ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕರ್ನಾಟಕದ ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ನಡೆಯಲಿದೆ.

ಉದಯಪುರ: ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕರ್ನಾಟಕದ ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ನಡೆಯಲಿದೆ.

ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಲಿದ್ದು, ಬುಧವಾರವಷ್ಟೇ ಜೋಡಿ ತಮ್ಮ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಆಚರಿಸಿದರು. ವಿಜಯ್‌ ಆಂಧ್ರಪ್ರದೇಶದವರು. ರಶ್ಮಿಕಾ ಕರ್ನಾಟಕದ ಕೊಡಗಿನ ಮೂಲದವರು. ಹೀಗಾಗಿ ಮೂಲಗಳ ಪ್ರಕಾರ ಇಬ್ಬರೂ ವಿವಾಹ ಕಾರ್ಯಕ್ರಮಗಳನ್ನು ತಮ್ಮ ತವರಿನ ಸಂಪ್ರದಾಯದಂತೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ,

ಪ್ರಧಾನಿ ಶುಭಾಶಯ: 

ರಶ್ಮಿಕಾ ಮತ್ತು ವಿಜಯ್‌ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ‘ರಶ್ಮಿಕಾ ಮತ್ತು ವಿಜಯ್‌ ಹಾಗೂ ಅವರ ಕುಟುಂಬಸ್ಥರಿಗೆ ಅಭಿನಂದನೆಗಳು. ಇದು ಇಬ್ಬರ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಒಟ್ಟಿಗೆ ಸಪ್ತಪದಿ ತುಳಿದು ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ. ಮುಂದಿನ ದಿನಗಳು ಕನಸುಗಳು ಮತ್ತು ಅವುಗಳ ಈಡೇರಿಕೆಯಿಂದ ತಂಬಿರಲಿ. ಇಬ್ಬರಿಗೂ ಶುಭಾಶಯಗಳು’ ಎಂದಿದ್ದಾರೆ.

ರಾಹುಲ್‌ಗೆ ಪಾಕ್‌ ಪರ ಗುಂಪುಗಳ ನಂಟಿದೆ: ಬಿಜೆಪಿ ಅಧ್ಯಕ್ಷ ನವೀನ್‌

ಪಟನಾ: ‘ದೇಶದ ಭದ್ರತಾ ಸಂಸ್ಥೆಗಳಿಗೂ ಮಾಹಿತಿ ನೀಡದೆ ವಿದೇಶ ಪ್ರವಾಸ ಕೈಗೊಳ್ಳುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರಿಗೆ ಭಾರತ ವಿರೋಧಿ ಮತ್ತು ಪಾಕಿಸ್ತಾನ ಪರ ಗುಂಪಿನ ನಂಟಿದೆ’ ಎಂದು ಬಿಜೆಪಿ ಅಧ್ಯಕ್ಷ ನಿತೀನ್‌ ನವೀನ್ ಆರೋಪಿಸಿದ್ದಾರೆ.ಬಿಹಾರದಲ್ಲಿ ಮಾತನಾಡಿದ ಅವರು, ‘ರಾಹುಲ್‌ ಗಾಂಧಿಯವರು ಭದ್ರತಾ ಸಂಸ್ಥೆಗಳಿಗೂ ಮಾಹಿತಿ ನೀಡದೇ 247 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇವೆಲ್ಲವೂ ಅವರ ರಾಜಿ ಕಾರ್ಯಾಚರಣೆಯ ಭಾಗ. ಅವರು ವಿದೇಶದಲ್ಲಿರುವ ಭಾರತ ವಿರೋಧಿ ಪಾಕಿಸ್ತಾನ ಪರ ಮತ್ತು ಚೀನಾ ಪರ ನಂಟಿರುವವರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಇದರಲ್ಲಿ ಬಿಲಿಯೇನರ್ ಜಾರ್ಜ್‌ ಸೋರಸ್‌, ಅಮೆರಿಕ ಸಂಸದೆ ಇಲ್ಹಾನ್‌ ಒಮರ್‌ ಮತ್ತು ಕೀನ್ಯಾದ ಹಣಕಾಸುದಾರ ಶಕೀರ್‌ ಮೆರಾಲಿ ಕೂಡ ಸೇರಿದ್ದಾರೆ’ ಎಂದರು.ಮುಂದುವರೆದಂತೆ ‘ರಾಹುಲ್‌ ಗಾಂಧಿ ನಕಾರಾತ್ಮಕ ರಾಜಕೀಯದ ಪೋಸ್ಟರ್‌ ಬಾಯ್‌. ಆದರೆ ದೇಶದ ಜನರು ವಿಶೇಷವಾಗಿ ಯುವಕರು ಅವರ ಆಟವನ್ನು ನೋಡಿದ್ದಾರೆ. ಹಾಗಾಗಿ ಅವರ ವಾಕ್ಚುತರ್ಯಕ್ಕೆ ಹಾದಿ ತಪ್ಪುವುದಿಲ್ಲ’ ಎಂದು ಹೇಳಿದರು.

ಓಪನ್‌ಎಐ ಎಚ್‌ಆರ್‌ ಮುಖ್ಯಸ್ಥನಾಗಿ ಭಾರತೀಯ ಅರವಿಂದ್‌ 

ವಾಷಿಂಗ್ಟನ್‌: ವಿಶ್ವಾದ್ಯಂತ ಎಐ ಕ್ರಾಂತಿ ಮೂಡಿಸುತ್ತಿರುವ ಹೊತ್ತಿನಲ್ಲೇ, ಅಮೆರಿಕದ ದಿಗ್ಗಜ ಎಐ ಕಂಪನಿ ಓಪನ್‌ಎಐನ ಮುಖ್ಯ ಮಾನವ ಅಧಿಕಾರಿಯಾಗಿ ಭಾರತೀಯರಾದ ಅರವಿಂದ್‌ ಕೆ.ಸಿ. ನೇಮಕವಾಗಿದ್ದಾರೆ.ಇನ್ನು ಸಂಸ್ಥೆಯ ನೇಮಕಾತಿ ನಿರ್ವಹಣೆ, ನೀತಿಗಳ ಅಭಿವೃದ್ಧಿ, ಎಐನ ಸಮರ್ಪಕ ಬಳಕೆ ಮತ್ತು ಉದ್ಯೋಗಿಗಳಿಗೆ ಎಐ ಅಳವಡಿಕೆಯ ಕುರಿತು ಮಾರ್ಗದರ್ಶನ ನೀಡುವ ಬಹುಮುಖ್ಯ ಜವಾಬ್ದಾರಿ ಅರವಿಂದ್‌ ಅವರ ಹೆಗಲಿಗೇರಲಿದೆ.

ಮಹಾರಾಷ್ಟ್ರದಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಅರವಿಂದ್‌ ಈ ಹಿಂದೆ ರೋಬ್ಲಕ್ಸ್‌, ಗೂಗಲ್‌, ಮೆಟಾ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಓಪನ್‌ಎಐನ ಮುಖ್ಯ ಕಾರ್ಯತಂತ್ರ ಅಧಿಕಾರಿ ಜೇಸನ್ ಕ್ವಾನ್‌ಗೆ ನೇರವಾಗಿ ವರದಿ ಮಾಡಲಿದ್ದಾರೆ. ‘ಓಪನ್‌ಎಐಗೆ ಸೇರಲು ಉತ್ಸುಕನಾಗಿದ್ದೇನೆ’ ಎಂದು ಅರವಿಂದ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು 5 ವರ್ಷದಲ್ಲಿ ವೈಟ್ ಕಾಲರ್‌ ಜಾಬ್‌ ಕಣ್ಮರೆ: ಆಂಥ್ರೊಪಿಕ್ ಸಿಇಒ

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಅಬ್ಬರದಿಂದಾಗಿ 5 ವರ್ಷಗಳಲ್ಲಿ ವೈಟ್-ಕಾಲರ್ ಉದ್ಯೋಗಗಳು ಕಣ್ಮರೆಯಾಗುತ್ತವೆ. ಎಂದು ಭವಿಷ್ಯ ನುಡಿದ ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡ್‌ ಭವಿಷ್ಯ ನುಡಿದಿದ್ದಾರೆ.ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಡಬ್ಲುಟಿಎಫ್‌ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಅವರು, ‘ಇದೀಗ ಕೋಡ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಂತಹ ವಿಷಯಗಳು ಗಣಿತ ಮತ್ತು ವಿಜ್ಞಾನದಂತಹ ವಿಷಯಗಳಂತೆ ಹೆಚ್ಚು ಹೆಚ್ಚು ಎಐ-ಕೇಂದ್ರಿತವಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಇತರ ಮಾನವ ಕೇಂದ್ರಿತ ಕೌಶಲ್ಯದತ್ತ ಗಮನ ನೀಡಬೇಕು. ವೈಟ್ ಕಾಲರ್‌ ಜಾಬ್‌ ಕಣ್ಮರೆ ಹಿನ್ನೆಲೆಯಲ್ಲಿ ಪರ್ಯಾಯ ಕೌಶಲ್ಯಗಳತ್ತ ಗಮನಹರಿಸಬೇಕಿದೆ’ ಎಂದು ಸಲಹೆ ನೀಡಿದರು.

ಪ್ರತಿಭಟನೆ ವೇಳೆ ತಳ್ಳಾಟ: ಕೇರಳ ಸಚಿವೆ ವೀಣಾಗೆ ಗಾಯ

ಕಣ್ಣೂರು (ಕೇರಳ): ವಿರೋಧ ಪಕ್ಷದ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ತಳ್ಳಾಟ ಸಂಭವಿಸಿದ್ದು, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗಾಯಗೊಂಡಿದ್ದಾರೆ.ಸಚಿವರು ರೈಲು ಹತ್ತಲು ಕಣ್ಣೂರು ರೈಲು ನಿಲ್ದಾಣಕ್ಕೆ ಬಂದಾಗ, ಅವರ ವಿರುದ್ಧ ಕಪ್ಪುಬಾವುಟ ಪ್ರದರ್ಶನ ನಡೆಯಿತು, ಈ ವೇಳೆ ತಳ್ಳಾಟ ಸಂಭವಿಸಿ ಸಚಿವೆಯ ಕೈ ಮತ್ತು ಕುತ್ತಿಗೆಗೆ ಗಾಯಗಳಾದವು. ಟೀವಿ ದೃಶ್ಯಗಳಲ್ಲಿ ಸಚಿವರು, ಪೊಲೀಸ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಸಿಲುಕಿಕೊಂಡಿದ್ದು ಕಂಡುಬಂದಿದೆ. ಸಚಿವೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.