ಫ್ಯಾಮಿಲಿ ಸಿನಿಮಾ ಮಾಡಿ ಮನೆ ಮಗ ಆಗ್ಬೇಕು: ಮಿಲಿಂದ್‌ ಗೌತಮ್‌

KannadaprabhaNewsNetwork | Published : Feb 6, 2025 11:45 PM

ಸಾರಾಂಶ

ದೀಪಕ್‌ ಮಧುವನಹಳ್ಳಿ ನಿರ್ದೇಶನದಲ್ಲಿ ಮಿಲಿಂದ್‌ ಗೌತಮ್‌ ನಾಯಕನಾಗಿರುವ ಅನ್‌ಲಾಕ್‌ ರಾಘವ ಸಿನಿಮಾ ಇಂದು ರಿಲೀಸ್‌ ಆಗುತ್ತಿದೆ. ಮಂಜುನಾಥ್‌ ಡಿ ಹಾಗೂ ಗಿರೀಶ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಸಿನಿಮಾ ರಿಲೀಸ್‌ ಹಿನ್ನೆಲೆಯಲ್ಲಿ ಹೀರೋ ಮಿಲಿಂದ್ ಮಾತು.

ಪ್ರಿಯಾ

- ಮೊದಲ ಸಿನಿಮಾ ರಿಲೀಸ್‌. ಹೀರೋ ಆಗಿರೋ ಫೀಲ್ ಹೇಗಿದೆ?

ಖುಷಿ, ಭಯ ಇದೆ. ಪ್ರೀಮಿಯರ್‌ಗೆ ಒಳ್ಳೆ ರೆಸ್ಪಾನ್ಸ್‌ ಸಿಕ್ಕಿದೆ. ಹಿಂದೆ ಒಂದೆರಡು ಸಿನಿಮಾಗಳ ಸೆಲೆಬ್ರಿಟಿ ಶೋಗೆ ಹೋಗಿ ಗೊತ್ತಿತ್ತಷ್ಟೇ. ಈಗ ನಾನೇ ಹೀರೋ ಅಂದಾಗ ಎಲ್ಲರ ಫೋಕಸ್‌ ನನ್ನ ಮೇಲೇ ಇರುತ್ತೆ. ಎಲ್ಲರೂ ಬಂದು ನನ್ನನ್ನು ಮಾತಾಡಿಸ್ತಾರೆ, ವಿಶ್‌ ಮಾಡ್ತಾರೆ. ಸ್ಪಾಟ್‌ಲೈಟ್‌ ನನ್ನ ಮೇಲೆ ಇರೋದು ಒಂಥರಾ ಥ್ರಿಲ್ಲಿಂಗ್. - ಸಿನಿಮಾಗೆ ಬಂದಿರೋ ಉದ್ದೇಶ?

ಇಂಡಸ್ಟ್ರಿಗೆ ಬರೋ ಉದ್ದೇಶ ಇರಲಿಲ್ಲ. ಆದರೆ ಒಂದು ಸಬ್ಜೆಕ್ಟ್‌ ನನ್ನನ್ನೇ ಹುಡುಕಿಕೊಂಡು ಬಂತು. ನಟನೆಯಲ್ಲಿ ಟ್ರೈನಿಂಗ್ ತಗೊಂಡೆ. ಆಮೇಲೆ ಇದೇ ನನ್ನ ಜಾಗ ಅನಿಸಿತು. ಇಲ್ಲಿ ಬೆಳೆಯುವ ನಂಬಿಕೆ ಇದೆ. ಇಲ್ಲಿ ಮಾಡೋದು ಸಾಕಷ್ಟಿದೆ. ನಾನು ಓದಿದ್ದು ಇಂಜಿನಿಯರಿಂಗ್‌. ಆದರೆ ಇನ್ಮೇಲೆ ಆ ಕಡೆ ತಿರುಗೂ ನೋಡಲ್ಲ. - ರೋಮ್‌ ಕಾಮ್‌ ಸಿನಿಮಾ ಇದು. ಚಾಕೊಲೇಟ್‌ ಹೀರೋ ಇಮೇಜ್ ಇಷ್ಟನಾ?

ಇದರಲ್ಲಿ ಒಂದು ಕಡೆ ನನ್ನ ಕ್ಯೂಟ್‌ನೆಸ್ ನೋಡ್ತೀರಿ. ಇನ್ನೊಂದು ಕಡೆ ಆ್ಯಕ್ಷನ್‌ ಫೇಸ್‌ ನೋಡ್ತೀರಿ. ಜನ ನನ್ನ ಯಾವ ಫೇಸನ್ನು ಆಯ್ಕೆ ಮಾಡ್ತಾರೋ ಅದರಲ್ಲೇ ನನ್ನ ಭವಿಷ್ಯ ನಿಂತಿದೆ ಅಂದುಕೊಂಡಿದ್ದೇನೆ. - ಈಗ ಎಲ್ಲರೂ ಆ್ಯಕ್ಷನ್‌ ಗೀಳಿನಲ್ಲಿರುವಾಗ ನೀವು ಹೇಗೆ ಫ್ಯಾಮಿಲಿ ಡ್ರಾಮಾದತ್ತ ಆಕರ್ಷಿತರಾಗಿದ್ದು?

ಇಂದು ಯಶಸ್ವಿ ಹೀರೋಗಳಾದವರೆಲ್ಲರ ಮೊದಲ ಚಿತ್ರಗಳು ಫ್ಯಾಮಿಲಿ ಡ್ರಾಮಾಗಳೇ ಆಗಿದ್ದವು. ಆಮೇಲೆ ಮಾಸ್‌ ಸಿನಿಮಾ ಮಾಡಿದ್ರು. ಹೀಗೆ ನನಗೂ ಮೊದಲು ಮನೆ ಮಗನಂಥಾ ಫೀಲ್‌ ಕೊಡುವ ಸಿನಿಮಾ ಮಾಡಬೇಕು ಅಂತ ಆಸೆ. ವೈಯುಕ್ತಿಕವಾಗಿಯೂ ನಂಗೆ ಲವ್‌ ಸ್ಟೋರೀಸ್‌ ಇಷ್ಟ. ಇವತ್ತಿಗೂ ರವಿಚಂದ್ರನ್‌, ಸುದೀಪ್‌ ಅವರ ಹಳೆ ಲವ್‌ ಸಬ್ಜೆಕ್ಟ್‌ ಸಿನಿಮಾ ನೋಡ್ತೀನಿ. - ಅನ್‌ಲಾಕ್‌ ರಾಘವನಲ್ಲಿ ನಿಮಗಿಷ್ಟವಾದ ಗುಣ?

ಆತ ಮುಗ್ಧ . ನಾನೂ ಆ್ಯಂಬಿವರ್ಟ್‌. ನಮ್ಮಿಬ್ಬರ ಸ್ವಭಾವವೂ ಹೆಚ್ಚು ಕಡಿಮೆ ಒಂದೇ ಥರ ಇದೆ. ಆತನಿಗೆ ಏನೇನೋ ಸಾಧನೆ ಮಾಡಬೇಕು ಅನ್ನೋ ಹುಚ್ಚು ಕನಸುಗಳೆಲ್ಲ ಇರುತ್ತವೆ. ಇನ್ನೋಸೆಂಟ್‌ ರಾಘವ ಒಂದು ಲಾಕ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ಹೇಗೆ ಅನ್‌ಲಾಕ್‌ ಮಾಡಿಕೊಂಡು ಆಚೆ ಬರ್ತಾನೆ ಅನ್ನೋದೆ ಸಿನಿಮಾದ ಒನ್‌ಲೈನ್‌.

- ಯಾಕೆ ಜನ ನಿಮ್ಮ ಸಿನಿಮಾ ನೋಡ್ಬೇಕು?

ನಮ್ಮ ಸಿನಿಮಾದ ಉದ್ದೇಶ ಜನರನ್ನು 2 ಗಂಟೆ ಆರು ನಿಮಿಷ ನಗಿಸಬೇಕು, ಮನರಂಜನೆ ನೀಡಬೇಕು ಅನ್ನೋದು. ಇದರಿಂದ ಮನೆಗೆ ಏನೋ ತಗೊಂಡು ಹೋಗಿ ರಾತ್ರಿ ಎಲ್ಲಾ ಯೋಚ್ನೆ ಮಾಡೋ ಥರ ಏನೂ ಇರಲ್ಲ. ಒಂದೊಳ್ಳೆಯ ಸದಭಿರುಚಿ ಇರುವ ಲೈಟ್‌ ಹಾರ್ಟೆಡ್‌ ಸಿನಿಮಾ ನಮ್ಮದು.

Share this article