ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ!

Published : Aug 13, 2026, 12:54 PM IST
Save Sandalwood

ಸಾರಾಂಶ

‘777 ಚಾರ್ಲಿ’ ಸಿನಿಮಾ ಕೊಟ್ಟ ಕಿರಣ್‌ ರಾಜ್‌, ‘ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ’, ‘ರಾಜಕುಮಾರ’, ‘ಯುವರತ್ನ’ ಚಿತ್ರಗಳ ಸಂತೋಷ್‌ ಆನಂದ್‌ರಾಮ್‌, ‘ಮಫ್ತಿ’ ಚಿತ್ರದ ನರ್ತನ್‌, ‘ಲೂಸಿಯಾ’, ‘ಯೂ ಟರ್ನ್‌’ ಚಿತ್ರಗಳ ಪವನ್‌ ಕುಮಾರ್‌, ‘ಕಾಟೇರ’ ನಿರ್ದೇಶಕ ತರುಣ್‌ ಸುಧೀರ್‌, ‘ಗುರುಶಿಷ್ಯರು’ ಜಡೇಶ್ ಹಂಪಿ ಇವರೆಲ್ಲಾ ಯಾವ ಸಿನಿಮಾ ಮಾಡುತ್ತಿದ್ದಾರೆ

ಸೇವ್ ಸ್ಯಾಂಡಲ್‌ವುಡ್‌ 

ಸಿನಿವಾರ್ತೆ

‘777 ಚಾರ್ಲಿ’ ಸಿನಿಮಾ ಕೊಟ್ಟ ಕಿರಣ್‌ ರಾಜ್‌, ‘ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ’, ‘ರಾಜಕುಮಾರ’, ‘ಯುವರತ್ನ’ ಚಿತ್ರಗಳ ಸಂತೋಷ್‌ ಆನಂದ್‌ರಾಮ್‌, ‘ಮಫ್ತಿ’ ಚಿತ್ರದ ನರ್ತನ್‌, ‘ಲೂಸಿಯಾ’, ‘ಯೂ ಟರ್ನ್‌’ ಚಿತ್ರಗಳ ಪವನ್‌ ಕುಮಾರ್‌, ‘ಕಾಟೇರ’ ನಿರ್ದೇಶಕ ತರುಣ್‌ ಸುಧೀರ್‌, ‘ಗುರುಶಿಷ್ಯರು’ ಜಡೇಶ್ ಹಂಪಿ ಇವರೆಲ್ಲಾ ಯಾವ ಸಿನಿಮಾ ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ.

ತರುಣ್‌ ಸುಧೀರ್‌ ಕಿರುತೆರೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ನರ್ತನ್‌ ರೈಟಿಂಗ್‌ನಲ್ಲಿ ಬ್ಯುಸಿ ಇದ್ದೇನೆ ಎನ್ನುತ್ತಾರೆ. ಪ್ರಯೋಗ ಮತ್ತು ಕಂಟೆಂಟ್‌ ಸಿನಿಮಾಗಳ ಪವನ್‌ ಕುಮಾರ್‌ ಯಾವ ಚಿತ್ರವನ್ನೂ ಘೋಷಣೆ ಮಾಡಿಲ್ಲ. ಸಂತೋಷನ್‌ ಆನಂದರಾಮ್‌ ಅವರು ‘ಯುವ’ ನಂತರ ಕಾಣೆಯಾಗಿದ್ದಾರೆ. ಕ್ಲಾಸ್‌ ಸಿನಿಮಾ ಮಾಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಿದ ಕಿರಣ್‌ ರಾಜ್‌ ಅವರ ಮುಂದಿನ ಸಿನಿಮಾ ಯಾವಾಗ ಗೊತ್ತಿಲ್ಲ.

‘ನಿರ್ದೇಶಕ ಹೇಳಿದ ಕತೆ ಸರಿ ಇದ್ದರೆ ಅದಕ್ಕೆ ನಿರ್ಮಾಪಕನ ಬಜೆಟ್‌ ತೂಗಲ್ಲ. ಕತೆ, ಬಜೆಟ್‌ ಎರಡೂ ಇದ್ದಾಗ ಹೀರೋ ಕಾಲ್‌ಶೀಟ್‌ ಸಿಗಲ್ಲ. ಹೋಗಲಿ ಹೊಸ ಹೀರೋಗಳ ಜತೆಗೆ ಸಿನಿಮಾ ಮಾಡೋಣ ಅಂದರೆ ನಿರ್ಮಾಪಕರು ರಿಟರ್ನ್‌ ಗ್ಯಾರಂಟಿ ಕೇಳ್ತಾರೆ’ ಎನ್ನುತ್ತಾರೆ ನಿರ್ದೇಶಕರೊಬ್ಬರು. ‘ನಾನು ಸ್ಟಾರ್‌ ಹೀರೋಗೇ ಸಿನಿಮಾ ಮಾಡಬೇಕು ಅಂತ ಕಾಯುತ್ತಿಲ್ಲ. ಆದರೆ, ಹೊಸ ಹೀರೋ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದರೆ ನಿರ್ಮಾಪಕರೇ ಒಪ್ಪಲ್ಲ. ಯಾಕೆಂದರೆ ಕಾಂಬಿನೇಶನ್ ವರ್ಕ್‌ ಆಗಲ್ಲ ಅಂತಾರೆ’ ಅಂತಾರೆ ಮತ್ತೊಬ್ಬ ನಿರ್ದೇಶಕ. ‘ನಮ್ಮಲ್ಲಿ ಬ್ಯಾನರ್‌, ಪ್ರೊಡಕ್ಷನ್‌ ಹೌಸ್‌ ಕಲ್ಚರ್‌ ಕಣ್ಮರೆಯಾಗಿದೆ. ಈ ಹಿಂದೆ ವಜ್ರೇಶ್ವರಿ ಕಂಬೈನ್ಸ್‌, ಈಶ್ವರಿ ಪ್ರೊಡಕ್ಷನ್‌, ಕೆಸಿಎನ್‌, ರಾಕ್‌ಲೈನ್‌ ಸಿನಿಮಾಸ್‌, ಜಯಣ್ಣ- ಭೋಗೇಂದ್ರ ಸಿನಿಮಾಸ್‌, ದ್ವಾರಕೀಶ್‌ ಫಿಲಮ್ಸ್‌ ಹೀಗೆ ಹೆಸರಿನಿಂದಲೇ ಗಮನ ಸೆಳೆಯುತ್ತಿದ್ದ ನಿರ್ಮಾಪಕ ಹಾಗೂ ನಿರ್ಮಾಣ ಸಂಸ್ಥೆಗಳು ಇದ್ದವು. ಅವರಿಗೆ ಕತೆಗಳು ಬರುತ್ತಿದ್ದವು. ಆ ಕತೆಗಳಿಗೆ ಅವರು ನಿರ್ದೇಶಕ, ನಟ- ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಒಂದು ನಂಬಿಕೆಯ ಮೇಲೆ ಸಿನಿಮಾ ಮಾಡುತ್ತಿದ್ದರು. ನಂಬಿಕೆಯ ಕೊಂಡಿಗಳಾಗಿರುವ ಬ್ಯಾನರ್‌ ಸಂಸ್ಕೃತಿ ಈಗಿಲ್ಲ. ಯಾರು ಯಾರನ್ನೂ ನಂಬುತ್ತಿಲ್ಲ. ನಿರ್ದೇಶಕ ಸಿನಿಮಾ ಮಾಡೋ ಜೊತೆಗೆ ನಿರ್ಮಾಪಕನಿಗೆ ಬ್ಯುಸಿನೆಸ್‌ ಗ್ಯಾರಂಟಿ ಕೊಡಬೇಕಿದೆ. ಆದರೂ ಯಾರೋ ಒಬ್ಬರು ರಿಸ್ಕ್‌ ತೆಗೆದುಕೊಳ್ಳಬೇಕು. ಎಲ್ಲರೂ ಸೇರಿ ಮಾತುಕತೆ ಮಾಡಬೇಕು. ಕನ್ನಡದ ಹೀರೋಗಳು, ಕಲಾವಿದರು, ತಂತ್ರಜ್ಞರು ಮೊದಲು ಕನ್ನಡದಲ್ಲೇ ಸಿನಿಮಾ ಮಾಡಿ ಎಂದು ಹೇಳುವವರು ಬೇಕು. ಹೀಗೆ ಮಾಡಿದರೆ ಖಂಡಿತ ಬದಲಾವಣೆ ಸಾಧ್ಯ’ ಎನ್ನುವುದು ಯಶಸ್ವಿ ನಿರ್ದೇಶಕರೊಬ್ಬರ ನಂಬಿಕೆ.

‘ಪ್ರತಿ ಚಿತ್ರವೂ ಕೆಜಿಎಫ್‌ ಆಗಬೇಕು, ಎಲ್ಲವೂ ಕಾಂತಾರ ಆಗಬೇಕು ಅನ್ನೋ ನಿರ್ಮಾಪಕರ ಸಂಖ್ಯೆ ಹೆಚ್ಚಿದೆ. ನಾವು ಅವರ ಮೂಗಿನ ನೇರಕ್ಕೆ ಸಿನಿಮಾ ಮಾಡಬೇಕು. ಇದು ಸಾಧ್ಯವಿಲ್ಲ. ಯಾಕೆಂದರೆ ಒಬ್ಬೊಬ್ಬ ನಿರ್ದೇಶಕನ ಸಿನಿಮಾ ಶೈಲಿಯೂ ಒಂದೊಂದು ರೀತಿ ಇರುತ್ತದೆ. ಕೆಜಿಎಫ್‌ ಅಥವಾ ಕಾಂತಾರ ಸಿನಿಮಾಗಳ ಯಶಸ್ಸು ನಮಗೆ ಸ್ಫೂರ್ತಿ ಆಗಬೇಕೆ ಹೊರತು, ಅದೇ ರೀತಿಯ ಸಿನಿಮಾ ಮಾಡಿ ಅಂತ ಹೇಳಬಾರದು. ಈ ವಿಚಾರದಲ್ಲಿ ನಿರ್ಮಾಪಕರು ಬದಲಾದರೆ. ನಾವು ಖಾಲಿ ಕೂರಬೇಕಿಲ್ಲ’ ಎನ್ನುತ್ತಾರೆ ಯುವ ನಿರ್ದೇಶಕ.

ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರು ಸಿಗುತ್ತಾರೆ, ಈ ಎಲ್ಲಾ ನಿರ್ದೇಶಕರನ್ನು ದುಡಿಸಿಕೊಳ್ಳುವ ಸವಾಲನ್ನು ನಿರ್ಮಾಪಕರು ಸ್ವೀಕರಿಸಬೇಕಿದೆ ಅನ್ನುವುದು ಬಹುತೇಕ ನಿರ್ದೇಶಕರ ಮಾತು. ಯಾಕೆಂದರೆ ಎಲ್ಲರಿಗೂ ಪ್ರಶಾಂತ್‌ ನೀಲ್‌ ಬೇಕು ಅಂದರೆ ಸಿಗಲ್ಲ. ಯಶ್‌, ರಿಷಬ್‌ ಶೆಟ್ಟಿ ಬ್ಯುಸಿ ಮತ್ತು ದುಬಾರಿ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಟಾಕ್ಸಿಕ್ ವಿರುದ್ಧ ಕಿಡಿ ಕಾರಿದ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್
ಟಾಕ್ಸಿಕ್ ಯಶ್ ಚಿತ್ರ ಅಲ್ಲ, ಭಾರತೀಯ ಸಿನಿಮಾ : ಯಶ್