;Resize=(412,232))
ನವದೆಹಲಿ: ಪ್ರೇಮ್ ನಿರ್ದೇಶನದ ಕನ್ನಡದ ‘ಕೆಡಿ’ ಸಿನಿಮಾದ ‘ಸೆರಗ ಸರ್ಸೆ’ ಹಾಡಿನ ಹಿಂದಿ ಅವತರಣಿಕೆಯ ‘ಸರ್ಕೆ ಚುನಾರ್’ ವಿವಾದ ಸಂಬಂಧ, ಹಾಡಿಗೆ ಹೆಜ್ಜೆ ಹಾಕಿದ್ದ ನಟ ಸಂಜಯ್ ದತ್ ಸೋಮವಾರ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಲಿಖಿತ ಕ್ಷಮೆಯಾಚಿಸಿದ್ದಾರೆ.
‘ಕೆಡಿ: ದ ಡೆವಿಲ್’ ಚಿತ್ರದ ಹಾಡಿನ ಸಾಹಿತ್ಯ ಭಾರೀ ಟೀಕೆಗೆ ಗುರಿಯಾಗಿತ್ತು. ಕನ್ನಡದಲ್ಲಿ ಪ್ರೇಮ್ ಬರೆದಿದ್ದ ಹಾಡನ್ನು ರಾಕೀಬ್ ಆಲಂ ಹಿಂದಿಗೆ ಭಾಷಾಂತರಿಸಿದ್ದರು. ಹಾಡಿನ ವಿರುದ್ಧ ಚಿತ್ರತಂಡದ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು, ಚಿತ್ರದಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದ ನಟ ಸಂಜಯ್ ದತ್ ಮತ್ತು ನಟಿ ನೋರಾ ಫತೇಹಿಗೆ ನೋಟಿಸ್ ಜಾರಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ದತ್ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆಯೋಗದ ಅಧ್ಯಕ್ಷತೆ ವಿಜಯಾ ರತ್ನಾಕರ್, ‘ಹಾಡಿನಲ್ಲಿನ ಅಶ್ಲೀಲ ಸಾಹಿತ್ಯ ಮತ್ತು ಹಾಡಿನಲ್ಲಿ ಮಹಿಳೆಯನ್ನು ಅಸಭ್ಯವಾಗಿ ಚಿತ್ರಿಸಿದ್ದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಜೊತೆಗೆ ಇಂಥ ಸಾಹಿತ್ಯದ ಉದ್ದೇಶ, ಅದರಿಂದಾಗುವ ಅನಾಹುತ, ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ ಹೊರತಾಗಿಯೂ ಇಂಥ ಘಟನೆ ಬೀರಬಹುದಾದ ಪರಿಣಾಮಗಳ ಬಗ್ಗೆ ನೀವು ಮುಂಜಾಗ್ರತೆ ವಹಿಸಿರಲಿಲ್ಲವೇಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ನಟನ ಬಳಿ ಮುಂದಿಟ್ಟರು ಎನ್ನಲಾಗಿದೆ.
ಈ ವೇಳೆ ಘಟನೆ ಲಿಖಿತವಾಗಿ ಕ್ಷಮೆ ಯಾಚಿಸಿದ ನಟ ಸಂಜಯ್ ದತ್, ‘ಸಮಾಜಕ್ಕೆ ಯಾವುದೇ ಹಾನಿ ಮಾಡುವ ಉದ್ದೇಶವಿಲ್ಲದೇ ನಡೆದ ಘಟನೆ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದರು. ಅಲ್ಲದೆ ಪ್ರಾಯಶ್ಚಿತ್ತವಾಗಿ ಬುಡಕಟ್ಟು ಸಮುದಾಯದ 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಅಭಯ ನೀಡಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಇಂಥ ಘಟನೆ ನಡೆಯದಂತೆ ಎಚ್ಚರಿಕೆಯ ಭರವಸೆಯನ್ನೂ ನೀಡಿದ್ದಾರೆ.
- ಪ್ರೇಮ್‌ರ ಕನ್ನಡದ ‘ಕೆಡಿ’ ಸಿನಿಮಾದಲ್ಲಿತ್ತು ‘ಸೆರಗ ಸರ್ಸೆ’ ಹಾಡು
- ಕನ್ನಡದಲ್ಲಿ ಪ್ರೇಮ್ ಬರೆದಿದ್ದ ಹಾಡು ಹಿಂದಿಗೆ ಭಾಷಾಂತರ ಆಗಿತ್ತು
- ಹಿಂದಿಗೆ ರಾಕೀಬ್ ಆಲಂ ‘ಸರ್‌ಕೇ ಚುನರ್’ ಎಂದು ಭಾಷಾಂತರಿಸಿದ್ರು
- ಆದರೆ ಇದು ಅಶ್ಲೀಲವಾಗಿದೆ ಎಂದು ವಿವಾದ ಸೃಷ್ಟಿ. ಪ್ರೇಮ್ ಕ್ಷಮೆ
- ಇದೀಗ ಹಾಡಿಗೆ ನರ್ತಿಸಿದ್ದ ನಟ ಸಂಜಯ ದತ್‌ರಿಂದ ಕ್ಷಮೆಯಾಚನೆ
- ಇನ್ನು ತಪ್ಪು ಮಾಡಲ್ಲ, ಪ್ರಾಯಶ್ಚಿತ್ತವಾಗಿ 50 ಹೆಣ್ಮಕ್ಕಳಿಗೆ ಶಿಕ್ಷಣ: ದತ್