15 ವರ್ಷಗಳ ಸಿನಿ ಪಯಣದ ಮಹಾ ನಿರೀಕ್ಷೆ ಶಂಕರಾಭರಣ : ಶೈನ್ ಶೆಟ್ಟಿ

Published : Nov 20, 2026, 12:24 PM IST
Shine Shetty

ಸಾರಾಂಶ

ಶೈನ್ ಶೆಟ್ಟಿ ನಟನೆ, ನಿರ್ಮಾಣದ, ‘ಮಿಥ್ಯ’ ಖ್ಯಾತಿಯ ಸುಮಂತ್ ಭಟ್ ನಿರ್ದೇಶನದ, ದಿವಾಕರ ಶೆಟ್ಟಿ ನಿರ್ಮಾಣದ ‘ಶಂಕರಾಭರಣ’ ಇಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಶೈನ್ ಶೆಟ್ಟಿ ಆಡಿರುವ ಮಾತುಗಳು.

- ರಾಜ್

- ‘ಏಕಂ’ ವೆಬ್ ಸೀರೀಸ್ ಶೂಟಿಂಗ್ ವೇಳೆ ಬಸ್ ಸ್ಟಾಪ್‌ಗೆ ಬಸ್ ಬರುವುದನ್ನು ನೋಡಿ, ಇಡೀ ಸಿನಿಮಾವನ್ನೇ ಒಂದು ಬಸ್ ಸುತ್ತ ಮಾಡಿದರೆ ಹೇಗಿರುತ್ತದೆ, ಆ ಬಸ್ಸಿನೊಳಗೆ ಒಂದು ಅದೃಶ್ಯ ಶಕ್ತಿ ಇದ್ದರೆ ಹೇಗಿರುತ್ತದೆ ಎಂಬ ಆಲೋಚನೆ ಹುಟ್ಟಿತು. ಹಾಗೆ ಹುಟ್ಟಿಕೊಂಡ ಕತೆಯಿತು. ಈ ಸಿನಿಮಾ ಕೇವಲ ಹಾರರ್ ಅಲ್ಲ, ಇದರಲ್ಲಿ ದೆವ್ವವೂ ಇದೆ, ದೈವವೂ ಇದೆ.

ಚಾಲಕ ಗಿರಿ ಅವರೇ ಈ ಚಿತ್ರದ ಶಂಕರನ ಪಾತ್ರಕ್ಕೆ ಮುಖ್ಯ ಪ್ರೇರಣೆ

- ನಾನು ಬಾಲ್ಯದಲ್ಲಿ ಓಡಾಡುತ್ತಿದ್ದ ಚಂದ್ರಮಣಿ ಬಸ್ಸಿನ ಚಾಲಕ ಗಿರಿ ಅವರೇ ಈ ಚಿತ್ರದ ಶಂಕರನ ಪಾತ್ರಕ್ಕೆ ಮುಖ್ಯ ಪ್ರೇರಣೆ. ಒಮ್ಮೆ ಬಸ್ ಡೋರ್ ತೆರೆದು ನಾನು ಬೀಳುವಂತಾದಾಗ, ನನ್ನ ಸ್ಕೂಲ್ ಟೈ ಹಿಡಿದು ಎಳೆದು ಅವರು ನನ್ನನ್ನು ಕಾಪಾಡಿದ್ದರು. ಅಂದಿನಿಂದ ಅವರು ನನಗೆ ದೇವರಂತಾದರು. ಆಗ ಕರಾವಳಿ ಕಡೆ ದೊಡ್ಡ ಸಿನಿಮಾ ನಟರು ಹೆಚ್ಚು ಬರುತ್ತಿರಲಿಲ್ಲ. ದರ್ಶನ್ ಸರ್ ಫೋಟೋ, ಹಾಡುಗಳನ್ನು ಹಾಕಿಕೊಂಡು ಅವರದ್ದೇ ಶೈಲಿಯಲ್ಲಿರುತ್ತಿದ್ದ 6.2 ಅಡಿ ಎತ್ತರದ ಗಿರಿ ಅವರೇ ನಮಗೆ ಸೂಪರ್ ಸ್ಟಾರ್ ಆಗಿದ್ದರು.

ಕರ್ನಾಟಕ ಹುಡುಕಾಡಿ ಈ ಚಿತ್ರದಲ್ಲಿರುವ ಬಸ್ ತಂದೆವು

- ಇಡೀ ಕರ್ನಾಟಕ ಹುಡುಕಾಡಿ ಈ ಚಿತ್ರದಲ್ಲಿರುವ ಬಸ್ ತಂದೆವು. ಇನ್ನೊಂದು ವಾರ ಬಿಟ್ಟಿದ್ದರೆ ಸ್ಕ್ರ್ಯಾಪ್‌ಗೆ ಹೋಗುತ್ತಿದ್ದ 15 ವರ್ಷ ಹಳೆಯ ಈ ಬಸ್ಸನ್ನು ಮತ್ತೆ ಸಿದ್ಧಪಡಿಸಿ, ಎಫ್‌ಸಿ ಮಾಡಿಸಿ ರಸ್ತೆಗೆ ಇಳಿಸಿದೆವು. ಜೀವನವೇ ಮುಗಿಯಿತು ಎನ್ನುವ ಹಂತದಲ್ಲಿ ಈ ಬಸ್ಸಿಗೆ ಸಿನಿಮಾ ನಟನಾಗಿ ಎರಡನೇ ಅಧ್ಯಾಯ ಶುರುವಾಯಿತು. - ಲೋಕಲ್ ಬಸ್ ಡ್ರೈವರ್ ಪಾತ್ರಕ್ಕೆ ಸಿಕ್ಸ್ ಪ್ಯಾಕ್ ಬೇಕಿಲ್ಲ, ಬಸ್ ಓಡಿಸುವುದು ಗೊತ್ತಿರಬೇಕು. ಗ್ರೀನ್ ಸ್ಕ್ರೀನ್‌ನಲ್ಲಿ ನಟಿಸುವ ಬದಲು ನೈಜವಾಗಿ ಇರಲೆಂದು ಹಾಗೂ ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿಯಿಂದ ಬೆಂಗಳೂರಿನ ರೈಡರ್ಸ್ ಡ್ರೈವಿಂಗ್ ಸ್ಕೂಲ್‌ನಲ್ಲಿ 10 ತರಗತಿ ತೆಗೆದುಕೊಂಡು ಬಸ್ ಡ್ರೈವಿಂಗ್ ಕಲಿತು ಅಧಿಕೃತ ಲೈಸೆನ್ಸ್ ಪಡೆದೆ. ಬೆಂಗಳೂರಿನಲ್ಲೇ ಬಸ್ ಓಡಿಸಲು ಕಲಿತ ಮೇಲೆ ಎಲ್ಲಿ ಬೇಕಾದರೂ ಓಡಿಸಬಹುದು ಅನಿಸಿತು. ಕೈ ಮೇಲಿರುವ ನಂಬರ್‌ಗಳ ಟ್ಯಾಟೂ ಕೂಡ ಶಂಕರನ ಪಾತ್ರಕ್ಕಾಗಿಯೇ ಹಾಕಿಸಿಕೊಂಡಿದ್ದು.

- ಗಂಡುಮಕ್ಕಳಿಗೆ ಚಿನ್ನ-ವಜ್ರಕ್ಕಿಂತ ತಮ್ಮ ವಾಹನಗಳೇ ಆಭರಣ. ಪಾತ್ರದ ಹೆಸರು ಶಂಕರ, ಅವನಿಗೆ ಬಸ್ಸೇ ಆಭರಣ. ಎಲ್ಲೂ ಇಲ್ಲದ ಹೊಸ ಹೆಸರು ಬೇಕಿತ್ತು ಅನ್ನುವ ಕಾರಣಕ್ಕೆ ಈ ಹೆಸರಿಟ್ಟೆವು. ನಾಳೆ ಈ ಸಿನಿಮಾ ನೋಡಿ ಮೂರು-ನಾಲ್ಕು ಜನ ತಮ್ಮ ಬಸ್ಸಿಗೆ ‘ಶಂಕರಾಭರಣ’ ಎಂದು ಹೆಸರಿಟ್ಟರೆ ನನಗೆ ತುಂಬಾ ಖುಷಿಯಾಗುತ್ತದೆ.

- ಟ್ರೇಲರ್‌ನಲ್ಲಿ ಬರುವ ‘15 ವರ್ಷದ ನಿರೀಕ್ಷೆಯ ಶಂಕರಾಭರಣ’ ಎಂಬ ಮಾತು ನನ್ನ 15 ವರ್ಷಗಳ ಸಿನಿಮಾ ಪಯಣಕ್ಕೂ ಹೊಂದಿಕೆಯಾಗುತ್ತದೆ. ಸೀರಿಯಲ್, ರಿಯಾಲಿಟಿ ಶೋ ಎಲ್ಲಾ ಮಾಡಿ ಅಂದುಕೊಂಡ ಅವಕಾಶ ಸಿಗದಿದ್ದಾಗ ‘ರಂಗಸ್ಥಳ ಸ್ಟುಡಿಯೋಸ್’ ಶುರು ಮಾಡಿದಂತೆ, ಶಂಕರನ ಪಾತ್ರವೂ ತನ್ನ ಬದುಕಿಗಾಗಿ ಬಸ್ ಹಾಕುತ್ತದೆ. ಬಿಗ್ ಬಾಸ್‌ನಲ್ಲಿ 114 ದಿನ ನೋಡಿ ಜನರು ನನ್ನನ್ನು ಗೆಲ್ಲಿಸಿದ್ದು ‘ಇವನು ಏನಾದರೂ ಸಾಧಿಸುತ್ತಾನೆ’ ಎಂಬ ನಂಬಿಕೆಯಿಂದ. ಆ ಭರವಸೆಗೆ ಉತ್ತರವಾಗಿ ಒಳ್ಳೆಯ ಮನರಂಜನೆ ನೀಡಲೆಂದೇ ಈ ಪ್ರಯತ್ನ.

- ಸೀರಿಯಲ್ ಬಿಟ್ಟು ಬದುಕಿನ ಹೋರಾಟದಲ್ಲಿದ್ದಾಗ ಸ್ಕಾರ್ಪಿಯೋ ಮಾರಿ, ಗಲ್ಲಿ ಕಿಚನ್ ಹೋಟೆಲ್ ಕೆಲಸಕ್ಕೆಂದು ಕ್ಲಾಸ್ ಆಗಿರುತ್ತದೆ ಎಂದು ಹಳೆಯ ‘ಪ್ರೀಮಿಯರ್ ಪದ್ಮಿನಿ’ ಕಾರು ತೆಗೆದುಕೊಂಡಿದ್ದೆ. ಕೆ.ಆರ್. ಮಾರ್ಕೆಟ್‌ನಿಂದ ತೆಂಗಿನಕಾಯಿ ಚೀಲ ತರಲು ಬಳಸುತ್ತಿದ್ದ ಆ ಕಾರು ಎರಡು ವರ್ಷ ಒಳ್ಳೆಯ ಸಾಥ್ ನೀಡಿದ್ದರಿಂದ ಇಂದಿಗೂ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಪ್ರೀಮಿಯರ್ ಪದ್ಮಿನಿ ರೀತಿ ಈಗ ಈ ಹಳೆಯ ಬಸ್ಸಿಗೂ ಜೀವ ಕೊಟ್ಟಿದ್ದೇವೆ, ಇದು ಇಡೀ ಚಿತ್ರತಂಡದ ಕಲಾವಿದರು-ತಂತ್ರಜ್ಞರಿಗೆ ಉಜ್ವಲ ಭವಿಷ್ಯ ಕಟ್ಟಿಕೊಡಲಿದೆ.

- ನಮ್ಮ ಮಗ ಏನಾದರೂ ಸಾಧಿಸುತ್ತಾನೆ ಎಂಬ ತಂದೆ-ತಾಯಿಯರ ಹಾಗೂ ಟಿವಿ ಮೂಲಕ ನಮ್ಮನ್ನು ಮೆಚ್ಚಿದ ಜನರ ನಂಬಿಕೆಗೆ ಮೋಸವಾಗಬಾರದು ಎಂಬುದೇ ನನ್ನ ನಿರಂತರ ಪ್ರಯತ್ನಕ್ಕೆ ಸ್ಫೂರ್ತಿ. ಕನಸುಗಳನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ಬದುಕಲು ಒಂದು ದಾರಿ ಮಾಡಿಕೊಂಡು, ಇತರರಿಗೂ ದಾರಿಯಾಗಬೇಕು ಎಂಬುದು ನನ್ನ ಉದ್ದೇಶ.

- ನಮ್ಮ ಚಿತ್ರದ ಟ್ರೇಲರ್ ನೋಡಿ ಮಲಯಾಳಂ, ತಮಿಳು ಸೇರಿದಂತೆ ಬೇರೆ ಚಿತ್ರರಂಗಗಳಿಂದಲೂ ಮೆಚ್ಚುಗೆ ಮತ್ತು ಕರೆಗಳು ಬಂದಿವೆ. ಚೀನಾ ಚಿತ್ರೋತ್ಸವದಲ್ಲಿ ಜನ ಮೆಚ್ಚುಗೆ ತೋರಿದ್ದಾರೆ. ಈ ಸಿನಿಮಾವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಚಿತ್ರಮಂದಿರದಲ್ಲೇ ನೋಡಿ ಬೆಂಬಲಿಸಿ ಎಂಬುದು ಆ ಹೊತ್ತಿನ ಪ್ರಾರ್ಥನೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಮಸಾಲೆ ದೋಸೆ ಹೋಟೆಲ್‌ಗೆ ಬರೋದು ಮಸಾಲೆ ದೋಸೆ ನಿರೀಕ್ಷೆಯಲ್ಲೇ: ಗಣೇಶ್‌
ಮತ್ತೆ ಜೋಡಿಯಾಗುತ್ತಿರುವ ರಮೇಶ್‌ ಅರವಿಂದ್‌, ಸುಹಾಸಿನಿ