ಸುಂದರ್‌ರಾಜ್‌ 75ಕ್ಕೆ 250 - ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ

Published : Aug 14, 2026, 01:29 PM IST
Sundar raj

ಸಾರಾಂಶ

ಸುಂದರ್‌ರಾಜ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್‌ ಭಾರದ್ವಾಜ್‌ ನಿರ್ದೇಶನದ, ಹಿರಿಯ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌ ಕಥೆ ಆಧರಿಸಿದ ‘ಚಾರ್ಜ್‌ಶೀಟ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್‌ರಾಜ್‌ ನಟನೆಯ 250ನೇ ಸಿನಿಮಾ. ಮಾತನಾಡಿದ್ದಾರೆ.

- ಪ್ರಿಯಾ ಕೆರ್ವಾಶೆ

- ನಿಮಗೀಗ 75 ವರ್ಷ. ಚಾರ್ಜ್‌ಶೀಟ್‌ ನಿಮ್ಮ 250ನೇ ಸಿನಿಮಾ. ಬಂದ ಹಾದಿಯ ಆತ್ಮಾವಲೋಕನ ಮಾಡಿಕೊಂಡರೆ?

ಖುಷಿಯೇ ಇದೆ. ಬೇರೆ ಯಾವುದೇ ರಂಗದಲ್ಲಿ 60ಕ್ಕೆ ನಿವೃತ್ತಿ ಅಂತಿರುತ್ತೆ. ಭಾರತೀಯ ಚಿತ್ರರಂಗದಲ್ಲಿ ಕಲಾವಿದರಿಗೆ ವಯಸ್ಸಿನ ಮಿತಿಯೇ ಇಲ್ಲ. ಸೆಲ್ಯುಲಾಯ್ಡ್‌ನಿಂದ ಡಿಜಿಟಲ್‌, ಎಐ ವರೆಗಿನ ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಇಷ್ಟು ಕಾಲ ಬದುಕಿ ಉಳಿಯಲು ಸಾಧ್ಯವಾದದ್ದೂ ದೈವೀ ಕೃಪೆ. ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ ‘ಕಾಡು’, ‘ಚೋಮನ ದುಡಿ’, ‘ತಬ್ಬಲಿಯು ನೀನಾದೆ ಮಗನೇ’, ‘ಒಂದಾನೊಂದು ಕಾಲದಲ್ಲಿ’, ‘ಅನ್ವೇಷಣೆ’ವರೆಗೆ ನನಗೆ ಬಂದಿದ್ದೆಲ್ಲ ಕ್ಲಾಸಿಕ್‌ ಚಿತ್ರಗಳು. ಆಗ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಚಿತ್ರಗಳಿದ್ದವು. ಬರುಬರುತ್ತ ಸಿನಿಮಾ ಕಮರ್ಷಿಯಲ್‌ ಆಗಿ ಬೇರೆ ಆಯಾಮ ಪಡೆಯಿತು. ಮನರಂಜನೆಯೇ ಮುಖ್ಯವಾಯಿತು. ಇವುಗಳಿಗೆಲ್ಲ ಸಾಕ್ಷಿಯಾಗಿದ್ದು ಒಂದೊಳ್ಳೆ ಅನುಭವ.

- ನಿಮ್ಮ 250ನೇ ಸಿನಿಮಾ ಚಾರ್ಜ್‌ಶೀಟ್‌ ಬಗ್ಗೆ ಹೇಳಿ.

ಇದು ನನಗೆ ಬಯಸದೇ ಬಂದ ಭಾಗ್ಯ. ನಮ್ಮ ಏರಿಯಾದಲ್ಲೇ ಕೆಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಮಾಡಿದ್ದಾರೆ. ಮಗಳು ಗಗನಸಖಿ. ಬೆಂಗಳೂರಿಂದ ಸಿಂಗಾಪೂರ್‌ಗೆ ಹೋಗಿ ಬರುವಾಗ ಕಾಣೆಯಾಗುತ್ತಾಳೆ. ಅವಳ ತಂದೆ ಇಂಜಿನಿಯರ್‌. ಅವರು ಗಾಬರಿಬಿದ್ದು ಕಂಪ್ಲೇಟ್‌ ಕೊಟ್ಟರೆ ಪೊಲೀಸ್‌ ಸ್ಟೇಶನ್‌ನಲ್ಲಿ ಉಡಾಫೆಯ ಉತ್ತರ ಬರುತ್ತದೆ. ಆದರೆ ಇನ್ನೊಬ್ಬ ಪೊಲೀಸ್‌ ಅಧಿಕಾರಿ ಪರಿಸ್ಥಿತಿ ಅರಿತು ಈ ಕೇಸ್‌ ಹಿಂದೆ ಬೀಳುತ್ತಾನೆ. ಅಲ್ಲಿಗೆ ಈ ಸಿನಿಮಾ ಪೊಲೀಸ್‌ ಡಿಪಾರ್ಟ್‌ಮೆಂಟ್‌ನ ವಾಸ್ತವ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ. ಹಿರಿಯ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌ ತನ್ನ ಅನುಭವದ ಘಟನೆಗೆ ಕಥೆಯ ರೂಪ ಕೊಟ್ಟಿದ್ದಾರೆ.

- ನಿಮಗೆ ಈ ಪಾತ್ರ ಹೇಗೆ ಕನೆಕ್ಟ್‌ ಆಯ್ತು?

ಚಿತ್ರತಂಡ ಈ ಪಾತ್ರಕ್ಕೆ ನನ್ನ ಆರಿಸಿದ್ದಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಆದರೆ ಕತೆಯನ್ನು ನನಗೆ ಹೇಳಿದಾಗ ಹಿಂದು ಮುಂದು ನೋಡದೇ ಒಪ್ಪಿಬಿಟ್ಟೆ. ನನ್ನ ಒಳಗೂ ಒಬ್ಬ ಅಪ್ಪ ಇದ್ದಾನೆ. ಮಗಳನ್ನು ಬಹಳ ಪ್ರೀತಿಸುವ ಅಪ್ಪ. ಹೀಗಾಗಿ ತಂದೆಯ ಪಾತ್ರಕ್ಕೆ ಕನೆಕ್ಟ್‌ ಆಗುವುದು ಸುಲಭವಾಯಿತು. ರಾಮಣ್ಣ ಅಂತ ನನ್ನ ಪಾತ್ರದ ಹೆಸರು.

- ವೆಂಕಟ್‌ ಭಾರದ್ವಾಜ್‌ ಅವರ ಕೆಲಸದ ಬಗ್ಗೆ?

ಬದುಕಿನಲ್ಲಿ ನಾನು ಮೊದಲ ಬಾರಿ ಶೂಟಿಂಗ್‌ ನೋಡಿದ ಸಿನಿಮಾ ಸಿ.ವಿ ಶಿವಶಂಕರ್‌ ನಿರ್ದೇಶನದ ‘ಮನೆ ಕಟ್ಟಿ ನೋಡು’. ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ ಎಂಬ ಹಾಡು ನಮ್ಮೆಲ್ಲ ಕನ್ನಡಿಗರ ಮನಸ್ಸಿನ ಮಾತಾಗಿತ್ತು. ‘ಚಾರ್ಜ್‌ಶೀಟ್‌’ ಸಿನಿಮಾದಲ್ಲಿ ವೆಂಕಟ್‌ ಅವರ ಕೆಲಸ, ಅವರು ಕಥೆಯನ್ನು ನಿರೂಪಿಸುವ ರೀತಿ ನೋಡಿ ಸಿ.ವಿ. ಶಿವಶಂಕರ್‌ ನೆನಪು ಬಂತು. ಚಿತ್ರದಲ್ಲಿ ಯುವ ಕಲಾವಿದರು ಎನರ್ಜಿಟಿಕ್‌ ಆಗಿ ನಟಿಸಿದ್ದಾರೆ. ಎಸ್‌.ಕೆ ಉಮೇಶ್‌ ಅವರು ಉತ್ತಮ ಸಾಥ್‌ ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಫುಲ್‌ ಮೀಲ್ಸ್‌ ಸಿಕ್ಕಿದೆ.

- ಸ್ವಾತಂತ್ರ್ಯೋತ್ಸವದ ಸಂದರ್ಭ ಸಿನಿಮಾ ಬರ್ತಿದೆ. ಸ್ಪರ್ಧೆಯೊಡ್ಡುವಂಥಾ ಬೇರೆ ಚಿತ್ರಗಳಿಲ್ಲ.

ಅದು ನಮ್ಮ ಸುದೈವ. ಇದು ಥಿಯೇಟರ್‌ನಲ್ಲೇ ನೋಡುವಂಥಾ ಕಥಾನಕ. ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್‌ ಶೋ ಕೊಡುವ ಬಗ್ಗೆ ನನಗೆ ಬಹಳ ನೋವಿದೆ. ಕೇಳಿದರೆ ಸರ್‌ ನಮ್ಗೂ ಥಿಯೇಟರ್‌ ನಡೆಸಬೇಕಲ್ವಾ ಅಂತಾರೆ. ಜನ ಬರುವ ಸಂಜೆ ಶೋಗಳಿಗೆ ಅನ್ಯ ಭಾಷೆ ಸಿನಿಮಾಗಳನ್ನು ಹಾಕಿರುತ್ತಾರೆ. ಇದು 60ರ ದಶಕದಿಂದಲೇ ಇರುವ ಸಮಸ್ಯೆ. ಇರಲಿ, ನಮ್ಮ ಸಿನಿಮಾಕ್ಕೆ ಸ್ವಾತಂತ್ರ್ಯೋತ್ಸವಕ್ಕಿಂತ ಒಂದು ದಿನ ಮೊದಲೇ ಸ್ವಾತಂತ್ರ್ಯ ಸಿಗುತ್ತಿದೆ. ಈ ಸಮಸ್ಯೆಗಳಿಂದಲೂ ಮುಕ್ತಿ ಸಿಗಬೇಕಿದೆ.

ಕನ್ನಡಪ್ರಭದಲ್ಲಿ 6 ತಿಂಗಳು ಕೆಲಸ ಮಾಡಿದ್ದೀನಿ

‘ಒಂಟಿಧ್ವನಿ’ ಅನ್ನುವ ಸಿನಿಮಾಕ್ಕೆ ಆರಂಭದಲ್ಲಿ ನಾನು ನಾಯಕನಾಗುವುದು ಅಂತಿತ್ತು. ಅದು ಪತ್ರಕರ್ತನ ಪಾತ್ರ. ಆ ಪಾತ್ರದ ಆಳ ಅರಿಯಬೇಕು ಅಂತ ಸುಮಾರು 6 ತಿಂಗಳ ಕಾಲ ಕನ್ನಡಪ್ರಭದಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದೆ. ಆದರೆ ಮುಂದೆ ಒಂಟಿಧ್ವನಿ ಸಿನಿಮಾದ ಪತ್ರಕರ್ತನ ಪಾತ್ರದಲ್ಲಿ ಅಂಬರೀಶ್‌ ನಟಿಸಿದರು. ನಾನು ಮತ್ತೊಂದು ಪಾತ್ರದಲ್ಲಿ ನಟಿಸಿದೆ. ಆದರೆ ಕನ್ನಡಪ್ರಭದಲ್ಲಿ ಕೆಲಸ ಮಾಡಿದ ಅನುಭವ ಸದಾ ನೆನಪಿನಲ್ಲಿ ಉಳಿಯುವಂಥಾದ್ದು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಯಶ್: ಮೂರು ರೂಪ, ಮೂರು ಛಾಯೆ-ವಿಷ್ಣು ನಟನೆಯ ವಿಜಯ್ ವಿಕ್ರಮ್ ಚಿತ್ರಕ್ಕೆ ಟಾಕ್ಸಿಕ್ ಹೋಲಿಕೆ
ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ!