ಕೃಷಿ ಸಂಸ್ಕೃತಿ, ಪರಂಪರೆ ಈಗ ವ್ಯಾಪಾರೀಕರಣವಾಗಿದ್ದು, ರೈತರು ಬಿತ್ತನೆ ಬೀಜ, ಗೊಬ್ಬರ ಕಂಪನಿಗಳ ದಾಸರಾಗಿರುವುದು ಈ ದೇಶದ ದುರಂತವಾಗಿದೆ. ವಿದ್ಯಾವಂತರು ಕೃಷಿಯಿಂದ ವಿಮುಖರಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಗುಡೇಕೋಟೆಯ ಪ್ರಗತಿಪರ ರೈತ ಎಲ್.ಆರ್. ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೂಡ್ಲಿಗಿ: ಕೃಷಿ ಸಂಸ್ಕೃತಿ, ಪರಂಪರೆ ಈಗ ವ್ಯಾಪಾರೀಕರಣವಾಗಿದ್ದು, ರೈತರು ಬಿತ್ತನೆ ಬೀಜ, ಗೊಬ್ಬರ ಕಂಪನಿಗಳ ದಾಸರಾಗಿರುವುದು ಈ ದೇಶದ ದುರಂತವಾಗಿದೆ. ವಿದ್ಯಾವಂತರು ಕೃಷಿಯಿಂದ ವಿಮುಖರಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ಗುಡೇಕೋಟೆಯ ಪ್ರಗತಿಪರ ರೈತ ಎಲ್.ಆರ್. ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೂಡ್ಲಿಗಿ ತಾಲೂಕು ಘಟಕ ಆಯೋಜಿಸಿದ್ದ ಚಿಕ್ಕೋಬನಹಳ್ಳಿ ಶಂಕ್ರಮ್ಮ ದತ್ತಿ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳು ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು. ಕೃಷಿಯಲ್ಲಿ ಈಗ ರಾಸಾಯನಿಕ ಯಥೇಚ್ಛವಾಗಿ ಬಳಕೆ ಮಾಡುವುದರಿಂದ ಭೂಮಿ ಬಂಜರಾಗುತ್ತಿದೆ. ವಿಷಮುಕ್ತ ಕೃಷಿ ಮಾಡುವುದು ಇಂದಿನ ಸವಾಲಾಗಿದೆ. ವಿದ್ಯಾವಂತರು ಕೃಷಿಗೆ ಕಾಲಿಟ್ಟರೆ ರಾಸಾಯನಿಕ ಬಳಸದೇ ಸಾವಯವ, ಸಹಜ ಬೇಸಾಯ ಪದ್ಧತಿಯಲ್ಲಿ ಬೆಳೆ ಬೆಳೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ತುರ್ತು ಅಗತ್ಯತೆ ಇದೆ ಎಂದರು.ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಕೃಷಿ ಹಳಿ ತಪ್ಪಿದೆ. ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ಭೂಮಿ ವಿಷಯುಕ್ತವಾಗಿದೆ. ರೈತರು ಅತಿ ಆಸೆಗೆ ಬಿದ್ದು ಭೂಮಿಗೆ ರಾಸಾಯನಿಕ ಸುರಿಯುತ್ತಿದ್ದಾರೆ. ಅವಿದ್ಯಾವಂತ ರೈತರಿಗೆ ಇದರ ಪರಿವೇ ಇರುವುದಿಲ್ಲ. ಹೀಗಾಗಿ ವಿದ್ಯಾವಂತರು ರೈತರಿಗೆ ಅರಿವು ಮೂಡಿಸಬೇಕು. ಕೃಷಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನಮ್ಮ ನೆಲವನ್ನು ವಿಷಮುಕ್ತ ಮಾಡಲು ರೈತರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.
ರುದ್ರಮ್ಮ ವಾಮದೇವ ಶಿವಾಚಾರ್ಯ ಮತ್ತು ಮಕ್ಕಳ ದತ್ತಿ ಉಪನ್ಯಾಸದಲ್ಲಿ ಲೇಖಕ ಭೀಮಣ್ಣ ಗಜಾಪುರ ಮಾತನಾಡಿದರು.ಕಸಾಪ ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷ ವೀರೇಶ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳಾದ ಜಿ. ಶ್ರೀಧರ ಉಮೇಶ್ , ಕೆ.ಎಚ್.ಎಂ. ವೀರಭದ್ರಯ್ಯ, ಹಿರೇಮಠ ಕಾಲೇಜಿನ ಪ್ರಾಂಶುಪಾಲ ಸಿದ್ಧರಾಮ ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಟೇರ್ ಹಾಲೇಶ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಸಾಲುಮನಿ ರಾಘವೇಂದ್ರ, ಕಸಾಪ ಕಾರ್ಯದರ್ಶಿ ನಂದಿ ಬಸವರಾಜ, ರಾಘವೇಂದ್ರ ಶೆಟ್ಟಿ, ನಿವೃತ್ತ ಉಪನ್ಯಾಸಕ ನಾಗನಗೌಡ್ರು, ಸಪ್ತಗಿರಿ, ಮಂಜುಕವಿ, ಕರ್ನಾಟಕ ಜಾನಪರ ಪರಿಷತ್ ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್, ಕೆ.ಎಚ್.ಎಂ. ವೀರೇಶ್ ಉಪಸ್ಥಿತರಿದ್ದರು.