;Resize=(412,232))
1. ಹೀರೋ ಮತ್ತು ನಿರ್ದೇಶಕರು ಸೇರಿ ಸಿಕ್ಕಾಪಟ್ಟೆ ಖರ್ಚು ಮಾಡಿಸಿ, ಅವರವರು ದುಡ್ಡು ಮಾಡಿಕೊಂಡು ನಿರ್ಮಾಪಕರನ್ನು ದೋಚಿಬಿಟ್ಟರು ಎಂಬ ಆರೋಪ.
2. ಹೀರೋ ಮತ್ತು ಆಪ್ತರು ಸೇರಿಕೊಂಡು ನಿರ್ಮಾಪಕರ ಕಣ್ಣಿಗೆ ಮಣ್ಣೆರಚಿ ಜಾಸ್ತಿ ದುಡ್ಡು ಖರ್ಚು ಮಾಡಿಸಿ ನಿರ್ಮಾಪಕರಿಗೆ ಅನ್ಯಾಯ ಮಾಡಿಬಿಟ್ಟರು ಎಂಬ ಆರೋಪ.
3. ಹೀಗೆ ದೋಚಲು ಅವಕಾಶ ಕೊಡಲು ನಿರ್ಮಾಪಕರಿಗೆ ಬುದ್ಧಿ ಇಲ್ಲವೇ, ಅವರಿಗೆ ಸ್ವಲ್ಪ ಅಧ್ಯಯನ ಮಾಡಿ ಚಿತ್ರರಂಗಕ್ಕೆ ಬರಲಾಗುವುದಿಲ್ಲವೇ ಎಂಬ ವಾದ.
4. ನಿರ್ಮಾಪಕರು ಸೂಕ್ತ ಅಗ್ರಿಮೆಂಟ್ ಇಲ್ಲದೆ ಕೆಲಸ ಮಾಡುವುದರಿಂದಲೇ ಅನೇಕ ಸಮಸ್ಯೆಗಳು ಆಗುತ್ತಿರುವುದು ಎಂಬ ಮತ್ತೊಂದು ವಾದ.
5. ಸ್ಟಾರ್‌ಗಳು ಕೈಗೆ ಸಿಗಲ್ಲ, ಸಿಕ್ಕಿದ್ರೂ ಬೆಟ್ಟದಷ್ಟು ಸಂಭಾವನೆ, ವಾಪಸ್ ಬರೋ ಖಾತ್ರಿಯಿಲ್ಲ ಎಂಬ ನೋವು.
6. ಸ್ಟಾರ್‌ಗಳು ಎಷ್ಟೇ ದೊಡ್ಡವರಾದರೂ ಸಿನಿಮಾದಿಂದಲೇ ಆಗಿರುವುದು, ಪರಿಸ್ಥಿತಿ ಸರಿ ಇಲ್ಲದೇ ಇರುವಾಗ ಸಿನಿಮಾಗಾಗಿ ಅವರು ಕೊಂಚ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂಬ ಮಾತು.
- ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ನೋವು, ಸಂಕಟ, ಸಂತಾಪ. ಒಬ್ಬೊಬ್ಬರು ಬೇರೆಯವರ ಮೇಲೆ ಆರೋಪಗಳನ್ನು ಗಾಳಿಯಲ್ಲಿ ತೂರಿಬಿಡುತ್ತಿದ್ದಾರೆ. ಸ್ಟಾರ್‌ಗಳಿಂದ ನಮ್ಮನೆ ಒಲೆ ತೂತು ಬಿತ್ತು ಅಂತ ಒಬ್ಬ ನಿರ್ಮಾಪಕ ಹೇಳಿದರೆ, ಮತ್ತೊಬ್ಬ ಯುವ ನಿರ್ಮಾಪಕ ಸಂಭಾವನೆ ಕಾರಣದಿಂದ ಒಂದು ಸಿನಿಮಾ ಮಾಡಲಾಗುತ್ತಿಲ್ಲ ಎಂದು ಹೇಳುತ್ತಾರೆ. ಒಂದಿಬ್ಬರು ನಿರ್ಮಾಪಕರು ಆ ಹೀರೋನಿಂದ ಕೋಟಿ ಹೋಯಿತು ಅಂತ ಗೊಳೋ ಎಂದು ಕಣ್ಣೀರು ಹಾಕುತ್ತಾರೆ. ಸಮಸ್ಯೆಗಳು ನೂರಾರಿವೆ, ಆದರೆ ಈ ಸಮಸ್ಯೆಗಳೆಂಬ ಗಾಯವನ್ನು ಕೆರೆಯುವುದರಲ್ಲೇ ಸಾಕಷ್ಟು ಮಂದಿಗೆ ಸುಖವಿದೆ ಎಂಬುದು ಸೇವ್ ಸ್ಯಾಂಡಲ್‌ವುಡ್ ಅಭಿಯಾನ ಶುರು ಮಾಡಿದ ಮೇಲೆ ಅರಿವಿಗೆ ಬಂದಿದೆ.
ಹೆಸರು ಹೇಳದೆ, ಹೆಸರು ತಿಳಿಸದೆ ಗಾಳಿಯಲ್ಲಿ ಗುಂಡು ಹಾರಿಸುವವರು ಸಾಕಷ್ಟಿದ್ದಾರೆ. ಯಾವುದೋ ಒಂದು ಸಮಸ್ಯೆ ಕೇಳಿದರೆ, ಅದು ಈಗ ಬೇಡ ಆಮೇಲೆ ಮಾತಾಡೋಣ ಎಂದು ಹೇಳುವರೂ ಇದ್ದಾರೆ. ಇಲ್ಲಿ ಸಮಸ್ಯೆಗಳು ಚರ್ಚೆ ಆಗುತ್ತವೆ. ಆದರೆ ಪರಿಹಾರಗಳು ಚರ್ಚೆ ಆಗುವುದಿಲ್ಲ. ಮತ್ತು ಬಹುತೇಕ ಯಾರಿಗೂ ಪರಿಹಾರವೇ ಬೇಡ.
ಇಲ್ಲಿ ಮಾತನಾಡುವ ಚಟ. ದೂರುವ ಚಟ. ತಮ್ಮನ್ನು ತಾವು ಎತ್ತಿ ಹಿಡಿಯುವ ಚಟ. ಅಧ್ಯಯನವಿಲ್ಲ. ಸಿದ್ಧತೆ ಇಲ್ಲ. ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡುವ ಅಭ್ಯಾಸವಿಲ್ಲ. ಸ್ಟಾರ್ ಒಂದು ದಿಕ್ಕಿನಲ್ಲಿ ಸಾಗಿದರೆ, ನಿರ್ಮಾಪಕ ಮತ್ತೊಂದು ಕಾರಣದತ್ತ ಸಾಗುತ್ತಾರೆ. ಮಧ್ಯದಲ್ಲಿ ಸಾಧ್ಯ ಇರುವವರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸೋತ ನಿರ್ಮಾಪಕ ನಾಲ್ಕು ಹನಿ ಕಣ್ಣೀರು ಸುರಿಸಿ, ಸ್ಟಾರ್ ಅಥವಾ ನಿರ್ದೇಶಕರ ಹೆಸರೆತ್ತುವ ಧೈರ್ಯ ಸಾಲದೆ ಸಾಕ್ಷಾತ್ಕಾರವಾಗಿ ಚಿತ್ರರಂಗದ ಬಾಗಿಲನ್ನು ಹಾಕಿಕೊಂಡು ಹೋಗುತ್ತಿದ್ದಾನೆ.
ಕಳೆದ ಒಂದೆರಡು ವಾರಗಳನ್ನೇ ಗಮನಿಸಿ. ಸಾಕಷ್ಟು ಮಂದಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಆದರೆ ಯಾವುದೋ ಒಂದು ಸಂಸ್ಥೆ ಅಥವಾ ವ್ಯಕ್ತಿತ್ವ ಅಥವಾ ಸಂಘ ಈ ಕುರಿತು ತಲೆ ಕೆಡಿಸಿಕೊಂಡಿದ್ದು ಎಲ್ಲೂ ಕಾಣಲಿಲ್ಲ. ಮಾಧ್ಯಮಗಳ ಮುಂದೆ ಮಾತನಾಡುವುದು ಬಿಟ್ಟರೆ, ಅದರಿಂದ ಬೇರೆ ಪ್ರಯೋಜನವೇ ಆಗುತ್ತಿಲ್ಲ. ಕಳೆದವಾರ ಒಬ್ಬ ಸ್ಟಾರ್ ನಿರ್ಮಾಪಕ ಅಳಲನ್ನು ಹೇಳಿಕೊಂಡರು. ಅವರ ಸಂಘದಲ್ಲಿ ಆ ಕುರಿತು ಚರ್ಚೆಯಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ವಿಶೇಷವೆಂದರೆ ಒಬ್ಬ ಪ್ಯಾಶನೇಟ್ ಸ್ಟಾರ್ ನಿರ್ಮಾಪಕರೇ ತಮ್ಮ ಸಿನಿಮಾಗೆ ಅನ್ಯಾಯವಾಗುತ್ತಿರುವುದನ್ನು ಅಸಹಾಯಕವಾಗಿ ಹೇಳಿಕೊಂಡರು. ಅವರನ್ನು ಸಂತೈಸುವ ಕೆಲಸವನ್ನೂ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೊಂದು ಸಂಸ್ಥೆಯೂ ಮಾಡಿದಂತೆ ಕಾಣಲಿಲ್ಲ. ಇಲ್ಲಿ ಎಲ್ಲರೂ ದ್ವೀಪವಾಗಿದ್ದಾರೆ. ಮಾತನಾಡಬೇಕಿದ್ದವರು ಮೌನವಾಗಿದ್ದಾರೆ. ಸಂಘಟನೆ ಮಾಡುವ ಶಕ್ತಿ ಇದ್ದವರು ಚಿತ್ರರಂಗದಿಂದ ಒಂದು ಕಾಲು ಆಚೆ ಇಟ್ಟಿದ್ದಾರೆ.