್ರ. ಆ್ಯಂಕರಿಂಗ್ ಜೊತೆಗೆ ಖಾಲಿ ಇರೋ ಆರು ತಿಂಗಳಲ್ಲಿ ಏನಂತ ಮಾಡಲಿ. ಎಂಟು ವರ್ಷ ಆ್ಯಂಕರಿಂಗ್ ಮಾಡಿದ್ದೇನೆ.
ಸ್ವಂತವಾಗಿ ಏನಾದರು ಮಾಡಬೇಕು ಅಂದ್ರಿ, ಏನು?
ಸದ್ಯಕ್ಕೆ ಒಂದು ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ. ಒಂದು ವೆಬ್ ಸರಣಿ ಆಗಿದೆ. ನಾನೇ ಒಂದು ಕಿರು ಚಿತ್ರ ನಿರ್ದೇಶಿಸಿದ್ದು, ಈಗ ಅದರ ಎಡಿಟಿಂಗ್ ನಡೆಯುತ್ತಿದ್ದೆ. ‘ಪ್ರೆಸ್ಟೀಜ್’ ಎಂಬುದು ಆ ಕಿರುಚಿತ್ರದ ಹೆಸರು. ಕಲಾವಿದರ ಕೆರಿಯರ್ ಯಾವಾಗ ಶುರುವಾಗುತ್ತೆ, ಯಾವಾಗ ನಿಂತೋಗುತ್ತೆ, ಮತ್ತೆ ಯಾವಾಗ ಓಪನ್ ಆಗುತ್ತೆ ಅಂತ ಗೊತ್ತಿರಲ್ಲ.
‘ಆ ಕರಾಳ ರಾತ್ರಿ’ ಚಿತ್ರದ ನಂತರ ನಿಮಗೆ ಸಿನಿಮಾಗಳು ಅವಕಾಶಗಳು ಬರಲಿಲ್ಲವೇ?
ಬಂದಿದ್ದವು. ಆದರೆ, ಎಲ್ಲಾ ಪಾತ್ರಗಳಲ್ಲೂ ಅದೇ ‘ಆ ಕರಾಳ ರಾತ್ರಿ’ ಚಿತ್ರದ ನೆರಳು. ಒಂದೇ ರೀತಿಯ ಪಾತ್ರದ 10 ಸಿನಿಮಾ ಮಾಡೋದಕ್ಕಿಂತ ಒಂದು ಸಿನಿಮಾ ಮಾಡಬೇಕು ಅನ್ನೋ ನಿಲುವು ನನ್ನದು. ಹಾಗೆ ಬಂದಿದ್ದೆಲ್ಲ ಒಪ್ಪಿಕೊಂಡಿದ್ದರೆ ಕನಿಷ್ಠ 15 ಸಿನಿಮಾಗಳಲ್ಲಿ ನಟಿಸುತ್ತಿದ್ದೆ.
ಹೌದು, ಈಗ ನಿಮ್ಮ ಆದಾಯ ಏನು?
ಇಲ್ಲಿಯವರೆಗೂ ನಿರೂಪಣೆಯಿಂದ ಬರುತ್ತಿತ್ತು. ಈಗ ಮೊದಲಿಗಿಂತ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಆಗಿದೆ. ಇನ್‌ಸ್ಟಗ್ರಾಮ್ ಕೋಲಾಬರೇಷನ್, ಪ್ರಚಾರಗಳಿಂದ ಆದಾಯ ಬರುತ್ತಿದೆ.

