ಸೀರಿಯಲ್ ಕಷ್ಟ, ಧಾರಾವಾಹಿ ನಷ್ಟ

Published : Apr 10, 2026, 02:51 PM IST
Tv Channels

ಸಾರಾಂಶ

ಎಲ್ಲರೂ ಚಲನಚಿತ್ರ ನಿರ್ಮಾಪಕರ ಕಷ್ಟ ನಷ್ಟಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಸದ್ಯ ಅವರಿಗಿಂತಲೂ ದಾರುಣ ಸ್ಥಿತಿಯಲ್ಲಿರುವುದು ಧಾರಾವಾಹಿಗಳ ನಿರ್ಮಾಪಕರು. ಒಂದು ಕಾಲದಲ್ಲಿ ಕಲಾವಿದರು, ಚಾನೆಲ್‌ಗಳ ನಡುವೆ ಧಣಿಯಂತೆ ಮೆರೆಯುತ್ತಿದ್ದ ನಿರ್ಮಾಪಕರು ಈಗ ದಣಿದು ಸುಣ್ಣವಾಗಿ ಹೋಗಿದ್ದಾರೆ.

ಎಲ್ಲರೂ ಚಲನಚಿತ್ರ ನಿರ್ಮಾಪಕರ ಕಷ್ಟ ನಷ್ಟಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಸದ್ಯ ಅವರಿಗಿಂತಲೂ ದಾರುಣ ಸ್ಥಿತಿಯಲ್ಲಿರುವುದು ಧಾರಾವಾಹಿಗಳ ನಿರ್ಮಾಪಕರು. ಒಂದು ಕಾಲದಲ್ಲಿ ಕಲಾವಿದರು, ಚಾನೆಲ್‌ಗಳ ನಡುವೆ ಧಣಿಯಂತೆ ಮೆರೆಯುತ್ತಿದ್ದ ನಿರ್ಮಾಪಕರು ಈಗ ದಣಿದು ಸುಣ್ಣವಾಗಿ ಹೋಗಿದ್ದಾರೆ. ಈ ಪ್ರೊಫೆಶನ್‌ ಅನ್ನೇ ಬಿಟ್ಟು ಕ್ಯಾಬ್‌ ಡ್ರೈವಿಂಗ್‌ ಮಾಡುವವರೂ ಸಿಗುತ್ತಾರೆ. ಅವರ ಮುಂದಿರುವ ಸಮಸ್ಯೆ ಒಂದೆರಡಲ್ಲ. ಹೆಸರು ಹೇಳಲು ಬಯಸದ ನಿರ್ಮಾಪಕರು ಆ ವ್ಯಥೆಯನ್ನು ಬಗೆಬಗೆಯಾಗಿ ವಿವರಿಸಿದ್ದಾರೆ. ಕಲಾವಿದರು, ಚಾನೆಲ್‌, ಟಿಆರ್‌ಪಿ ದುಃಸ್ವಪ್ನ ಅದರಲ್ಲಿ ಮುಖ್ಯವಾದುದು.

1. ಕಲಾವಿದರ ಕಿರುಕುಳ- ಕಲಾವಿದರಿಗೆ ಇಲ್ಲಿ ಅಪಾರ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಇವರ ಸಂಭಾವನೆಯಲ್ಲಿ ಏರಿಕೆಯಾಗುತ್ತಲೇ ಇದೆ. ದಿನಕ್ಕೆ 7000 ದಿಂದ 20,000ವರೆಗೂ ಸಂಭಾವನೆ ಇದೆ. ಜೊತೆಗೆ ಈ ಕಲಾವಿದರು ಚಾನಲ್‌ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಈ ಪಾತ್ರಕ್ಕೆ ಇವರನ್ನೇ ಹಾಕಿಕೊಳ್ಳಿ ಅಂತ ಚಾನೆಲ್‌ ಹುಕುಂ ಮಾಡುತ್ತದೆ. ನಿರ್ಮಾಪಕ ದುಬಾರಿ ಸಂಭಾವನೆ ಕೊಟ್ಟಾದರೂ ಅವರನ್ನು ಹಾಕಿಕೊಳ್ಳದೇ ವಿಧಿಯಿಲ್ಲ. ಆ ಕಲಾವಿದರದೋ ಒಂದು ಕಾಲು ಇಲ್ಲಿದ್ದರೆ ಇನ್ನೊಂದು ಕಾಲು ತೆಲುಗು ಧಾರಾವಾಹಿಯಲ್ಲಿರುತ್ತದೆ. ಅಲ್ಲಿ ಧಾರಾಳ ಸಂಭಾವನೆ ನೀಡಿ, ಫ್ಲೈಟ್‌ ಟಿಕೆಟ್‌ ಅನ್ನೂ ಕೊಟ್ಟು ಕರೆಸಿಕೊಳ್ಳುವವರಿದ್ದಾರೆ. ಇದರ ನಡುವೆ ಇವರ ಡೇಟ್ಸ್‌ ಸಮಸ್ಯೆ, ಅಶಿಸ್ತು ಮೇರೆ ಮೀರುತ್ತಿದೆ ಎಂಬುದು ಕಂಗೆಟ್ಟ ನಿರ್ಮಾಪಕರ ನುಡಿ. ಜೊತೆಗೆ ಸಿನಿಮಾ ಹಿನ್ನೆಲೆಯ ಕಲಾವಿದರು ಸಮಯದ ಮಿತಿಯನ್ನು ಹಾಕಿಕೊಂಡಿರುತ್ತಾರೆ, ಅಧಿಕ ಸಂಭಾವನೆ ಬಯಸುತ್ತಾರೆ. ಆದರೆ ಆ ಪಾತ್ರ ಅವರೇ ಮಾಡಬೇಕು ಎಂದು ಚಾನೆಲ್‌ ಠಠಾವು ಹೇರಿರುತ್ತದೆ.

2. ಚಾನೆಲ್‌ನ ದಬ್ಬಾಳಿಕೆ- ಚಾನೆಲ್‌ಗಳು ಕಾರ್ಪೊರೇಟ್‌ ಸಿಸ್ಟಮ್‌ ರೂಢಿಸಿಕೊಂಡು ನಿರ್ಮಾಣದಲ್ಲಿ ಮೂಗು ತೂರಿಸಲು ಶುರು ಮಾಡಿದವು. ಸೀರಿಯಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಇಪಿ ಎಂಬ ಹುದ್ದೆ ಸೃಷ್ಟಿಸಿ ಅನನುಭವಿಗಳನ್ನು ಆ ಹುದ್ದೆಗೆ ತಂದ ಪರಿಣಾಮ ಅವರ ಮೂರ್ಖತನದ ನಿರ್ಧಾರಕ್ಕೂ ನಿರ್ಮಾಪಕರು ಲಕ್ಷಾಂತರ ದುಡ್ಡು ತೆರಬೇಕಾಗುತ್ತದೆ. ಹಿಂದೆಲ್ಲ ಸ್ವತಂತ್ರ ಕಥೆಗಳಿಗೆ ಆದ್ಯತೆ ಇತ್ತು. ಈಗ ರಿಮೇಕ್‌ಗೇ ಪ್ರಾಧಾನ್ಯತೆ. ಇನ್ನೊಂದು ಭಾಷೆಯ ಸೀರಿಯಲ್‌ನ ಸನ್ನಿವೇಶ ಈ ಭಾಷೆಗೆ ಬರುವಾಗ ಕೊಂಚ ಬದಲಾದರೂ ಚಾನೆಲ್‌ನ ಅನನುಭವಿ ಹುಡುಗರು ರೀಶೂಟ್‌ಗೆ ಆಗ್ರಹಿಸುತ್ತಾರೆ. ಇದು ನಿರ್ಮಾಪಕನಿಗೆ ದುಪ್ಪಟ್ಟು ಹೊರೆ. ಕೆಲವು ವರ್ಷಗಳ ಹಿಂದೆ ಒಂದು ಧಾರಾವಾಹಿಯ ಸುಮಾರು 45 ಎಪಿಸೋಡ್‌ಗಳನ್ನು ರೀಶೂಟ್‌ ಮಾಡಲು ಚಾನೆಲ್‌ ಹೇಳಿ ಆ ನಿರ್ಮಾಪಕ ಅಪಾರ ನಷ್ಟ ಅನುಭವಿಸಬೇಕಾಗಿ ಬಂದಿತ್ತು. ಜೊತೆಗೆ ಮದುವೆ, ಎಂಗೇಜ್‌ಮೆಂಟ್‌ನಂಥಾ ಈವೆಂಟ್‌ಗಳು ಧಾರಾವಾಹಿಗಳಲ್ಲಿ ನಡೆಯಲೇ ಬೇಕು. ಅದಕ್ಕೆ ಚಾನೆಲ್‌ನಿಂದ ಹಣ ಬರುತ್ತದೆಯಾದರೂ, ಅವರ ನಿರೀಕ್ಷೆಯ ಮಟ್ಟಕ್ಕೆ ಆ ಸೀನ್‌ ಮಾಡಲು ಅವರು ಕೊಟ್ಟ ಹಣದ ದುಪ್ಪಟ್ಟು, ಮೂರು ಪಟ್ಟು ಖರ್ಚಾಗುತ್ತದೆ. ಈಗೀಗ ಅಂತೂ ಪ್ರೊಡಕ್ಷನ್‌ ಹೌಸ್‌ ನೀಡುವ ತಿಂಡಿ, ಊಟ ವಿಷಯದಲ್ಲೂ ಚಾನೆಲ್‌ ಮೂಗು ತೂರಿಸುತ್ತಿದೆಯಂತೆ.

3. ವಿಪರೀತ ಬಜೆಟ್‌ ಏರಿಕೆ - ಚಾನೆಲ್‌ ಡಿಮ್ಯಾಂಡ್‌ ಮಾಡುವ ರೀಶೂಟ್‌ಗಳು, ಮದುವೆ, ಇವೆಂಟ್‌ನಂಥಾ ದುಬಾರಿ ವೆಚ್ಚದ ಸಂಭ್ರಮಗಳಿಗೆ ಹಣ ಬಹಳ ಖರ್ಚಾಗುತ್ತದೆ. ಹಾಗೆಂದು ಚಾನೆಲ್‌ ಕೊಡುವ ಹಣದಲ್ಲಿ ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗಿಲ್ಲ. ಚಾನೆಲ್‌ ಕೊಡುವ ಹಣದಲ್ಲಿ ಶೇ.60 ಕಲಾವಿದರ ಸಂಭಾವನೆಗೇ ಬೇಕು. ಉಳಿದಿದ್ದರಲ್ಲಿ ತಂತ್ರಜ್ಞರ ಸಂಭಾವನೆ, ತಾಂತ್ರಿಕ ಪರಿಕರಗಳ ವೆಚ್ಚ, ಶೂಟಿಂಗ್‌ ಮನೆಗಳ ವೆಚ್ಚ, ಸಾಗಾಟದ ಖರ್ಚು ಹೀಗೆ ಹಲವು ಖರ್ಚುಗಳನ್ನು ಸಂಭಾಳಿಸಬೇಕು. ಚಾನೆಲ್‌ ದಿನವೊಂದಕ್ಕೆ 1 ಲಕ್ಷ ರು.ನಿಂದ 2.50 ಲಕ್ಷ ರು.ವರೆಗೂ ನೀಡುತ್ತದೆ. ಆದರೆ ಶೂಟಿಂಗ್‌ ಮನೆಗಳ ಬಾಡಿಗೆಯೇ ದಿನಕ್ಕೆ 45 ಸಾವಿರ.

4. ಚಿತ್ರಕಥೆಗೆ ಯಾವ ಮಹತ್ವವೂ ಇಲ್ಲ

ನಿರ್ಮಾಣ ಸಂಸ್ಥೆ ಕ್ರಿಯೇಟಿವ್‌ ಆಗಿ ಚಿತ್ರಕಥೆ ರೂಪಿಸಿದ್ದರೆ ಚಾನೆಲ್‌ ಮಧ್ಯದಲ್ಲಿ ಬಂದು ಬದಲಾವಣೆ ಹೇಳುತ್ತದೆ. ಇದರಿಂದ ಕಥೆಯ ಫ್ಲೋ ಮಿಸ್‌ ಆಗುತ್ತದೆ. ಜೊತೆಗೆ ಕ್ರಿಯೇಟಿವಿಟಿಗಿಂತ ಅದ್ದೂರಿತನಕ್ಕೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಒಂದೊಳ್ಳೆ ಕಥೆ ಹೇಳಬೇಕು ಅಂತ ಬರುವವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ನಿರ್ಮಾಪಕರ ತಪ್ಪೇ ಇಲ್ವಾ?

‘ಖಂಡಿತಾ ಇದೆ’ ಎನ್ನುತ್ತಾರೆ ಹಿರಿಯ ನಿರ್ಮಾಪಕರು. ‘ಈಗ ತೆಲುಗಿನಲ್ಲಿ ನಿರ್ಮಾಪಕರಲ್ಲಿ ಒಗ್ಗಟ್ಟಿದೆ. ಹೀಗಾಗಿ ವ್ಯವಸ್ಥೆಯಲ್ಲೊಂದು ಹಿಡಿತವಿದೆ. ಆದರೆ ಮೊದಲು ನಮ್ಮಲ್ಲೂ ಒಗ್ಗಟ್ಟಿತ್ತು. ಮೊಟ್ಟ ಮೊದಲ ಬಾರಿಗೆ ಟಿವಿ ಕ್ಲಬ್‌ ಬಂದದ್ದೇ ನಮ್ಮಲ್ಲಿ. ತೆಲುಗಿನವರು ಇಲ್ಲಿ ಬಂದು ನೋಡಿ ಅಲ್ಲೂ ಅದೇ ಥರ ಸಂಘ ಕಟ್ಟಿದ್ದಾರೆ. ಅದರೆ ಕ್ರಮೇಣ ನಮ್ಮ ನಿರ್ಮಾಪಕರಲ್ಲಿ ದುರಾಸೆ, ಇನ್ನೊಬ್ಬನ ಉನ್ನತಿ ಸಹಿಸದ ಗುಣದಿಂದ ಇಂದು ಚಾನೆಲ್‌ನ ಗುಲಾಮರಾಗಬೇಕಾದ ಸ್ಥಿತಿ ಬಂದಿದೆ’ ಎನ್ನುತ್ತಾರೆ.

1. ಚಾನೆಲ್‌ಗೆ ಮಾರ್ಕೆಟಿಂಗ್‌ ತಂತ್ರಗಾರಿಕೆ ಇರುತ್ತದೆ. ಅದನ್ನು ಸೀರಿಯಲ್‌ಗೆ ಅನ್ವಯಿಸುತ್ತಾರೆ. ಪರಿಣಾಮ ಟಿಆರ್‌ಪಿ ರೇಟಿಂಗ್‌ ಮೇಲೆ ವಾರ ವಾರ ಕಥೆ ಬದಲಾಗುತ್ತೆ. ಇದರಿಂದ ನಿರ್ಮಾಪಕರಿಗೆ ಒತ್ತಡ. ಕಡಿಮೆ ಅವಧಿಯಲ್ಲಿ ಶೂಟಿಂಗ್‌ ಪ್ಲಾನ್‌ ಮಾಡಕ್ಕಾಗಲ್ಲ. ಒಂದು ಕಥೆಯ ಎಳೆಗೆ ಟಿಆರ್‌ಪಿ ಚೆನ್ನಾಗಿ ಬಂದರೆ ಅದಕ್ಕೇ ಒತ್ತು ಕೊಟ್ಟು ಕಥೆ ಮುಂದುವರಿಸಬೇಕು. ಅದರಲ್ಲಿ ದುಬಾರಿ ಸಂಭಾವನೆ ಪಡೆಯುವ ಕಲಾವಿದ ಇದ್ದಾಗ ಇನ್ನೂ ಚಾಲೆಂಜಿಂಗ್‌. ಧಾರಾವಾಹಿ ನಿರ್ಮಾಪಕರು ನಷ್ಟದಲ್ಲಿದ್ದಾರೆ. ಹೊಸಬರಿಗೆ ನಾನೇ ಹೇಳ್ತೀನಿ, ದಯಮಾಡಿ ಧಾರಾವಾಹಿ ನಿರ್ಮಾಣಕ್ಕೆ ಬರಬೇಡಿ.

- ಶ್ರುತಿ ನಾಯ್ಡು, ನಿರ್ಮಾಪಕಿ

2. ನಾನು ಧಾರಾವಾಹಿ ಮಾಡುತ್ತಿದ್ದ ಕಾಲದಲ್ಲಿ ಕಥೆಗೆ ಮಹತ್ವ ಇತ್ತು. ಚಾನೆಲ್‌ನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಜನಸ್ಪಂದನೆಯೂ ಅದ್ಭುತವಾಗಿದ್ದ ಕಾರಣ ನಮ್ಮ ಸ್ವತಂತ್ರ್ಯಕ್ಕೆ ಎಲ್ಲೂ ಧಕ್ಕೆ ಆಗುತ್ತಿರಲಿಲ್ಲ. ಇತ್ತೀಚೆಗೆ ಉದ್ಭವಿಸಿರುವ ಸಮಸ್ಯೆ ಬಗ್ಗೆ ಕೇಳಿದ್ದೇನೆ. ಕಥೆಗೆ ಮಾನ್ಯತೆ ಸಿಗಬೇಕು ಎಂಬುದು ನನ್ನ ನಿಲುವು.

- ಟಿ.ಎನ್‌.ಸೀತಾರಾಂ, ಹಿರಿಯ ನಿರ್ಮಾಪಕ

3. ನನ್ನ ಪ್ರಕಾರ ಧಾರಾವಾಹಿ ನಿರ್ಮಾಣದಲ್ಲಿ ಮುಕ್ತವಾದ ಸ್ವಾತಂತ್ರ್ಯ ಇರಬೇಕು. ಪ್ರತಿಭಾನ್ವಿತರಿಗೆ ಮಣೆ ಹಾಕಬೇಕು. ಕತೆ ಆದ್ಯತೆ ನೀಡಬೇಕು. ಅದಿಲ್ಲದೇ ಕೇವಲ ಅದ್ದೂರಿ ಬಜೆಟ್‌ ಅಷ್ಟೇ ಇದ್ದರೆ ಜನರಿಗೂ ಜನರಿಗೂ ಕನೆಕ್ಟ್‌ ಆಗಲ್ಲ, ನಿರ್ಮಾಪಕರಿಗೂ ನಷ್ಟ. ಮುಖ್ಯವಾಗಿ ಚಾನೆಲ್‌, ಪ್ರೊಡಕ್ಷನ್‌ ಹೌಸ್‌ ಮತ್ತು ಕಲಾವಿದರಲ್ಲಿ ಸೌಹಾರ್ದಯುತ ವ್ಯವಸ್ಥೆ ಬೇಕು.

- ವಿನು ಬಳಂಜ, ಕಿರುತೆರೆ ನಿರ್ಮಾಪಕ

4. ಧಾರಾವಾಹಿ ನಿರ್ಮಾಣ ವೆಚ್ಚ ಸಿಕ್ಕಾಪಟ್ಟೆ ಏರುತ್ತಿದೆ. ಕ್ಯಾರವಾನ್‌ ಪದ್ಧತಿಯೂ ಬರುತ್ತಿದೆ. ಕೆಲವು ಕಲಾವಿದರು ಆರು ಗಂಟೆ ಮೇಲೆ ಕೆಲಸ ಮಾಡಕ್ಕಾಗಲ್ಲ ಅಂತಾರೆ. ಕನಿಷ್ಠ 500 ಎಪಿಸೋಡ್‌ ದಾಟಿದ್ರೆ ಕೊಂಚ ಚೇತರಿಸಬಹುದು. ಆ ಹಂತ ತಲುಪುವುದು ಕಷ್ಟವಿದೆ. ಇವತ್ತು ಧಾರಾವಾಹಿಗಳಲ್ಲಿ ಇರುವುದು ಬರೀ ಬಡ ಹುಡುಗಿ, ಶ್ರೀಮಂತ ಹುಡುಗನ ಕಥೆ. ಸನ್ನಿವೇಶವಷ್ಟೇ ಬದಲಾಗಿರುತ್ತದೆ. ನಾಯಕ ಅಥವಾ ನಾಯಕಿ ಹೆಲಿಕಾಪ್ಟರ್‌ನಲ್ಲೇ ಇಳಿಯೋದು. ಇದರಿಂದ ನಿರ್ಮಾಪಕರಿಗೆ ಹಿಡಿತ ಸಿಕ್ತಿಲ್ಲ. ಚಾನೆಲ್‌ನಲ್ಲಿ ಅನುಭವಿಗಳಿಗೆ ಅವಕಾಶ ಕೊಡಲ್ಲ. ಅನನುಭವಿಗಳು ನಿರ್ಮಾಪಕರಿಗೆ ಸುಮ್ಮನೆ ನಷ್ಟ ತರಿಸುತ್ತಾರೆ.

- ಬಿ.ಎಸ್‌.ಲಿಂಗದೇವರು, ನಿರ್ದೇಶಕ, ನಿರ್ಮಾಪಕ, ಟಿವಿ ಕ್ಲಬ್‌ ಅಧ್ಯಕ್ಷ

* ಕಿರಿಕ್‌ ಮಾಡುವ ಚಾನೆಲ್‌

* ಕೈಗೆ ಸಿಗದ ಕಲಾವಿದರು ಮತ್ತವರ ಸಂಭಾವನೆ

* ಗಗನಕ್ಕೇರುವ ಬಜೆಟ್‌

* ಟಿಆರ್‌ಪಿಯೆಂಬ ದುಃಸ್ವಪ್ನ

* ಜಾರಿ ಹೋಗುವ ಕಥೆ, ಚಿತ್ರಕಥೆ

* ಧಾರಾವಾಹಿ ನಿಂತರೂ ನಿಲ್ಲದ ಕಷ್ಟಗಳು

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಚೆಂಡೆಯ ರೂಪಕದಲ್ಲಿ ಪೀಟರ್‌ ಲೈಫ್‌ಸ್ಟೋರಿ : ರಾಜೇಶ್‌ ಧ್ರುವ
ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ