ಸಿನಿವಾರ್ತೆ
ಹೊಸ ವರ್ಷದ ಆರಂಭದಲ್ಲೇ ಶಿವರಾಜ್ ಕುಮಾರ್ ಅವರಿಂದ ಸಿಹಿ ಸುದ್ದಿ ಬಂದಿದೆ. ಶಿವಣ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿರುವುದಾಗಿ ಗೀತಾ ಶಿವರಾಜ್‌ಕುಮಾರ್ ವೀಡಿಯೋ ಹಂಚಿಕೊಂಡು ಸಂತೋಷದ ವಾರ್ತೆ ತಿಳಿಸಿದ್ದಾರೆ. ಇದೇ ವೇಳೆ ಶಿವಣ್ಣ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಗೀತಾ ಶಿವರಾಜ್ ಕುಮಾರ್, ‘ನಿಮ್ಮೆಲ್ಲರ ಪ್ರಾರ್ಥನೆಯ ಫಲದಿಂದ ಶಿವರಾಜ್ ಕುಮಾರ್ ಅವರ ಎಲ್ಲ ರಿಪೋರ್ಟೂ ನೆಗೆಟಿವ್ ಆಗಿ ಬಂದಿದೆ. ಈಗ ಅವರು ಕ್ಯಾನ್ಸರ್ ಫ್ರೀ ಅಂತ ವೈದ್ಯರು ಅಧಿಕೃತವಾಗಿ ಹೇಳಿದ್ದಾರೆ’ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ಅವರ ಮಾತಿನ ಪೂರ್ಣಪಾಠ ಇಲ್ಲಿದೆ. - ಮಾತು ಶುರು ಮಾಡಿದರೆ ಎಲ್ಲಿ ಭಾವುಕನಾಗ್ತೀನೋ ಎಂಬ ಭಯ. ಮನೆಯಿಂದ ಹೊರಡುವಾಗಲೂ ಕೊಂಚ ಭಾವುಕನಾಗಿದ್ದೆ. ಆದರೆ ನನ್ನ ಭಯವನ್ನು ನೀಗಿಸಲೆಂದೇ ಅಭಿಮಾನಿ ದೇವರುಗಳು, ಸಹ ಕಲಾವಿದರು, ಸ್ನೇಹಿತರು, ಸಂಬಂಧಿಕರು, ವೈದ್ಯರೆಲ್ಲ ಇದ್ದಾರೆ. ಅವರೆಲ್ಲ ಜೊತೆಗಿರುವಾಗ ನಾನ್ಯಾಕೆ ಹೆದರಿಕೊಳ್ಳಲಿ..
- ಕೀಮೋ ಥೆರಪಿ ಮಾಡಿಸಿಕೊಳ್ಳುತ್ತಿರುವಾಗಲೇ ಅರ್ಜುನ್ ಜನ್ಯಾ ನಿರ್ದೇಶನದ ‘45’ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ಅದ್ಯಾವ ಜೋಶ್‌ನಲ್ಲೇ ಕೆಲಸ ಮಾಡಿದೆನೋ ಗೊತ್ತಿಲ್ಲ. ಆದರೆ ಅಮೆರಿಕಾಗೆ ಹೊರಡುವ ದಿನ ಹತ್ತಿರ ಬರುತ್ತಿದ್ದ ಹಾಗೆ ಭಯ ಆವರಿಸತೊಡಗಿತ್ತು. - ಹೆಚ್ಚಿನವರು ನನಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಆಗಿರೋದು ಅಂತ ಅಂದುಕೊಂಡಿದ್ದಾರೆ. ಆ ರೀತಿ ಏನೂ ಅಲ್ಲ. ಇದು ದೊಡ್ಡ ಆಪರೇಶನ್. ಸಿಂಪಲ್ ಆಗಿ ಹೇಳಬೇಕೆಂದರೆ ಯೂರಿನರಿ ಬ್ಲಾಡರ್ ತೆಗೆದು ಹೊಸತು ಹಾಕಿದ್ದಾರೆ. ನಿಮ್ಮ ಹಾರೈಕೆ. ಆಶೀರ್ವಾದ ಎಂದೂ ಮರೆಯಲ್ಲ.
- ಆದಷ್ಟು ಬೇಗ ಬರ್ತಿನಿ. ಈಗ ಸ್ವಲ್ಪ ನಿಧಾನ ಮಾಡಿ, ಮಾರ್ಚ್ ನಂತರ ನಿಮ್ಮ ಎಂದಿನ ಚಾಳಿ ಬಿಚ್ಕೊಳ್ಳಿ ಅಂತ ಡಾಕ್ಟರ್ ಹೇಳಿದ್ದಾರೆ. ಶಿವಣ್ಣ ಆವಾಗ ಹೇಗಿದ್ನೋ, ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್, ಫೈಟ್ ಎಲ್ಲದರ ಜೊತೆ ನಿಮ್ಮ ಮುಂದೆ ಬರ್ತೀನಿ.