ಕನ್ನಡಪ್ರಭ ವಾರ್ತೆ, ಮಂಡ್ಯ ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.ತಾಲೂಕಿನ ಇಂಡುವಾಳು ಗ್ರಾಮದ ಅವರ ನಿವಾಸಕ್ಕೆ ಬೆಳಗಿನಿಂದಲೇ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಸಚ್ಚಿದಾನಂದ ಅವರನ್ನು ಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು. ಸಚ್ಚಿದಾನಂದ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಜನರಿಗೆ ಆರೋಗ್ಯ ತಪಾಸಣೆ ಕಾರ‌್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ಹಲವು ಮಂದಿ ವೈದ್ಯರ ತಂಡ ಜನರ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು.ಶ್ರೀರಂಗಪಟ್ಟಣ, ಮಂಡ್ಯ, ಹಾಗೂ ಪಾಂಡವಪುರ ತಾಲೂಕು ಮತ್ತು ವಿವಿಧೆಡೆಯಿಂದ ಸಹಸ್ರಾರು ಅಭಿಮಾನಿಗಳು ಆಗಮಿಸಿ ಅಭಿನಂದಿಸಿದರು. ಬಳಿಕ ಹುಟ್ಟಹಬ್ಬಕ್ಕೆ ಬಂದಿದ್ದ ಎಲ್ಲರಿಗೂ ಭರ್ಜರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಸಚ್ಚಿದಾನಂದ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂಡುವಾಳು ಗ್ರಾಮದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿತ್ತು. ಹೆದ್ದಾರಿ ಕೆಳ ಸೇತುವೆಗಳಲ್ಲೆಲ್ಲಾ ಬೈಕ್‌ಗಳನ್ನು ನಿಲ್ಲಿಸಲಾಗಿತ್ತು. ರಸ್ತೆ ಇಕ್ಕೆಲಗಳಲ್ಲಿ ಕಾರು ಮತ್ತು ಇತರೆ ವಾಹನಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಸತೀಶ್‌ರೆಡ್ಡಿ, ಮುನಿರಾಜು, ಧೀರಜ್ ಮುನಿರಾಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಅಶ್ವತ್ಥನಾರಾಯಣ, ಎಲ್. ನಾಗೇಂದ್ರ, ಮುಖಂಡರಾದ ಎಸ್.ಪಿ. ಸ್ವಾಮಿ, ಅಶೋಕ್ ಜಯರಾಂ, ಸಿ.ಟಿ. ಮಂಜುನಾಥ್, ಎಚ್.ಆರ್. ಅಶೋಕ್ ಸೇರಿದಂತೆ ಇತರರು ಅಭಿನಂದಿಸಿದರು.