ಅಪರ್ಣಾ ನನ್ನ ಜೊತೆಯೇ ಇರುತ್ತಾರೆ

KannadaprabhaNewsNetwork |  
Published : Jul 13, 2024, 01:33 AM ISTUpdated : Jul 13, 2024, 07:22 AM IST
shwetha changappa

ಸಾರಾಂಶ

ಇತ್ತೀಚೆಗಷ್ಟೆ ನಿಧನರಾದ ನಿರೂಪಕಿ ಅಪರ್ಣಾ ಅವರ ಜತೆಗಿನ ಒಡನಾಟವನ್ನು ನಟಿ ಶ್ವೇತಾ ಚಂಗಪ್ಪ ಮೆಲುಕು ಹಾಕಿದ್ದಾರೆ.

- ಶ್ವೇತಾ ಚಂಗಪ್ಪ

ಅಪರ್ಣಾ ಅವರಿಗೆ ಕ್ಯಾನ್ಸರ್‌ ಅಂತ ಗೊತ್ತಾದಾಗ ಯಾಕೆ ಒಳ್ಳೆಯವರಿಗೇ ಇಂಥಾ ಸಮಸ್ಯೆ ಕಾಡುತ್ತದೆ, ಆ ದೇವರಿಗೂ ಕರುಣೆ ಇಲ್ಲವಾಯಿತೇ ಎಂದು ದುಃಖಿಸಿದ್ದೇನೆ. ಅಪರ್ಣಾ ಅವರೊಂದಿಗಿನ ಒಡನಾಟ, ನೆನಪುಗಳು ಜೀವಂತ. ಹೀಗಾಗಿ ನಾನು ಅವರನ್ನು ಈ ರೀತಿ ನೋಡಲು ಇಷ್ಟಪಡದೆ ಅವರ ಅಂತಿಮ ದರ್ಶನಕ್ಕೆ ಬರಲು ಮೊದಲು ಮನಸ್ಸು ಬರಲಿಲ್ಲ. ಆದರೆ, ಮನಸ್ಸು ತಡೆಯಲಿಲ್ಲ.

ಅಪರ್ಣಾ ಎಂದಾಗ ನೆನಪಾಗುವುದು ಅವರ ನಗು, ಮೆಲು ಧ್ವನಿ, ಅಚ್ಚ ಕನ್ನಡದ ಮಾತು. ನಿರೂಪಕಿಯರ ಸಂದರ್ಶನ ಕಾರ್ಯಕ್ರಮದಲ್ಲಿ ಅಪರ್ಣಾ ಅವರನ್ನು ನಾನು ಮೊದಲು ಭೇಟಿ ಆದೆ. ತುಂಬಾ ಹತ್ತಿರ ಆಗಿದ್ದು ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ. ನನ್ನ ಮಗುವನ್ನು ನೋಡಕ್ಕೆ ಒಮ್ಮೆ ಮನೆಗೆ ಬಂದು ಹೋಗಿದ್ದರು. ಅದೇ ಕೊನೆ ಅಪರ್ಣಾ ಅವರನ್ನು ನೋಡಿದ್ದು.

ಆರೋಗ್ಯ ಸಮಸ್ಯೆ ಅವರನ್ನು ಎಷ್ಟು ಕಾಡಿಸಿದೆ, ನೋವು ಕೊಟ್ಟಿದೆ, ಕಷ್ಟಪಟ್ಟಿದ್ದಾರೆ ಎಂಬುದು ನನಗೆ ಗೊತ್ತು. ಆರೋಗ್ಯ ಸಮಸ್ಯೆಯನ್ನು ಎಲ್ಲರಿಂದಲೂ ಮುಚ್ಚಿಟ್ಟು, ಸಂತೋಷವಾಗಿದ್ದರು. ಎಲ್ಲರ ಜತೆಗೆ ಸಹಜವಾಗಿ ಇದ್ದರು. ಖುಷಿಯಿಂದ ಮಾತನಾಡಿಸುತ್ತಿದ್ದರು. ಜೀವನ ಪ್ರೀತಿಯನ್ನು ಅವರಿಂದ ಕಲಿಯಬೇಕು.

ನಾಲ್ಕು ಜನರ ನಮ್ಮ ಸ್ನೇಹಿತರ ಸರ್ಕಲ್ ಇದೆ. ಯಾವಾಗಲೂ ನಾವು ನೆನಪಿಸಿಕೊಳ್ಳುತ್ತಿದ್ದು ಅಪರ್ಣಾ ಅವರನ್ನೇ. ಅಪರ್ಣಾ ಕೋಮಾದಲ್ಲಿದ್ದಾರೆ ಅಂತ ಗೊತ್ತಾಗಿ ತುಂಬಾ ನೋವು ಪಟ್ಟಿದ್ದೇನೆ.

ಮಜಾ ಟಾಕೀಸ್‌ ಕಾರ್ಯಕ್ರಮದ ಮೂಲಕ ಅಪರ್ಣಾ ಅವರ ಜತೆಗಿನ ಒಡನಾಟ, ನೆನಪುಗಳು ಮರೆಯಲಾಗದು. ಆ ದಿನಗ‍ಳು ಮತ್ತೆ ಬರಲ್ಲ. ಚಿತ್ರರಂಗಕ್ಕೆ ಮತ್ತೆ ಬರಬೇಕು, ಒ‍ಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಕನಸು ಅಪರ್ಣಾ ಅವರಿಗೆ ಇತ್ತು. ಈಗ ತಿರುಗಿ ಬಾರದಂತೆ ಹೊರಟು ಬಿಟ್ಟಿದ್ದಾರೆ. ನಾನು ಅವರಿಗೆ ವಿದಾಯ ಹೇಳಲಾರೆ. ಯಾಕೆಂದರೆ ಅವರು ನನ್ನ ಜತೆಗೆ ಇದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

‘ಟಾಕ್ಸಿಕ್‌’ ಚಿತ್ರದ ಟೀಸರ್‌ ಬಿಡುಗಡೆ : ಅಭಿಮಾನಿಗಳಿಗೆ ಯಶ್‌ ಪತ್ರ
ತಿಥಿ ಚಿತ್ರದ ನಟ ‘ಸೆಂಚುರಿ’ಗೌಡ ಸೊಂಟದ ಮೂಳೆ ಮುರಿದು ನಿಧನ