ಫಿಟ್‌ನೆಸ್‌ ಹೆಸರಲ್ಲಿ ಪೌಡರ್‌ ಮಾರುವ ಶಿವಮ್ಮನ ಕತೆ: ಜೈಶಂಕರ್‌

KannadaprabhaNewsNetwork | Updated : Jun 14 2024, 05:50 AM IST

ಸಾರಾಂಶ

ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಅನೇಕ ಪ್ರಶಸ್ತಿ ಪಡೆದಿರುವ ‘ಶಿವಮ್ಮ’ ಸಿನಿಮಾ ಇದೀಗ ರಾಜ್ಯದಲ್ಲಿ ತೆರೆಕಾಣುತ್ತಿದೆ. ರಿಷಬ್‌ ಶೆಟ್ಟಿ ನಿರ್ಮಾಣದ ಈ ಸಿನಿಮಾದ ಬಗ್ಗೆ ನಿರ್ದೇಶಕ ಜೈ ಶಂಕರ್‌ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

- ‘ಶಿವಮ್ಮ’ನ ಜೊತೆ ನನ್ನ ಸುಮಾರು ವರ್ಷಗಳ ಜರ್ನಿ ಇದೆ. ಚಿತ್ರ ರೆಡಿ ಆದಮೇಲೆ ಚಿತ್ರೋತ್ಸವದ ಹಾದಿ ಹಿಡಿದೆ. ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಜರ್ನಿ ಮಾಡಿ ಈಗ ಸರ್ವ ಜನರ ಮುಂದೆ ಬಂದಿದ್ದೇವೆ. ಇದೊಂದು ಕಂಪ್ಲೀಟ್‌ ಸರ್ಕಲ್‌ ಅನಿಸುತ್ತಿದೆ. 

- ‘ಶಿವಮ್ಮ’ ಟ್ರೇಲರ್‌ಗೆ ಬಂದ ಪ್ರತಿಕ್ರಿಯೆ ನೋಡಿದಾಗ ಜನ ಇದನ್ನು ಫೆಸ್ಟಿವಲ್‌ ಸಿನಿಮಾ ಅಂತ ನೋಡದೇ ಅನನ್ಯ, ಫ್ರೆಶ್‌ ಫೀಲ್‌ನ ಸಿನಿಮಾ ಅಂತ ನೋಡ್ತಿದ್ದಾರೆ ಅನಿಸಿತು. ಸಿನಿಮಾಕ್ಕೆ ಜನರ ಪ್ರತಿಕ್ರಿಯೆ ಬಗ್ಗೆ ಕುತೂಹಲ, ಎಗ್ಸೈಟ್‌ಮೆಂಟ್‌ ಇದೆ. ಜನ ಉತ್ತಮ ಸ್ಪಂದನೆ ನೀಡಿದರೆ ಇಂಥಾ ಸಿನಿಮಾ ಮಾಡುವ ಎಲ್ಲರಿಗೂ ಪ್ರೇರಣೆಯಾಗುತ್ತದೆ.

- ಜನಸಾಮಾನ್ಯರ ಜೊತೆಗೆ ಕನೆಕ್ಟ್‌ ಆಗುವಂತೆ ಸಿನಿಮಾದ ಸಬ್ಜೆಕ್ಟ್‌ ಇದೆ. ಆರೋಗ್ಯ, ಫಿಟ್‌ನೆಸ್‌ ಹೆಸರಲ್ಲಿ ಪೌಡರ್‌ ಮಾರುವವರನ್ನು ಹತ್ತಿರದಿಂದ ಕಂಡಿದ್ದೆ. ಇವರ ಮೋಟಿವೇಶನ್‌ ಏನು, ಇವರ ತಲೆಯಲ್ಲಿ ಏನು ಓಡುತ್ತಿರುತ್ತೆ ಅಂತ ಸೂಕ್ಷ್ಮವಾಗಿ ಗಮನಿಸಿದ್ದೆ. ಕುತೂಹಲ ಹೆಚ್ಚಿ ಈ ಬಗ್ಗೆ ರಿಸರ್ಚ್‌ ಮಾಡುತ್ತಾ ಹೋದಾಗ ಈ ಕಥೆ ಬೆಳೆಯುತ್ತಾ ಹೋಯಿತು.

- ನಾನು ಕಥೆ ಬರೆಯುವಾಗ ನನ್ನ ತಂದೆಯ ಊರು ಯರೇಹಂಚಿನಾಳದ ಸಣ್ಣ ಸಣ್ಣ ಓಣಿಗಳು, ಒಂದು ಮನೆ ದಾಟಿದರೆ ಇನ್ನೊಂದು ಮನೆಯ ದೃಶ್ಯಗಳೇ ಮನಸ್ಸಿಗೆ ಬರುತ್ತಿದ್ದವು. ಉತ್ತರ ಕರ್ನಾಟಕದ ಈ ಪುಟ್ಟ ಹಳ್ಳಿಯನ್ನು ನೀವು ಟಾಪ್‌ ಆ್ಯಂಗಲ್‌ನಿಂದ ನೋಡಿದರೆ ಇಡೀ ಊರಿನ ಮನೆಗಳೆಲ್ಲ ಒಂದೇ ಲೆವೆಲ್‌ನಲ್ಲಿರೋದು ಗೊತ್ತಾಗುತ್ತದೆ. ಒಂದು ಮನೆಯಲ್ಲೂ ಮಹಡಿ ಇಲ್ಲ. ಇಂಥಾ ಅಪರೂಪದ ಊರಿನ ಮೂಲಕವೇ ನನ್ನ ಕಥೆ ಹೇಳಬೇಕು ಎಂದುಕೊಂಡೆ. - ಶೂಟಿಂಗ್‌ಗೆ ಹೋದರೆ ಊರಿನ ಜನ ‘ಶೂಟಿಂಗ್‌ ಮಾಡುವಂಥಾ ಜಾಗಗಳು ನಮ್ಮೂರಲ್ಲೇನಿವೆ?’ ಎನ್ನುತ್ತಾ ದೇವಸ್ಥಾನ, ಡ್ಯಾಮ್‌ಗಳನ್ನೆಲ್ಲ ತೋರಿಸಲು ಶುರು ಮಾಡಿದರು. ಅವರ ಪ್ರಕಾರ ಸಿನಿಮಾ ಅಂದರೆ ಸುಂದರ ಜಾಗಗಳು. ನಿಮ್ಮ ಕತೆಗಳನ್ನೇ ಹೇಳ ಹೊರಟಿದ್ದೀನಿ ಅಂತ ಅವರ ಮನೆಗಳಲ್ಲೇ ಕ್ಯಾಮರಾ ಇಟ್ಟಾಗ ನಿಧಾನಕ್ಕೆ ತಮ್ಮೂರಲ್ಲೂ ಶೂಟಿಂಗ್‌ ಮಾಡಬಹುದು ಎಂಬುದನ್ನು ಅರಗಿಸಿಕೊಂಡರು. ಶಿವಮ್ಮನ ಮನೆ ಸೆಟ್‌ ಮಾಡಲಿಕ್ಕೆ ಎಲ್ಲರ ಮನೆಯಿಂದ ಒಂದೊಂದು ಪ್ರಾಪರ್ಟಿ ತಂದು ಡಿಸೈನ್‌ ಮಾಡಿದೆವು. ಇಡೀ ಊರಿನ ಕೊಡುಗೆ ಈ ಸಿನಿಮಾದಲ್ಲಿದೆ.

- ಈ ಸಿನಿಮಾ ಸಹಜವಾಗಿದೆ. ಈ ಟೆಕ್ನಿಕ್‌ ಕೊಂಚ ಭಿನ್ನವಾದರೂ ತಮ್ಮ ಮನೆ, ಅಕ್ಕಪಕ್ಕದ ಮನೆ ಕಥೆಯನ್ನೇ ಹೇಳುತ್ತಿರುವುದರಿಂದ ಜನರಿಗೆ ಸಿನಿಮಾದಲ್ಲಿ ತನ್ಮಯರಾಗಲು ಸಮಸ್ಯೆ ಆಗಲ್ಲ.

- ನಾನು ಇಂಜಿನಿಯರಿಂಗ್‌ ಹಿನ್ನೆಲೆಯಿಂದ ಬಂದವನು. ಕಾಲೇಜು ಮುಗಿಸಿ ಒಂದೆರಡು ನಾಟಕಗಳಲ್ಲಿ ತೊಡಗಿಸಿಕೊಂಡೆ. ಸಿನಿಮಾಗಳನ್ನು ತೀವ್ರವಾಗಿ ನೋಡತೊಡಗಿದೆ. ನನ್ನಲ್ಲೂ ಸಿನಿಮಾ ಪ್ರೀತಿ ಬೆಳೆದು ‘ನರಸಿಂಹಯ್ಯನ ಫಿಲಂ’ ಎಂಬ ಕಿರುಚಿತ್ರ ಮಾಡಿದೆ. ಇಲ್ಲಿಂದ ರಿಷಬ್‌ ಶೆಟ್ಟಿ ಕನೆಕ್ಟ್‌ ಆದರು. ಆಮೇಲೆ ಅವರ ಕಥಾಸಂಗಮದಲ್ಲಿ ‘ಲಚ್ಚವ್ವ’ನ ಕಥೆ ಹೇಳಿದೆ. ಇದೀಗ ‘ಶಿವಮ್ಮ’ನ ಕಥೆ ಹೇಳಹೊರಟಿದ್ದೇನೆ.

Share this article