ತೀವ್ರ ಬರಗಾಲದಿಂದಾಗಿ ಊರು ಖಾಲಿ ಮಾಡಿಕೊಂಡು ಕೂಲಿ ಕಾರ್ಮಿಕರು ವಲಸೆ ಹೋಗುತ್ತಿರುವುದನ್ನು ತಡೆಯಲು ಕೂಡ್ಲಿಗಿ ಶಾಸಕ ಡಾ। ಎನ್.ಟಿ. ಶ್ರೀನಿವಾಸ್ ಅವರು ಸ್ವತಃ ಕೂಲಿ ಕಾರ್ಮಿಕರಂತೆ ದುಡಿಯುತ್ತಿದ್ದಾರೆ.
ಭೀಮಣ್ಣ ಗಜಾಪುರ
ಕೂಡ್ಲಿಗಿ : ತೀವ್ರ ಬರಗಾಲದಿಂದಾಗಿ ಊರು ಖಾಲಿ ಮಾಡಿಕೊಂಡು ಕೂಲಿ ಕಾರ್ಮಿಕರು ವಲಸೆ ಹೋಗುತ್ತಿರುವುದನ್ನು ತಡೆಯಲು ಕೂಡ್ಲಿಗಿ ಶಾಸಕ ಡಾ। ಎನ್.ಟಿ. ಶ್ರೀನಿವಾಸ್ ಅವರು ಸ್ವತಃ ಕೂಲಿ ಕಾರ್ಮಿಕರಂತೆ ದುಡಿಯುತ್ತಿದ್ದಾರೆ. ಕಾರ್ಮಿಕರಿಗೆ ಅವರ ತವರಿನಲ್ಲೇ ಕೆಲಸ ಕೊಡಿಸುವ ಸಲುವಾಗಿ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವ ಅವರು, ಅದರತ್ತ ಜನರನ್ನು ಆಕರ್ಷಿಸಲು ಸ್ವತಃ ಕಾರ್ಮಿಕರ ಜತೆ ಗಂಟೆಗಟ್ಟಲೆ ಸ್ವತಃ ಶ್ರಮದಾನ ಮಾಡಿ ಹುರಿದುಂಬಿಸುತ್ತಿದ್ದಾರೆ.
ನಿತ್ಯ ಬೆಳಗ್ಗೆ 8ರ ಒಳಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ಹಾಜರಾಗುವ ಶಾಸಕರು, ಕಾರ್ಮಿಕರ ಜತೆ ಮಣ್ಣು ಅಗೆದು ಕೂಲಿ ಕೆಲಸದವರಂತೆ ಕೆಲಸ ಮಾಡುವ ಮೂಲಕ ಗುಳೆ ಹೊರಡಲು ಮುಂದಾಗಿದ್ದ ಜನರಿಗೆ ಇಲ್ಲೇ ಕೆಲಸ ಮಾಡುವಂತೆ ಸ್ಫೂರ್ತಿ ತುಂಬುತ್ತಿದ್ದಾರೆ.
ಈಗಾಗಲೇ ಎಂ.ಬಿ. ಅಯ್ಯನಹಳ್ಳಿ, ಮಾಕನಡಕು, ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ವಿಬಿ ಜಿ ರಾಮ್ ಜಿ (ಹಿಂದಿನ ಉದ್ಯೋಗ ಖಾತ್ರಿ) ಕಾರ್ಮಿಕರ ಜೊತೆ ಬೆಳಗ್ಗೆ ಹೊತ್ತು ಕೆಲಸ ಮಾಡಿದ್ದಾರೆ. ಶಾಸಕರ ಜೊತೆ ನಾನು ಕೆಲಸ ಮಾಡುತ್ತೇನೆ ಎಂಬ ಸಂತಸ ಕಾರ್ಮಿಕರಲ್ಲಿ ಕಂಡುಬರುತ್ತಿದೆ.
ಶಾಸಕರು ಕೇವಲ ಸಾಂಕೇತಿಕವಾಗಿ ಮಣ್ಣ ಅಗೆಯದೆ ಗಂಟೆಗಟ್ಟಲೇ ಜನರ ಜೊತೆ ಗುದ್ದಲಿ, ಹಾರೆ ಹಿಡಿದು ಮಣ್ಣು ಅಗೆಯುತ್ತಾರೆ. ಕಸ, ಕಡ್ಡಿ ಆರಿಸಿ ಸ್ವಚ್ಛ ಮಾಡುತ್ತಾರೆ. ಅಲ್ಲದೇ ಮಣ್ಣು ಹೊತ್ತು ಹಾಕುತ್ತಾರೆ. ಪ್ರತಿದಿನ ವ್ಯಾಯಾಮಕ್ಕೆ ಸಮಯ ಮೀಸಲಿಡುವ ಬದಲು ಅದೇ ಸಮಯವನ್ನು ಉದ್ಯೋಗ ಖಾತ್ರಿ ಕಾರ್ಮಿಕರ ಜೊತೆ ಶ್ರಮಕ್ಕೆ ಬಳಸುತ್ತಿದ್ದಾರೆ.
ತಾಲೂಕಿನಲ್ಲಿ ಶಾಸಕರೇ ಕೆಲಸ ಮಾಡುತ್ತಾರೆ, ನಾವ್ಯಾಕೆ ಜಿ ರಾಮ್ ಜಿ ಅಡಿ ಕೆಲಸ ಮಾಡಬಾರದು ಎಂಬ ಮನೋಭಾವ ಹಳ್ಳಿಗಳ ರೈತರಲ್ಲಿ ಮೂಡುತ್ತಿದೆ. ಹಳ್ಳಿಗಳಲ್ಲೇ ಕೆಲಸ ಸಿಗುತ್ತಿರುವುದರಿಂದ ಹೆಚ್ಚಿನ ಗುಳೆ ತಪ್ಪಿಸಿದಂತಾಗಿದೆ.
ಸ್ವಾಭಿಮಾನದಿಂದ ಬದುಕು, ಗ್ರಾಮೀಣ ಬದುಕಿಗೆ ಉದ್ಯೋಗ ಖಾತ್ರಿ ಯೋಜನೆ ಬಲ ಎಂಬ ಸಂದೇಶದ ಮೂಲಕ ಕೂಡ್ಲಿಗಿ ತಾಲೂಕಿನ ಮೂಲೆ ರಜಾದಿನವಾದ ಭಾನುವಾರ ಕೂಡ ತಾಲೂಕಿನ ಖಾನಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಾಹೊಸಹಳ್ಳಿ ಗ್ರಾಮದಲ್ಲಿ ವಿಬಿಜಿ ರಾಮ್‌ಜಿ (ಉದ್ಯೋಗ ಖಾತ್ರಿ) ಯೋಜನೆಗೆ ಚಾಲನೆ ನೀಡಿ ನಂತರ ಕಾರ್ಮಿಕರೊಂದಿಗೆ ಸ್ವತಃ ಶ್ರಮದಾನ ಮಾಡುವ ಮೂಲಕ ಗ್ರಾಮೀಣ ಕಾರ್ಮಿಕರ ಶ್ರಮಕ್ಕೆ ಶಾಸಕರು ಗೌರವ ಸಲ್ಲಿಸಿದರು.
ವಲಸೆ ತಪ್ಪಿಸಲು ಕೆಲಸ
ಉದ್ಯೋಗಕ್ಕಾಗಿ ಜನರು ವಲಸೆ ಹೋಗುವುದನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ನಾನೇ ಗುದ್ದಲಿ, ಸಲಾಕೆ ಹಿಡಿದು ಕಾರ್ಮಿಕರು, ರೈತರ ಜೊತೆ ಗಂಟೆಗಟ್ಟಲೇ ಕೆಲಸ ಮಾಡುತ್ತೇನೆ, ಅವರ ಜೊತೆ ಊಟ ಮಾಡುತ್ತೇನೆ, ಅವರ ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸುತ್ತೇನೆ. ಈ ಮೂಲಕ ಬರದಿಂದ ಕಂಗೆಟ್ಟಿರುವ ಕುಟುಂಬಗಳು ಸ್ವಗ್ರಾಮದಲ್ಲೇ ಕೆಲಸ ಪಡೆದು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಸಂದೇಶ ನೀಡುತ್ತಿದ್ದೇನೆ.
- ಡಾ. ಎನ್.ಟಿ. ಶ್ರೀನಿವಾಸ್, ಕೂಡ್ಲಿಗಿ ಶಾಸಕ
ನಾನು ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗುತ್ತಿರಲಿಲ್ಲ. ಶಾಸಕರು ಕಾರ್ಮಿಕರ ಜೊತೆ ಕೆಲ್ಸ ಮಾಡುವುದು ನೋಡಿ ಇಲ್ಲಿಯೇ ಕೆಲಸ ಮಾಡಿದರೆ ನೆಮ್ಮದಿಯ ಬದುಕು ಸಿಗುತ್ತದೆ ಎಂದು ತಿಳಿದು ನಮ್ಮೂರಲ್ಲೇ ಕೆಲಸ ಮಾಡಲು ಮುಂದಾಗಿದ್ದೇನೆ.
- ಕಾರ್ಮಿಕ, ಮಾರಣ್ಣ ಕಾನಾಹೊಸಹಳ್ಳಿ
