;Resize=(412,232))
ಸಿನಿವಾರ್ತೆ
‘ಕೆಡಿ ಸಿನಿಮಾ ನಿರ್ಮಾಪಕರು ಬ್ರಾಟ್ ಸಿನಿಮಾ ವಿತರಿಸಲು ಕಾತರದಿಂದಿರುವುದಾಗಿ ಹೇಳಿದ್ದಾರೆ, ಏಕೆಂದರೆ ಅವರ ಸಿನಿಮಾ ರಿಲೀಸೇ ಆಗ್ತಿಲ್ಲವಲ್ಲ.. ಜೋಗಿ ಪ್ರೇಮ್ ಅವರು ಕೆಡಿ ಸಿನಿಮಾ ರಿಲೀಸ್ ಅನ್ನು ಮುಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಶಿಫ್ಟ್ ಮಾಡಿದ್ರೂ ಅಚ್ಚರಿ ಇಲ್ಲ. ಆದರೆ ವಾಸ್ತವದಲ್ಲಿ ಕನ್ನಡದಲ್ಲಿ ಹೆಚ್ಚೆಚ್ಚು ಸಿನಿಮಾ ನಿರ್ಮಾಣವಾಗಬೇಕಿದೆ’.
ಹೀಗೆ ಜೋಗಿ ಪ್ರೇಮ್ ಅವರ ಕಾಲೆಳೆದದ್ದು ಕಿಚ್ಚ ಸುದೀಪ್.
ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮನಿಶಾ ಕಂದಕೂರ್ ನಟಿಸಿರುವ ‘ಬ್ರಾಟ್’ ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿದರು.
‘ಡಾರ್ಲಿಂಗ್ ಕೃಷ್ಣ ಅವರನ್ನು ಕ್ಲೀನ್ ಕೃಷ್ಣಪ್ಪ ಅಂತ ಕರೀತೀವಿ. ಅವರ ವ್ಯಕ್ತಿತ್ವದಲ್ಲಿ ಬ್ರಾಟ್ ಎಂಬುದರ ಒಂದಂಶವೂ ಇಲ್ಲ. ಊಟ, ಸಿನಿಮಾ, ಮನೆ ಇವಿಷ್ಟೇ ಅವರ ಜಗತ್ತು. ಅಂಥವರ ಬಳಿ ಇಂಥಾದ್ದೊಂದು ಕಿಡಿಗೇಡಿ ಹುಡುಗನ ಪಾತ್ರ ಮಾಡಿಸಲು ನಿರ್ದೇಶಕ ಶಶಾಂಕ್ ಬಹಳ ಕಷ್ಟಪಟ್ಟಿರಬೇಕು. ಶಶಾಂಕ್ ಅವರ ಪ್ರತಿಭೆಗೆ ತಕ್ಕ ಸಿನಿಮಾ ಇನ್ನೂ ಬಂದಿಲ್ಲ. ಒಂದು ಮುಂಜಾನೆ ಎದ್ದು ತಲೆಯಲ್ಲಿರುವ ಎಲ್ಲ ಕಲಾವಿದರನ್ನೂ ಆಚೆಗೆ ಹಾಕಿ ಅವರು ಅವರದೇ ಕಥೆ ಬರೆಯಲು ಕೂರಬೇಕು. ಶಶಾಂಕ್ ಅವರ ಆ ಅದ್ಭುತ ಸಿನಿಮಾಕ್ಕೆ ನಾವೆಲ್ಲ ಸಾಕ್ಷಿಯಾಗುವಂತಿರಬೇಕು ’ ಎನ್ನುವ ಮಾತನ್ನೂ ಸುದೀಪ್ ಹೇಳಿದರು.
ನಿರ್ದೇಶಕ ಶಶಾಂಕ್, ‘ನನಗೆ ಈಸಿ ರೂಟ್ ಇಷ್ಟ ಇಲ್ಲ. ಚಾಲೆಂಜಿಂಗ್ ಸಿನಿಮಾ ಮಾಡುವ ಆಸೆ. ನನಗೆ ಕೃಷ್ಣ ಅವರು ರೊಮ್ಯಾಂಟಿಕ್ ಹೀರೋ ಆಗಿ ಕಂಡಿಲ್ಲ. ರಫ್ ಆಂಡ್ ಟಫ್ ಮ್ಯಾನ್ ಆಗಿ ಕಂಡಿದ್ದರು. ಅವರ ಕ್ರಿಕೆಟ್ ಪ್ರತಿಭೆ ಇಟ್ಟುಕೊಂಡು ಇಮೇಜ್ ಬದಲಿಸುವಂತೆ ಈ ಸಿನಿಮಾ ಮಾಡಿದ್ದೇವೆ. ಈ ಸಿನಿಮಾವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ, ಇಲ್ಲಿ ಹಿಟ್ ಆದಮೇಲೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದರು.
ನಾಯಕ ಡಾರ್ಲಿಂಗ್ ಕೃಷ್ಣ, ನಾಯಕಿ ಮನಿಶಾ ಕಂದಕೂರ್ ಹಾಜರಿದ್ದರು.
ಮಂಜುನಾಥ್ ಕಂದಕೂರ್ ನಿರ್ಮಾಣದ ಈ ಸಿನಿಮಾ ಅಕ್ಟೋಬರ್ 31ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಅಪ್ಪು ಅಪ್ಲಿಕೇಶನ್ ಪ್ರೊಮೋಗೆ ಸುದೀಪ್ ಧ್ವನಿ
ಮೊದಲ ಫ್ಯಾನ್‌ಡಮ್ ಆ್ಯಪ್ ಅ.25ಕ್ಕೆ ಬಿಡುಗಡೆ
ಪುನೀತ್ ರಾಜ್‌ಕುಮಾರ್ ಅವರ ಕನಸಿಗೆ ರೆಕ್ಕೆ ಹಚ್ಚುವಂಥಾ ಪಿಆರ್‌ಕೆ ಫ್ಯಾನ್‌ಡಮ್ ಆ್ಯಪ್‌ನ ಟೀಸರ್‌ಗೆ ಕಿಚ್ಚ ಸುದೀಪ್ ಧ್ವನಿಯಾಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಟೀಸರ್‌ನಲ್ಲಿ ಪುನೀತ್ ಅವರ ಬಗೆಗಿನ ಭಾವುಕ ಮಾತುಗಳ ಜೊತೆಗೆ ಈ ಪಿಆರ್‌ಕೆ ಆ್ಯಪ್‌ನ ಉದ್ದೇಶ, ಹಿನ್ನೆಲೆ ಬಗ್ಗೆ ವಿವರಗಳಿವೆ.
‘ಕರುನಾಡಿನ ಹೂದೋಟದಲ್ಲಿ ಅರಳಿದ ರಾಜಪುಷ್ಪ, ರಾಜನ ಮಗನಾಗಿ ಹುಟ್ಟಿದ್ದರೂ ಸಾಮಾನ್ಯರ ಜೊತೆ ಜೊತೆಗೇ ಬೆಳೆದ; ಪುಟ್ಟದ ವಯಸ್ಸಲ್ಲೇ ಬೆಟ್ಟದ ಹೂವಾಗಿ ರಾಷ್ಟ್ರಪ್ರಶಸ್ತಿ ಪಡೆದ, ಮಂದೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ ಜೊತೆಗೆ ಜನಾನುರಾಗಿಯಾಗಿ ಬೆಳೆದ’ ಅಪ್ಪು ಅವರ ವ್ಯಕ್ತಿಚಿತ್ರ ಈ ಟೀಸರ್‌ನಲ್ಲಿದೆ. ಜೊತೆಗೆ ‘ಪುನೀತ್ ಅವರ ಕನಸುಗಳನ್ನು, ಅವರ ಬಗೆಗಿನ ನಿರೀಕ್ಷೆಗಳನ್ನು ನಿಜ ಮಾಡಲು ಆರಂಭಿಸಿರುವ ಪ್ರಯತ್ನವಿದು. ಇದರಲ್ಲಿ ಎಲ್ಲರೂ ಕೈಜೋಡಿಸಬಹುದು’ ಎಂಬ ವಿವರಣೆ ಇದೆ.
ಅಕ್ಟೋಬರ್ 25ರಂದು ಈ ಫ್ಯಾನ್‌ಡಮ್ ಪಿಆರ್‌ಕೆ ಆ್ಯಪ್ ಲೋಕಾರ್ಪಣೆಯಾಗಲಿದೆ.