ಸಚಿನ್ ಚೆಲುವರಾಯ ಸ್ವಾಮಿ ಹಾಗೂ ಸಂಗೀತಾ ಭಟ್ ನಟನೆಯ ‘ಕಮಲ್ ಶ್ರೀದೇವಿ’ ಸಿನಿಮಾ ಇಂದು ಬಿಡುಗಡೆ. ಬಿಕೆ ಧನಲಕ್ಷ್ಮೀ ನಿರ್ಮಾಣದ ಈ ಸಿನಿಮಾವನ್ನು ನಟ ರಾಜವರ್ಧನ್ ಸಹ ನಿರ್ಮಾಣ ಮಾಡಿದ್ದಾರೆ. ಸುನೀಲ್ ಕುಮಾರ್ ವಿ ಎ ನಿರ್ದೇಶಕರು. ಚಿತ್ರದ ಬಗ್ಗೆ ಸಚಿನ್ ಚೆಲುವರಾಯಸ್ವಾಮಿ ಮಾತು.
- ಕಮಲ್ ಹಾಸನ್, ಶ್ರೀದೇವಿ ಎವರ್‌ಗ್ರೀನ್ ತಾರಾ ಜೋಡಿ, ಅವರ ಹೆಸರಿನ ಶೀರ್ಷಿಕೆ ಯಾಕೆ ಬಂತು?
ಒಂದು ಕಾಲದಲ್ಲಿ ಕಮಲ್ ಹಾಗೂ ಶ್ರೀದೇವಿ ಅದ್ಭುತ ನಟನೆಯಿಂದ ಚಿತ್ರರಸಿಕರ ಮನಗೆದ್ದವರು. ಈ ಜೋಡಿಯ ಪರೋಕ್ಷ ಸ್ಫೂರ್ತಿ ಚಿತ್ರಕ್ಕಿದೆ. ಅದಕ್ಕಿಂತ ಹೆಚ್ಚಾಗಿ ಇದು ಚಿತ್ರದ ನಾಯಕ, ನಾಯಕಿ ಹೆಸರು. ಇದರಲ್ಲಿ ನನ್ನದು ಒಬ್ಬ ನಿರ್ದೇಶಕನ ಪಾತ್ರ. ಆತ ಕಾಮನ್‌ಮ್ಯಾನ್. ಆತನ ಜರ್ನಿಯಲ್ಲಿ ಎದುರಾಗುವವಳೇ ಶ್ರೀದೇವಿ.
- ಸಿನಿಮಾ ಬ್ಲಡ್‌ಶೇಡೆಡ್ ಇರುವಂತಿದೆ. ಫ್ಯಾಮಿಲಿ ಬಂದು ನೋಡಬಹುದಾ?
ಎರಡು ನಿಮಿಷದ ಟ್ರೇಲರ್ ಸಿನಿಮಾಕ್ಕೆ ಪ್ರೇಕ್ಷಕರನ್ನು ಕರೆತರುವ ಆಹ್ವಾನ ಪತ್ರಿಕೆಯಂತೆ. ಅದೇ ಸಿನಿಮಾ ಅಲ್ಲ. ಸಿನಿಮಾದಲ್ಲಿ ರಕ್ತರಂಜಿತ ದೃಶ್ಯ ಬಂದು ಹೋಗುತ್ತದಷ್ಟೇ. ಇಡೀ ಸಿನಿಮಾದಲ್ಲಿ ಹಾಸ್ಯ, ಲವಲವಿಕೆ, ಲವ್‌ಸ್ಟೋರಿ ಎಲ್ಲಾ ಇದೆ. ಮರ್ಡರ್ ಮಿಸ್ಟರಿ ಮುಖ್ಯ ಎಳೆ. ಆದರೆ ಸಿನಿಮಾ ಸಂಪೂರ್ಣ ಮನರಂಜನೆಯ ಪ್ಯಾಕೇಜ್. ಸೆನ್ಸಾರ್‌ನವರು ಪ್ರೌಢ ಪ್ರೇಕ್ಷಕರು ನೋಡಬಹುದಾದ ಸಿನಿಮಾ ಅಂತ ಹೇಳಿ ‘ಎ’ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ನಮ್ಮ ಸಹಮತ ಇಲ್ಲ. ಈ ಚಿತ್ರದ ಪ್ರೀಮಿಯರ್ ಶೋದಲ್ಲಿ ಫ್ಯಾಮಿಲಿ ಆಡಿಯನ್ಸ್ ಬಂದು ಸಿನಿಮಾ ನೋಡಿ ಖುಷಿಪಟ್ಟಿದ್ದೇ ನಮ್ಮ ಸಿನಿಮಾ ಅವರಿಗೂ ಕನೆಕ್ಟ್ ಆಗುತ್ತದೆ ಎಂಬುದಕ್ಕೆ ಸಾಕ್ಷಿ.
- ನೀವು ರಾಜಕೀಯದಲ್ಲಿ ಸಕ್ರಿಯರು. ಪಾಲಿಟಿಕ್ಸ್, ಸಿನಿಮಾದಲ್ಲಿ ನಿಮ್ಮ ಆಯ್ಕೆ?
ಎರಡೂ ಬೇಕು. ರಾಜಕೀಯದಲ್ಲಿ ಆಸಕ್ತಿ ಇದೆ. ಸಿನಿಮಾದಲ್ಲಿ ಪ್ರೀತಿ ಇದೆ. ಸದ್ಯಕ್ಕೆ ಎರಡೂ ಕ್ಷೇತ್ರವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ.
- ನಿಮ್ಮ ತಂದೆ ಸಚಿವರಾದ ಚಲುವರಾಯಸ್ವಾಮಿ ಅವರಿಗೆ ನೀವು ಚಿತ್ರರಂಗದಲ್ಲಿರುವುದು ಇಷ್ಟ ಇದೆಯೇ?
ತಂದೆಗೆ ಇಷ್ಟವಾಗದ ಯಾವ ಕೆಲಸವನ್ನೂ ನಾನು ಮಾಡುವುದಿಲ್ಲ. ಅವರು ನನ್ನ ಆಸಕ್ತಿಗೆ ನೀರೆರೆಯುತ್ತಲೇ ಬಂದಿದ್ದಾರೆ. ಬಾಲ್ಯದಿಂದಲೂ ನನಗೆ ಸಿನಿಮಾದಲ್ಲಿ ಬಹಳ ಆಸಕ್ತಿ ಇತ್ತು. ಅಪ್ಪನಿಗೆ ಅಣ್ಣಾವ್ರ ಸಿನಿಮಾಗಳೆಂದರೆ ಪ್ರೀತಿ. ನಮ್ಮ ಸಿನಿಮಾ ಅವರಿನ್ನೂ ನೋಡಿಲ್ಲ. ಖಂಡಿತಾ ಅವರಿಗೆ ಇಷ್ಟ ಆಗುವ ನಿರೀಕ್ಷೆ ಇದೆ.