ಮದ್ಯಪಾನ, ಮದ್ಯವರ್ತಿ ಎರಡರಿಂದಲೂ ದೂರ : ಶಿವಣ್ಣ

Published : Oct 02, 2026, 01:34 PM IST
Shivanna

ಸಾರಾಂಶ

ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ ನಾರಾಯಣ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ, ಶಿವರಾಜ್‌ಕುಮಾರ್‌, ಸಾಯಿಕುಮಾರ್‌ ಹಾಗೂ ಜಯರಾಮ್‌ ಅಭಿನಯದ ‘ಬೇಲ್’ ಇಂದು (ಅ.2) ಅದ್ದೂರಿಯಾಗಿ ಬಿಡುಗಡೆ . ಕನ್ನಡದಲ್ಲಿ ಬಹಳ ದಿನಗಳ ನಂತರ ಶಿವಣ್ಣ ಸಿನಿಮಾ ರಿಲೀಸ್ . ಈ ಸಂದರ್ಭದಲ್ಲಿ ಶಿವಣ್ಣ ಮಾತನಾಡಿದ್ದಾರೆ.

‘ಬೇಲ್’ ಬಿಡುಗಡೆ ಪ್ರಯುಕ್ತ ಶಿವರಾಜ್ ಕುಮಾರ್ ಮುಕ್ತ ಮಾತುಕತೆಗೆ ಸಿಕ್ಕಿದ್ದರು. ಈ ಸಂದರ್ಭದಲ್ಲಿ ತಮ್ಮ ಜೀವನದ ಕುರಿತು, ಪಾತ್ರಗಳು, ಸಿನಿಮಾ, ಜೀವನಶೈಲಿ ಕುರಿತು ಅತ್ಯಂತ ಲವಲವಿಕೆಯಿಂದ, ಮುಕ್ತವಾಗಿ ಮಾತನಾಡಿದರು. ಆ ಮಾತುಗಳು ಇಲ್ಲಿವೆ.

ಅದು ನನ್ನ ಬದುಕಿನ ಅತ್ಯಂತ ಕಠಿಣ ಘಟ್ಟ

- ಅದು ನನ್ನ ಬದುಕಿನ ಅತ್ಯಂತ ಕಠಿಣ ಘಟ್ಟ. ಬ್ಲಾಡರ್ ಕ್ಯಾನ್ಸರ್ ಪತ್ತೆಯಾಗಿದ್ದ ದಿನಗಳವು. ಅಂತಹ ಕತ್ತಲೆಯ ಹೊತ್ತಿನಲ್ಲಿ ನಿರ್ದೇಶಕ ಪವನ್ ಒಡೆಯರ್ ಕಥೆ ಹೇಳಲು ಬಂದರು. ನಾನೀಗ ಅಮೆರಿಕಕ್ಕೆ ಸರ್ಜರಿಗೆ ಹೋಗಬೇಕು, ಸಿನಿಮಾ ಮಾಡಲು ಶಕ್ತಿ ಉಳಿಯುತ್ತೋ ಇಲ್ಲವೋ ಗೊತ್ತಿಲ್ಲ ಎಂದೆ. ಆದರೆ ನಾನು ವಿಮಾನವೇರಲು ಕೇವಲ ಎರಡು ದಿನಗಳಿರುವಾಗ ಪವನ್ ಹಾಗೂ ಅವರ ಪತ್ನಿ ಅಪೇಕ್ಷಾ ಮನೆಗೆ ಬಂದು ನಾನು ಎಷ್ಟೇ ನಿರಾಕರಿಸಿದರೂ ಕೇಳದೆ, ‘ಶಿವಣ್ಣ, ನೀವೇ ಈ ಸಿನಿಮಾ ಮಾಡಬೇಕು, ನೀವು ಸಂಪೂರ್ಣ ಗುಣಮುಖರಾಗಿ ಬರುವವರೆಗೂ ಕಾಯುತ್ತೇವೆ’ ಎಂದು ಒತ್ತಾಯಪೂರ್ವಕವಾಗಿ ಕೈಗೆ ಅಡ್ವಾನ್ಸ್ ಇಟ್ಟು ಹೋದರು. ಆ ದಂಪತಿ ನನ್ನ ಮೇಲಿಟ್ಟ ವಿಶ್ವಾಸವೇ ನನ್ನಲ್ಲಿ ಸಾವನ್ನು ಗೆಲ್ಲುವ ಧೈರ್ಯ ತುಂಬಿತು. ಅಮೆರಿಕದಲ್ಲಿ ಮೇಜರ್ ಸರ್ಜರಿ ಮುಗಿದು ಪ್ರಜ್ಞೆ ಬಂದ ಕೇವಲ ಎರಡೇ ಗಂಟೆಯಲ್ಲಿ ನಾನು ಮೊದಲು ಕರೆ ಮಾಡಿದ್ದೇ ಪವನ್‌ಗೆ.

- ‘ಬೇಲ್’ ಚಿತ್ರದ ಒನ್‌ಲೈನ್ ಕೇಳಿದ ತಕ್ಷಣವೇ ನನಗೆ ಗಾಢವಾಗಿ ತಟ್ಟಿತು

- ‘ಬೇಲ್’ ಚಿತ್ರದ ಒನ್‌ಲೈನ್ ಕೇಳಿದ ತಕ್ಷಣವೇ ನನಗೆ ಗಾಢವಾಗಿ ತಟ್ಟಿತು. ಇಂತಹ ಕಥೆಗಳು ಬಂದೇ ಇಲ್ಲ ಎಂದಲ್ಲ, ಆದರೆ ಪವನ್ ಈ ಕಥೆಯನ್ನು ತೆರೆಗೆ ತಂದಿರುವ ನಿರೂಪಣೆ ಇಡೀ ಚಿತ್ರಕ್ಕೆ ಹೊಸ ಕಳೆ ತಂದಿದೆ. ಇದು ಕೇವಲ ಒಂದು ಜಾನರ್‌ಗೆ ಸೀಮಿತವಾದ ಚಿತ್ರವಲ್ಲ. ಥ್ರಿಲ್ಲರ್, ಕಾಮಿಡಿ, ಫ್ಯಾಮಿಲಿ ಡ್ರಾಮಾ, ಕ್ರೈಮ್ ಹಾಗೂ ಸಮಾಜಕ್ಕೆ ಅಗತ್ಯವಿರುವ ಗಟ್ಟಿ ಸಂದೇಶ ಎಲ್ಲವೂ ಒಂದೇ ಕಡೆ ಇದೆ. ತೆಲುಗಿನ ‘ಪೆದ್ದಿ’ ಚಿತ್ರೀಕರಣದ ವೇಳೆ ನನ್ನ ಈ ಗೆಟಪ್ ನೋಡಿ ನಟ ರಾಮ್‌ಚರಣ್ ಕೂಡ ಮೆಚ್ಚಿದ್ದರು.

- ಚಿತ್ರದಲ್ಲಿ ಜಯರಾಮ್, ಸಾಯಿಕುಮಾರ್, ಸಂಗೀತಾ, ಸಂಜನಾ, ಲೂಸ್ ಮಾದ ಯೋಗಿ ಮತ್ತು ದೀಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರ ಪಾತ್ರಗಳೂ ಕಥೆಯ ಜೀವಾಳವಾಗಿವೆ. ವೈದಿ ಅವರ ದೃಶ್ಯವೈಭವ ಮತ್ತು ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಬಲ.

- ಹಳೆಯ ಅಬ್ಬರದ ಮಾಸ್ ಇಮೇಜ್ ಮಾಡಿ ಮಾಡಿ ಸಾಕಾಗಿಹೋಗಿದೆ. ಕೇವಲ ಉದ್ದುದ್ದ ಡೈಲಾಗ್ ಹೊಡೆದು ಕಿರುಚುವುದಷ್ಟೇ ನಟನೆಯಲ್ಲ. ಪಾತ್ರದ ಕಣ್ಣುಗಳಲ್ಲೇ ನೋವು, ಹತಾಶೆ ಮತ್ತು ಆಕ್ರೋಶ ಹೊಮ್ಮಬೇಕು. ಆ ನೈಜ ಅಭಿನಯಕ್ಕೆ ‘ಬೇಲ್’ನಲ್ಲಿ ಅಪಾರ ಜಾಗವಿದೆ. ಶೂಟಿಂಗ್ ವೇಳೆ ಅಪಾಯಕಾರಿ ಸಾಹಸ ದೃಶ್ಯಗಳಿಗೆ ಡ್ಯೂಪ್ ತರಲು ನಿರ್ಧರಿಸಿದ್ದರು. ಅವರು ಅದ್ಭುತವಾಗಿ ಸಾಹಸ ಮಾಡಬಹುದು, ಆದರೆ ನನ್ನದೇ ಆದ ಬಾಡಿ ಲಾಂಗ್ವೇಜ್ ಮತ್ತು ಆ ಸ್ವಾಗ್ ನನ್ನಿಂದ ಮಾತ್ರ ಸಾಧ್ಯ ಎಂದು ನಾನೇ ರಿಸ್ಕ್ ತೆಗೆದುಕೊಂಡು ಆ್ಯಕ್ಷನ್ ಮಾಡಿದೆ.- ಕೆಲವು ತಂಡಗಳು ಆರಂಭದಲ್ಲಿ ಬೆಟ್ಟದಷ್ಟು ಜೋಶ್‌ನಲ್ಲಿ ಬಂದು ನಂತರ ತಣ್ಣಗಾಗಿಬಿಡುತ್ತವೆ. ಚಿತ್ರರಂಗದ ತೆರೆಮರೆಯಲ್ಲಿ ಮಧ್ಯವರ್ತಿಗಳು ಕೆಲವರು ನನ್ನ ಹೆಸರನ್ನೇ ದಾಳವಾಗಿಟ್ಟುಕೊಂಡು ಆಟವಾಡುತ್ತಿದ್ದರು. ಅವರ ಹೆಸರನ್ನು ಪ್ರಸ್ತಾಪಿಸಿ ಹೊಸ ವಿವಾದ ಹುಟ್ಟುಹಾಕಲು ನಾನು ಬಯಸುವುದಿಲ್ಲ. ಆದರೆ ಅಂತಹ ಮಧ್ಯವರ್ತಿಗಳ ಜಾಲದಿಂದ ನಾನು ಸಂಪೂರ್ಣವಾಗಿ ಹೊರಬಂದಿದ್ದೇನೆ. ಈಗೇನಿದ್ದರೂ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ನಾನೇ ನೇರವಾಗಿ ಮುಖಾಮುಖಿ ಮಾತನಾಡುತ್ತೇನೆ.

- ಆಪರೇಷನ್ ನಂತರ ಬದುಕಿನ ಲಯವೇ ಬದಲಾಗಿದೆ. ಕಳೆದ ಎರಡು ವರ್ಷಗಳಿಂದ ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದೇನೆ. ದಿನವೂ ನಿಗದಿತ ಸಮಯಕ್ಕೆ ವಾಕಿಂಗ್, ಲಘು ವ್ಯಾಯಾಮ ಮತ್ತು ಕಟ್ಟುನಿಟ್ಟಿನ ಆಹಾರ ಪದ್ಧತಿ ಪಾಲಿಸುತ್ತಿದ್ದೇನೆ. 2015ರಲ್ಲಿ ಎದುರಾಗಿದ್ದ ಹೃದಯ ಸಮಸ್ಯೆಗೆ ಸಂಬಂಧಿಸಿದ ಕೆಲವು ನಿಯಮಿತ ಔಷಧಿಗಳನ್ನು ಹೊರತುಪಡಿಸಿದರೆ, ನಾನೀಗ ನೂರಕ್ಕೆ ನೂರು ಫಿಟ್ ಆಗಿದ್ದೇನೆ. ವೈದ್ಯರಾದ ಡಾ. ಮನೋಹರನ್ ಹದಿನೈದು ದಿನಕ್ಕೊಮ್ಮೆ ಕಾಲ್ ಮಾಡಿ ನನ್ನ ಆರೋಗ್ಯದ ನಿಗಾ ವಹಿಸುತ್ತಾರೆ.

ಅನಂತ್ ನಾಗ್ ಅವರಿಗೆ ಫಾಲ್ಕೆ ಸಂದಿದ್ದು ನಮ್ಮ ಹೆಮ್ಮೆ

‘ಅನಂತ್ ನಾಗ್ ಸರ್ ಸರ್ ನನ್ನ ಸದಾಕಾಲದ ಅಚ್ಚುಮೆಚ್ಚಿನ ನಟ. ಅವರ ಮೊದಲ ಸಿನಿಮಾ ‘ಅಂಕುರ್’ ದಿನಗಳಿಂದಲೂ ಅವರ ಅಭಿನಯವನ್ನು ಕಣ್ತುಂಬಿಕೊಂಡಿದ್ದೇನೆ. ಭಾರತೀಯ ಚಿತ್ರರಂಗದ ಅತ್ಯಂತ ಸ್ಫುರದ್ರೂಪಿ ಹಾಗೂ ಸಿನಿಮಾದ ನಾಡಿಮಿಡಿತವನ್ನು ಆಳವಾಗಿ ಬಲ್ಲ ಅಪರೂಪದ ಮೇರು ಕಲಾವಿದ ಅವರು. ಅವರ ಕಂಠ, ಸ್ಪಷ್ಟ ಕನ್ನಡ ಉಚ್ಚಾರಣೆ ಎಲ್ಲವೂ ಅನನ್ಯ. ಸಿಕ್ಕಾಗಲೆಲ್ಲ ಶಂಕರ್ ನಾಗ್ ಮತ್ತು ಅಪ್ಪಾಜಿಯವರ ಒಡನಾಟದ ದಿನಗಳನ್ನು ಮೆಲಕು ಹಾಕುತ್ತಾರೆ. ಅವರ ಜತೆ ಮಾತನಾಡುತ್ತಿದ್ದರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಅವರಿಗೆ ಫಾಲ್ಕೆ ಪ್ರಶಸ್ತಿ ಸಂದಿರುವುದು ನಿಜಕ್ಕೂ ಅರ್ಥಪೂರ್ಣ.’

ಯೋಗಿಗೆ ಭವಿಷ್ಯವಿದೆ

‘ಸಿನಿಮಾದಲ್ಲಿ ಕಾಸ್ಟಿಂಗ್ ತುಂಬಾ ಪರ್ಫೆಕ್ಟ್ ಆಗಿದೆ. ಯೋಗಿ ತುಂಬಾ ವಂಡರ್‌‌ಫುಲ್ ಆಕ್ಟರ್. ಆತ ನೋಡೋಕೆ ತುಂಬಾ ರಸ್ಟಿಕ್ ಆಗಿ ಕಾಣಿಸ್ತಾನೆ, ಈಗಂತೂ ಆ ಪಾತ್ರಕ್ಕೆ ಇನ್ನಷ್ಟು ರಫ್ & ರಸ್ಟಿಕ್ ಆಗಿ ಕಾಣಿಸ್ತಿದ್ದಾನೆ. ಆ ಹುಡುಗನಿಗೆ ತುಂಬಾ ಒಳ್ಳೆ ಭವಿಷ್ಯವಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸುದೀಪ್‌ ಸಿನಿಮಾ ನಿರ್ಮಿಸೋದು ಕಷ್ಟ ಎಂದು ಹೆದರಿಸಿದ್ದರು!
ಪ್ರಖ್ಯಾತ ‘ಡ್ರಮ್ಮರ್’ ದೇವ ಅಸ್ತಂಗತ