ನಟ, ನಿರ್ದೇಶಕ ಉಪೇಂದ್ರ ಅವರು ಸೋಮವಾರ ಮಧ್ಯಾಹ್ನ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆತಂಕ ಸೃಷ್ಟಿಯಾಗಿತ್ತು. ಸೂಕ್ತ ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಬೆಂಗಳೂರು : ನಟ, ನಿರ್ದೇಶಕ ಉಪೇಂದ್ರ ಅವರು ಸೋಮವಾರ ಮಧ್ಯಾಹ್ನ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆತಂಕ ಸೃಷ್ಟಿಯಾಗಿತ್ತು. ಸೂಕ್ತ ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
‘ಹೊಟ್ಟೆ ಸಮಸ್ಯೆ, ಲೋ ಬಿಪಿ, ಡೀಹೈಡ್ರೇಷನ್ ಕಾರಣದಿಂದ ಉಪೇಂದ್ರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಹುಷಾರಾಗಿದ್ದಾರೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಚಿಕಿತ್ಸೆ ಪಡೆದು ಮನೆಗೆ ವಾಪಸಾದ ಬಳಿಕ ಖುದ್ದು ತಾವೇ ಟ್ವೀಟ್ ಮಾಡಿರುವ ಉಪೇಂದ್ರ, ‘ಎಲ್ಲರಿಗೂ ನಮಸ್ಕಾರ. ನಾನು ಆರೋಗ್ಯವಾಗಿದ್ದೇನೆ. ರೆಗ್ಯುಲರ್ ಚೆಕ್ ಅಪ್‌ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ. ಯಾವುದೇ ಊಹಾಪೋಹಗಳಿಗೆ ಕಿವಿಕೊಟ್ಟು ಗೊಂದಲಕ್ಕೆ ಒಳಗಾಗಬೇಡಿ. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು’ ಎಂದು ಬರೆದಿದ್ದಾರೆ.
‘ಯುಐ’ ಚಿತ್ರೀಕರಣದ ಸಂದರ್ಭದಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿ ಆಗಲೂ ಉಪೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ದೀರ್ಘ ಸಮಯದ ಚಿತ್ರೀಕರಣ, ಕೆಲಸದ ಒತ್ತಡ ಹಾಗೂ ಆಹಾರ ಸಮಸ್ಯೆ ಸೇರಿ ಹಲವು ಕಾರಣಗಳಿಂದ ಆರೋಗ್ಯ ಸಮಸ್ಯೆ ಉಂಟಾಗಿರಬಹುದೆಂದು ಮೂಲಗಳು ತಿಳಿಸಿವೆ.