ರವಿಚಂದ್ರನ್ ಕರಿಕೋಟು ಹಾಕಿದಾಗಲೆಲ್ಲ ಗೆದ್ದಿದ್ದಾರೆ: ಗುರುರಾಜ್‌ ಕುಲಕರ್ಣಿ

KannadaprabhaNewsNetwork | Updated : May 17 2024, 06:31 AM IST

ಸಾರಾಂಶ

ರವಿಚಂದ್ರನ್ ನಟನೆಯ ದಿ ಜಡ್ಜ್‌ಮೆಂಟ್‌ ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ. ಸಿನಿಮಾ ಬಗ್ಗೆ ನಿರ್ದೇಶಕ ಗುರುರಾಜ್ ಕುಲಕರ್ಣಿ ಹೇಳಿರುವ ಇಂಟರೆಸ್ಟಿಂಗ್ ಅಂಶಗಳು ಇಲ್ಲಿವೆ

ಪ್ರಿಯಾ ಕೆರ್ವಾಶೆ

- ನಿಮ್ಮ ಹಿನ್ನೆಲೆ?

ನಾನು 27 ವರ್ಷಗಳಿಂದ ಐಟಿ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಹಿತ್ಯ, ಸಂಗೀತ, ಸಿನಿಮಾಗಳಲ್ಲಿ ಆಸಕ್ತಿ. ನನ್ನ ಪ್ರಕಾರ ಐಟಿ ಕ್ಷೇತ್ರವೂ ಸಿನಿಮಾದಷ್ಟೇ ಕ್ರಿಯೇಟಿವ್‌. ಎರಡೂ ಕಡೆ ಸೃಷ್ಟಿಶೀಲತೆ ಇದೆ. ಕಲ್ಪನೆಗೆ ಆಸ್ಪದವಿದೆ. ವರ್ಷಗಳ ಕೆಳಗೆ ‘ಅಮೃತ ಅಪಾರ್ಟ್‌ಮೆಂಟ್‌’ ಅನ್ನೋ ಸಿನಿಮಾ ನಿರ್ದೇಶಿಸಿದ್ದೆ. ಅದಕ್ಕೂ ಮೊದಲು ‘ಆಕ್ಸಿಡೆಂಟ್‌’ ಹಾಗೂ ‘ಲಾಸ್ಟ್‌ ಬಸ್‌’ ಸಿನಿಮಾಗಳ ನಿರ್ಮಾಣ ಮಾಡಿದ್ದೆ.

- ಜಡ್ಜ್‌ಮೆಂಟ್‌ ಸಿನಿಮಾ ಗೆದ್ದೇ ಗೆಲ್ಲುವ ವಿಶ್ವಾಸ ಇದೆಯಾ?

ಖಂಡಿತಾ. ಗೆದ್ದೇ ಗೆಲ್ಲುತ್ತದೆ. ಸೂಪರ್‌ ಹಿಟ್‌ ಆಗುತ್ತದೆ. ಅತ್ಯುತ್ತಮ ಕಥೆ, ಕಲಾವಿದರು, ತಂತ್ರಜ್ಞರು ನನ್ನ ಯೋಚನೆಯನ್ನು ಅದ್ಭುತವಾಗಿ ತೆರೆ ಮೇಲೆ ತಂದಿದ್ದಾರೆ. ಇದೊಂದು ಅತ್ಯುತ್ತಮ ಲೀಗಲ್‌ ಥ್ರಿಲ್ಲರ್‌. ಇಡೀ ಕುಟುಂಬ ಒಟ್ಟಾಗಿ ಮುಜುಗರವಿಲ್ಲದೇ ನೋಡುವ ಚಿತ್ರ. ಕಥೆಯ ನಿರ್ವಹಣೆಯಲ್ಲಿ ಹೊಸತನವಿದೆ. ಎರಡು ಕುಟುಂಬಗಳ ತಾಕಲಾಟ, ಕೋರ್ಟ್‌, ಕೊಲೆ, ರಾಜಕೀಯ.. ಹೀಗೆ ಸಿನಿಮಾ ಕಥೆ ಇದೆ. ಸಂಬಂಧಗಳ ಬಗ್ಗೆಯೂ ಚಿತ್ರ ಮಾತಾಡುತ್ತೆ.

- ಅಮೃತ ಅಪಾರ್ಟ್‌ಮೆಂಟ್‌ ಸಿನಿಮಾ ಮಾಡಿ ಕಲಿತ ಪಾಠ ಇಲ್ಲಿ ಪ್ರಯೋಜನಕ್ಕೆ ಬಂದಿದೆಯಾ?

ಆ ಚಿತ್ರ ಮಾಡಿ ಕಲಿತದ್ದು ಒಂದೇ ಪಾಠ. ಪ್ರಚಾರ ಸರಿಯಾಗಿ ಮಾಡಬೇಕು ಅನ್ನುವುದು. ಆ ಸಿನಿಮಾ ಮಾಡುವಾಗ ಕೈಯಲ್ಲಿ ರೊಕ್ಕ ಇಲ್ಲದೇ ಪ್ರಚಾರಕ್ಕೆ ಕೊಕ್ ಬಿದ್ದಿತ್ತು. ಈ ಸಿನಿಮಾದಲ್ಲಿ ಹಾಗಾಗಿಲ್ಲ.

- ಕ್ರೇಜಿಸ್ಟಾರ್‌ಗೆ ಒಂದು ಹಾಡೂ ಕೊಟ್ಟಿಲ್ವಂತೆ, ಒಂದೇ ಡ್ರೆಸಲ್ಲಿ ಕೋರ್ಟ್‌ ರೂಮ್‌ ಸೀನ್‌ಗಳಲ್ಲಿ ಮುಗಿಸಿಬಿಟ್ಟಿದ್ದೀರಂತೆ?

ರವಿಚಂದ್ರನ್‌ ಕರಿ ಕೋಟು ಹಾಕಿದಾಗಲೆಲ್ಲ ಗೆದ್ದಿದ್ದಾರೆ! ಈ ಸಿನಿಮಾದಲ್ಲಿ ಅವರು ಕರಿಕೋಟ್‌ನಲ್ಲೇ ಹವಾ ಎಬ್ಬಿಸುತ್ತಾರೆ. ಥ್ರಿಲ್ಲರ್‌ ಕಥೆಗೆ ಒಳ್ಳೆಯ ರಭಸ ಇದೆ. ಹೀಗಾಗಿ ಹಾಡು ಶೂಟ್‌ ಮಾಡಿಟ್ಟುಕೊಂಡಿದ್ದರೂ ಸಿನಿಮಾದಲ್ಲಿ ಸೇರಿಸಿಲ್ಲ. ರವಿಚಂದ್ರನ್‌ ಅವರೇ ಈ ಸ್ಪೀಡಿಗೆ ಹಾಡು ಬೇಕಿಲ್ಲ ಅಂದಿದ್ದಾರೆ. ಸುಮ್ಮನೆ ನನ್ನ ಕಾಲೆಳೆಯಲು ಕಾರ್ಯಕ್ರಮದಲ್ಲಿ ಹಾಗೆ ಮಾತನಾಡಿದ್ದಾರೆ.

ಐಟಿಯಿಂದ ಬಂದ ನಿಮಗೆ ರವಿಚಂದ್ರನ್‌ ಸಿನಿಮಾ ಮಾಡಬೇಕು ಅಂತನಿಸಿದ್ದು ಯಾಕೆ?

ಕನ್ನಡ ಸಿನಿಮಾರಂಗದ ದಿಕ್ಸೂಚಿಯನ್ನೇ ಬದಲು ಮಾಡಿದ ನಟ ಅವರು. ಅವರ ಸಿನಿಮಾವನ್ನು ಜನ ಪ್ರೀತಿ, ಉತ್ಸಾಹದಿಂದ ಬರಮಾಡಿಕೊಳ್ಳಬೇಕು. ಈ ಕ್ರೇಜಿಸ್ಟಾರ್‌ಗೆ ಸಲ್ಲಬೇಕಾದ ಪ್ರೀತಿ, ಗೌರವ ಸಿಕ್ಕರೆ ಅವರು ಇನ್ನೂ ಏನೇನೋ ಅದ್ಭುತಗಳನ್ನು ಮಾಡಬಹುದಲ್ವಾ? ಅದನ್ನು ಮನಸ್ಸಲ್ಲಿಟ್ಟುಕೊಂಡು, ರವಿಚಂದ್ರನ್‌ ಅವರ ಮನಸ್ಥಿತಿ, ಯೋಚನೆಗಳಿಗೆ ಕನ್ನಡಿ ಹಿಡಿಯುವಂತೆ ಈ ಕಥೆ ಬರೆದೆ. ಚಿತ್ರದಲ್ಲಿ ದಿಗಂತ್‌ ಅವರದೂ ಸಮತೂಕದ ಪಾತ್ರ. ಮೇಘನಾ ಗಾಂವ್ಕರ್‌, ಧನ್ಯಾ ರಾಮ್‌ಕುಮಾರ್‌ ಮುಖ್ಯ ಪಾತ್ರದಲ್ಲಿದ್ದಾರೆ.

Share this article