ಸ್ಟಾರ್ ನಟರು ವರ್ಷಕ್ಕೆ 3-4 ಸಿನಿಮಾ ಮಾಡಿದರೆ ಏನೂ ಬದಲಾಗಲ್ಲ

KannadaprabhaNewsNetwork |  
Published : May 23, 2024, 01:01 AM ISTUpdated : May 23, 2024, 07:19 AM IST
ದುನಿ | Kannada Prabha

ಸಾರಾಂಶ

ದೊಡ್ಡ ತಾರೆಗಳು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು ಮೂರು- ನಾಲ್ಕು ಸಿನಿಮಾಗಳನ್ನು ಮಾಡಬೇಕು ಎನ್ನುವ ಚಿತ್ರರಂಗದ ಕೂಗಿಗೆ ಇಬ್ಬರು ನಟರು ಹೇಳಿದ್ದೇನು?

 ಸಿನಿವಾರ್ತೆ

ಚಿತ್ರರಂಗ ಉಳಿಸಲು ಸ್ಟಾರ್‌ಗಳ ಬಳಿ ವರ್ಷಕ್ಕೆ 2-3 ಸಿನಿಮಾ ಮಾಡಬೇಕು ಎಂದು ಬೇಡಿಕೆ ಇಡಲು ವಾಣಿಜ್ಯ ಮಂಡಳಿ ಮುಂದಾಳತ್ವದಲ್ಲಿ ಚಿತ್ರೋದ್ಯಮ ಮುಂದಾಗಿದೆ. ಆದರೆ ಸ್ಟಾರ್‌ ನಟರು ವರ್ಷಕ್ಕೆ 3-4 ಸಿನಿಮಾ ಮಾಡಿದರೆ ಚಿತ್ರರಂಗದ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ? ಈ ಕುರಿತು ಸ್ಟಾರ್‌ಗಳು ಏನಂತಾರೆ ಎಂದು ಕೇಳಿದಾಗ ಡಾಲಿ ಧನಂಜಯ್‌ ಮತ್ತು ದುನಿಯಾ ವಿಜಯ್‌ ಹೇಳಿದ ಅಭಿಪ್ರಾಯಗಳು ಇಲ್ಲಿವೆ. ಈ ವಿಚಾರಗಳನ್ನೂ ಗಂಭೀರವಾಗಿ ಯೋಚಿಸಬೇಕಾಗಿದೆ.

ಕೇರಳ ಥರ ಸರ್ಕಾರಿ ಓಟಿಟಿ ಮಾಡಿ, ಕತೆಗೆ ಮಹತ್ವ ಕೊಡಿ: ದುನಿಯಾ ವಿಜಯ್‌

ಸ್ಟಾರ್‌ ಹೀರೋಗಳು ವರ್ಷಕ್ಕೆ 3-4 ಸಿನಿಮಾ ಮಾಡಬೇಕು ಅನ್ನುವುದಕ್ಕಿಂತ ಬೇರೊಂದು ದಿಕ್ಕಿನಲ್ಲಿ ಯೋಚನೆ ಮಾಡಬೇಕಿದೆ. ಈ ವರ್ಷ ಮಲಯಾಳಂನಲ್ಲಿ ಹಿಟ್‌ ಆದ ನಾಲ್ಕೈದು ಚಿತ್ರಗಳನ್ನು ನೋಡಿದರೆ ಅವು ಗೆದ್ದಿದ್ದು ಕಂಟೆಂಟ್‌ನಿಂದ. ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಡ್ಯುಯೇಟ್ ಇಲ್ಲ, ರೇಪ್ ಸೀನ್, ಫೈಟ್‌ ಇಲ್ಲ. ‘ಆವೇಶಂ’ ಚಿತ್ರದಲ್ಲಿ ಐಟಂ ಸಾಂಗ್‌ ಇಲ್ಲ... ಆದರೂ ಗೆದ್ದಿವೆ. ‘ಪ್ರೇಮುಲು’ ಸೂಪರ್‌ ಹಿಟ್‌ ಆಗಿದೆ. ಈ ಎಲ್ಲಾ ಚಿತ್ರಗಳಲ್ಲಿರುವ ಕಾಮನ್‌ ಪಾಯಿಂಟ್‌ ಕತೆ. ನಮ್ಮಲ್ಲಿ ನಾವು ಎಷ್ಟು ಮಂದಿ ಕತೆಗಾರರನ್ನು ಬೆಳೆಸಿದ್ದೇವೆ? ಇರೋ ಕತೆಗಾರರಿಗೆ ನಾವು ಬೆಲೆ ಕೊಟ್ಟಿದ್ದೇವೆಯೇ?

ನಾವು ದುಡ್ಡಿಗೆ ಕೊಡುವ ಮಹತ್ವ ಬುದ್ಧಿಗೆ ಕೊಡುತ್ತಿಲ್ಲ. ಸಿನಿಮಾಗಳ ಸಂಖ್ಯೆಗಿಂತ ಕತೆಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಬೇಕಿದೆ. ಒಬ್ಬ ಹೀರೋ ವರ್ಷಕ್ಕೆ 3-4 ಸಿನಿಮಾ ಮಾಡೋದು ಉತ್ತಮನಾ, ಒಬ್ಬ ಹೀರೋ ಒಂದು ಸಿನಿಮಾ ಮಾಡಿ, ಅದು ಕನಿಷ್ಠ ಎರಡರಿಂದ ಮೂರು ತಿಂಗಳು ಥಿಯೇಟರ್‌ನಲ್ಲಿ ಇರುವಂತೆ ಮಾಡೋದು ಮುಖ್ಯನಾ ಅಂತ ಯೋಚಿಸಿ. ಹಾಗೆ ಒಬ್ಬ ಹೀರೋ ನಟಿಸಿದ ಒಂದು ಸಿನಿಮಾ ಎರಡು ತಿಂಗಳು ಥಿಯೇಟರ್‌ನಲ್ಲಿ ಇದ್ದರೆ ವರ್ಷಕ್ಕೆ ಇಂಥ ಎಂಟು ಸಿನಿಮಾಗಳು ಬಂದರೆ 16 ತಿಂಗಳು ಚಿತ್ರರಂಗಕ್ಕೆ ಸಂಭ್ರಮಿಸುತ್ತದೆ. ಆದರೆ, ನಾವು ಈ ನಿಟ್ಟಿನಲ್ಲಿ ಯೋಚನೆ ಮಾಡುತ್ತಿಲ್ಲ.

ಸ್ಯಾಟಲೈಟ್‌ ಚಾನಲ್‌ಗಳಿಗೆ ಸಿನಿಮಾಗಳು ಬೇಡವಾಗಿವೆ. ಥಿಯೇಟರ್‌ಗಳಿಗೆ ಬರೋಣ ಅಂದರೆ ಮರು ದಿನವೇ ಟೆಲಿಗ್ರಾಮ್‌ನಲ್ಲಿ ಆ ಸಿನಿಮಾ ಬರುತ್ತದೆ. ಮೊದಲು ಸರ್ಕಾರವೇ ಮುಂದೆ ನಿಂತು ಟೆಲಿಗ್ರಾಮ್‌ ಆ್ಯಪ್‌ ಬ್ಯಾನ್‌ ಮಾಡಲಿ. ಎಲ್ಲಾ ಸಿನಿಮಾಗಳಿಗೂ ಟಿಕೆಟ್‌ ಬೆಲೆ ಮಾಡಲಿ. ಕೇರಳ ಮಾದರಿಯಲ್ಲಿ ಸರ್ಕಾರದ ಓಟಿಟಿ ಶುರುವಾಗಲಿ.

ಯಾವುದನ್ನು ಯಾರ ಮೇಲೂ ಹೇರಕ್ಕಾಗಲ್ಲ: ಡಾಲಿ ಧನಂಜಯ್‌

ಇಂತಿಂಥಾ ನಟರು ವರ್ಷಕ್ಕೆ ಇಂತಿಷ್ಟು ಸಿನಿಮಾಗಳನ್ನು ಮಾಡಬೇಕೆಂದು ಒತ್ತಾಯ ಮಾಡಕ್ಕಾಗಲ್ಲ. ಯಾಕೆಂದರೆ ಪ್ರತಿಯೊಬ್ಬರಿಗೂ ಅವರದ್ದೇ ಆಯ್ಕೆಗಳಿರುತ್ತವೆ. ಈ ಆಯ್ಕೆಗಳಲ್ಲಿ ಅವರ ಕೆರಿಯರ್‌, ಭವಿಷ್ಯ ಎಲ್ಲವೂ ಅಡಗಿರುತ್ತದೆ. ನನ್ನ ನಿರ್ಮಾಣದಲ್ಲಿ 2 ಹೊಸಬರ ಸಿನಿಮಾಗಳು ತಯಾರಾಗುತ್ತಿವೆ, ನನ್ನ ನಟನೆಯ ಎರಡು ಚಿತ್ರಗಳು ಬರಲಿವೆ. ಇದು ನನ್ನ ಆಯ್ಕೆ. ಇದೇ ಬೇರೆಯವರು ಮಾಡಬೇಕು ಅಂದರೆ ಹೇಗೆ? ಅಲ್ಲದೆ ನಾನು ವರ್ಷಕ್ಕೆ ನಾಲ್ಕು ಸಿನಿಮಾ ಮಾಡುವಾಗ ‘ಧನಂಜಯ್‌ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ’ ಎಂದರು. ಈಗ ಇದ್ದಕ್ಕಿದ್ದಂತೆ ವರ್ಷಕ್ಕೆ 3-4 ಸಿನಿಮಾ ಮಾಡಿ ಅಂದ ಕೂಡಲೇ ಎಲ್ಲವೂ ಬದಲಾಗುತ್ತದೆಯೇ?

ಅಲ್ಲದೇ, ಸ್ಟಾರ್‌ ಹೀರೋಗಳ ಸಿನಿಮಾಗಳನ್ನು ನಿರಂತರವಾಗಿ ನಿರ್ಮಿಸುವ ಪ್ರೊಡಕ್ಷನ್‌ ಸಂಸ್ಥೆಗಳು ನಮ್ಮಲ್ಲಿ ಎಷ್ಟಿವೆ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವವರು ಎಷ್ಟು ಮಂದಿ ಇದ್ದಾರೆ ಹೇಳಿ. ಈಗ ಸಡನ್ನಾಗಿ ಎಲ್ಲವೂ ಬದಲಾಗಬೇಕು ಅಂದರೆ ಆಗಲ್ಲ. ಯಾಕೆಂದರೆ ಯಾವುದೇ ಸಮಸ್ಯೆ ಈಗ ಹುಟ್ಟಿಕೊಂಡಿರೋದು ಅಲ್ಲ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌