ಕತೆ ಕಳ್ಳತನ - ಕೃತಿಚೌರ್ಯದಿಂದ ಪಾರಾಗುವುದು ಹೇಗೆ!

Published : Mar 27, 2026, 01:16 PM IST
Theater

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಕೃತಿಚೌರ್ಯದ ಸದ್ದು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಯಾವುದು ಕೃತಿಚೌರ್ಯ, ಕೃತಿಚೌರ್ಯ ಆಗದಂತಿರಲು ಬರಹಗಾರರು ಏನು ಮಾಡಬೇಕು ಎಂಬಿತ್ಯಾದಿ ಕುರಿತಂತೆ ವಿವರವಾದ ಲೇಖನ ಇಲ್ಲಿದೆ.

- ಪ್ರಿಯಾ ಕೆರ್ವಾಶೆ

ಪ್ರಕರಣ ಏನು?

ತನ್ನ ಕಥೆಯ ಎಳೆಯನ್ನು ಬಳಸಿಕೊಂಡು ಡಾರ್ಲಿಂಗ್‌ ಕೃಷ್ಣ ‘ಲವ್‌ ಮಾಕ್‌ಟೇಲ್‌ 3’ ಸಿನಿಮಾ ಮಾಡಿದ್ದಾರೆ ಎಂದು ‘ಮಾರಿಗೋಲ್ಡ್‌’ ಸಿನಿಮಾ ನಿರ್ದೇಶಕ ರಾಘವೇಂದ್ರ ನಾಯಕ್‌ ಆರೋಪ ಮಾಡಿದ್ದಾರೆ. ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಡಾರ್ಲಿಂಗ್ ಕೃಷ್ಣ, ತನ್ನ ಮರ್ಯಾದೆಗೆ ಕುಂದು ತಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?

ಹಿಂದೆ ‘ನಾಗಮಂಡಲ’ ಸಿನಿಮಾ ಕೃತಿಚೌರ್ಯದ ಕಾರಣಕ್ಕೆ ವಿವಾದಕ್ಕೊಳಗಾದಾಗ ಗಿರೀಶ್‌ ಕಾರ್ನಾಡ್‌ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ರವಿಪ್ರಕಾಶ್‌ ಅವರು ಈ ಬಗ್ಗೆ ವಿವರ ನೀಡಿದ್ದಾರೆ.

1. ಕಾನೂನಿನ ಪ್ರಕಾರ ಕೃತಿಚೌರ್ಯ ಎನಿಸಿಕೊಳ್ಳಬೇಕಾದರೆ ಆ ಬರಹ ಪ್ರಕಟವಾಗಿರಬೇಕು. ಒಬ್ಬ ವ್ಯಕ್ತಿಗೆ ಒಂದು ಐಡಿಯಾ ಬಂದು ಅದನ್ನು ಆತ ಇನ್ನೊಬ್ಬನಿಗೆ ಹೇಳಿದರೆ ಅದು ಕೃತಿಚೌರ್ಯ ಎನಿಸಿಕೊಳ್ಳುವುದಿಲ್ಲ.

2. ಸಿನಿಮಾ ಸ್ಕ್ರಿಪ್ಟ್‌ ವಿಚಾರಕ್ಕೆ ಬಂದರೆ ಆತ ತನ್ನ ಕಥೆಯನ್ನು ನಿರ್ದೇಶಕರ ಮುಂದೆ ಹೇಳಿದ್ದರೆ, ಏನು ಹೇಳಿದ್ದರು ಎಂಬುದಕ್ಕೆ ಸಾಕ್ಷಿ ಇದ್ದರೆ ಅದು ಮಾನ್ಯವಾಗುತ್ತದೆ. ಆದರೆ ಅವರು ಕೃತಿಚೌರ್ಯ ಎಂದು ಆರೋಪಿಸುವ ಸಿನಿಮಾದಲ್ಲಿ ಅವರು ವಿವರಿಸಿದ ದೃಶ್ಯ, ಡೈಲಾಗ್‌ ಇತ್ಯಾದಿಗಳಿರಬೇಕು. ನಿರ್ದಿಷ್ಟವಾದ ಸ್ಪಷ್ಟ ಅಂಶಗಳಿಲ್ಲದೇ ಸಾಮ್ಯತೆಯಷ್ಟೇ ಕಂಡರೆ ಅದನ್ನು ಪರಿಗಣಿಸುವುದು ಕಷ್ಟಸಾಧ್ಯವಾಗಬಹುದು.

3. ಹಿಂದೆ ದೀಪಿಕಾ ಪಡುಕೋಣೆ ನಟನೆಯ ‘ಪದ್ಮಾವತ್‌’ ಸಿನಿಮಾ ಕೋರ್ಟ್‌ ಮೆಟ್ಟಿಲೇರಿತ್ತು. ರಾಣಿ ಪದ್ಮಾವತಿಯ ಕಥೆಗೆ ಅಪಚಾರವಾಗಿದೆ ಎಂದು ಆಕೆಯ ವಂಶಸ್ಥರು ಕೇಸು ದಾಖಲಿಸಿದ್ದರು. ಆದರೆ ಸಿನಿಮಾದಲ್ಲಿ ಪಾತ್ರಗಳ ಹೆಸರು, ಪರಿಸರ ಬದಲಿಸಿದ್ದ ಕಾರಣ ತೀರ್ಪು ಸಿನಿಮಾತಂಡದ ಪರವಾಗಿ ಬಂತು.

4. ‘ಲವ್‌ ಮಾಕ್‌ಟೇಲ್‌3’ ಸಿನಿಮಾ ಪ್ರಕರಣದಲ್ಲಿ ಒಂದು ವೇಳೆ ಕಥೆಗಾರರಲ್ಲಿ ಸರಿಯಾದ ಸಾಕ್ಷಿ ಇಲ್ಲದೇ ಹೋದರೆ, ನಿರ್ದೇಶಕರು ಮಾನನಷ್ಟ ಮೊಕದ್ದಮೆ ಹೂಡಿದರೆ ಕೋರ್ಟ್‌ ಔಚಿತ್ಯ ಗಮನಿಸಿ ತಪ್ಪಿತಸ್ಥರಿಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಬರಹಗಾರರು ತಮ್ಮ ಕಥೆಗಳನ್ನು ಹೇಗೆ ಕಾಪಿಟ್ಟುಕೊಳ್ಳಬೇಕು?

1. ನಾನು ನಂಬಿಕೆಯ ಮೇಲೆ ಕಥೆ ಹೇಳುತ್ತೇನೆ : ಜಡೇಶ್‌ ಹಂಪಿ

‘ನಾನು ನನ್ನ ಕಥೆಗಳನ್ನು ನಂಬಿಕೆಯ ಮೇಲೆ ಕಲಾವಿದರಿಗೆ, ನಿರ್ಮಾಪಕರಿಗೆ ಹೇಳುತ್ತೇನೆ. ಅವರು ಕಥೆಯ ಲೈನ್‌ ಅನ್ನು ಕದ್ದರೂ ನನಗೇನೂ ಸಮಸ್ಯೆ ಇಲ್ಲ. ಏಕೆಂದರೆ ನಾನು ಕಥೆಯನ್ನು ಸಿನಿಮಾವಾಗಿಸುವ ಕ್ರಮ ನನ್ನದೇ ಆಗಿರುತ್ತದೆ. ಅದು ನನ್ನ ಕ್ರಿಯೇಟಿವಿಟಿ, ನನ್ನ ಜಗತ್ತು. ಅದನ್ನು ಯಾರೂ ಕದಿಯಲಾಗದು. ಹೊಸ ಕತೆಗಾರರಿಗೆ ಹೇಳಬೇಕೆಂದರೆ ಕಥೆಗಳನ್ನು ಕಾಪಿಟ್ಟುಕೊಳ್ಳಲೆಂದೇ ಸಂಸ್ಥೆಗಳಿವೆ. ಅಲ್ಲಿ ರಿಜಿಸ್ಟರ್‌ ಮಾಡಿಸಬಹುದು. ತಾವು ನಟರಿಗೆ ಅಥವಾ ಸಿನಿಮಾ ರಂಗದವರಿಗೆ ಕಥೆ ಹೇಳುವಾಗ ನೇರವಾಗಿ ಹೇಳದೆ ಈಮೇಲ್‌ ಮೂಲಕ ಅಥವಾ ಕೊರಿಯರ್‌ ಮೂಲಕ ಕಳಿಸಬಹುದು. ಆಗ ದಾಖಲೆ ಇರುತ್ತದೆ’.

2. ನಮ್ಮ ಕಥೆಯ ಬಗ್ಗೆ ನಮಗೆ ಗೌರವ ಇರಬೇಕು: ಹೇಮಂತ್‌ ರಾವ್‌

ನನ್ನ ಪ್ರಕಾರ ಕಥೆಗಾರನಿಗೆ ತನ್ನ ಕಥೆಯ ಬಗ್ಗೆ ಎಷ್ಟು ಗೌರವ ಇರುತ್ತೆ ಅನ್ನೋದು ಮುಖ್ಯ ಅಂಶ. ನನಗೆ ಎಷ್ಟೋ ಜನ ಇನ್‌ಸ್ಟಾಗ್ರಾಂನಂಥ ಕಡೆಗಳಲ್ಲಿ ಕಥೆ ಕಳಿಸುತ್ತಾರೆ. ಛೇ, ತಮ್ಮ ಕಥೆಯ ಬಗ್ಗೆ ಕಿಂಚಿತ್‌ ಗೌರವವೂ ಇಲ್ಲವಲ್ಲ ಅನಿಸುತ್ತದೆ. ನಮ್ಮ ಕಥೆಯ ಬಗ್ಗೆ ನಮಗೆ ಗೌರವ, ಪ್ರೀತಿ ಇರಬೇಕಾದ್ದು ಬಹಳ ಮುಖ್ಯ. ಇನ್ನು ಕಥೆಗಳನ್ನು ಕಾಪಿಡಲು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಜಾಗಗಳಿವೆ. ಅದು ಪಬ್ಲಿಕ್‌ ಡೊಮೇನ್‌. ಅಲ್ಲಿದ್ದರೆ ಕಥೆ ಸೋರಿಕೆಯಾಗುವ ಅಪಾಯ ಇರಲ್ಲ. ನಾನು ನನ್ನ ಕಥೆಗಳನ್ನು ಅಲ್ಲೇ ಸೇವ್‌ ಮಾಡಿ ಇಟ್ಟುಕೊಂಡಿರುತ್ತೇನೆ.

ಕಥೆಗಾರರು ಕಥೆಯನ್ನು ಹೇಗೆ ಜೋಪಾನ ಮಾಡಬಹುದು?

ನಿರ್ದೇಶಕ, ಕಥೆಗಾರ ರಾಘವೇಂದ್ರ ನಾಯಕ್‌ ಹೀಗೆ ವಿವರಿಸುತ್ತಾರೆ..

- ಕಥೆಯನ್ನು SWA (Screenwriters Association) ನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಹಂತದ ಕಡತವನ್ನೂನಿಮ್ಮ ಸ್ವಂತ ಇಮೇಲ್ ವಿಳಾಸಕ್ಕೆ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ.- ನಟರಿಗೆ ಅಥವಾ ಸಿನಿಮಾರಂಗದ ಇತರರೊಂದಿಗೆ ಕಥೆಯ ಬಗ್ಗೆ ಚರ್ಚಿಸುವಾಗ, ನರೇಶನ್‌ ಕೊಡುವಾಗ ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ದಾಖಲಾಗಿರಲಿ.

- ಸಿನಿಮಾ ಪ್ರಕ್ರಿಯೆಯ ಪ್ರತಿ ಕಡತ, ಆಡಿಯೋ ಫೈಲ್ ಅನ್ನು ನಿಮ್ಮ ಇಮೇಲ್‌ನಲ್ಲಿ ಭದ್ರವಾಗಿಟ್ಟಿರಿ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ರಶ್ಮಿಕಾ ವಿಜಯದೇವರಕೊಂಡ ಹನಿಮೂನ್‌ ಅಲ್ಲ, ಬಡ್ಡೀಮೂನ್‌!
ಕನ್ನಡ ಕಲಾವಿದರ ನಿರ್ಲಕ್ಷ್ಯವೇಕೆ!