;Resize=(412,232))
ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸುಮಾರು 15 ವರ್ಷ ಶ್ರಮ ಪಟ್ಟಿದ್ದೇನೆ. ಸಿನಿಮಾ ಕೆಲಸ ಇಲ್ಲದೇ ಇದ್ದಾಗ ಕೆ.ವಿ. ಜಯರಾಮ್ ಜೊತೆ ಕುಳಿತು ಕತೆ ಮಾಡಿದ್ದೇನೆ, ಸ್ಕ್ರಿಪ್ಟ್ ಮಾಡಿದ್ದೇನೆ. ನಿರ್ಮಾಣ ಕೂಡ ಮಾಡಿದ್ದೇನೆ. ಆ ಕಾಲದ ಎಲ್ಲರೂ ಅಷ್ಟೇ ಶ್ರಮ ಪಟ್ಟಿದ್ದಾರೆ. ಡಾ. ರಾಜ್‌ಕುಮಾರ್ ರಂಗಭೂಮಿಯಿಂದ ಬಂದವರು. ನಾನೂ ರಂಗಭೂಮಿಯಿಂದ ಬಂದವನು. ರಂಗಭೂಮಿಯಿಂದ ಬಂದ ಎಲ್ಲರಿಗೂ ಸಾಹಿತ್ಯದ ಸಹವಾಸವಿತ್ತು. ಆದರೆ ಈಗ ಕತೆ, ಚಿತ್ರಕತೆ ಮಾಡುವ ಮೊದಲು ಬಜೆಟ್ ಹೇಳುತ್ತಾರೆ. ಯಾಕೆ ಅಷ್ಟು ಎಂದು ಕೇಳಿದರೆ ಸ್ಟಾರ್ ಸಂಭಾವನೆಯ ನಂಬರ್ ಹೇಳುತ್ತಾರೆ. ಕತೆ ಗೊತ್ತಿಲ್ಲ, ಸಿದ್ಧತೆ ಇಲ್ಲ, ಆದರೆ ಎಷ್ಟು ಖರ್ಚು ಮಾಡಬೇಕು ಅಂತ ಗೊತ್ತಿರುವುದೇ ಈ ಕಾಲದ ವಿಪರ್ಯಾಸ.
ಆಗ ಮೊದಲು ಕತೆ ಮಾಡುತ್ತಿದ್ದರು. ಆಮೇಲೆ ಸ್ಟಾರ್‌ಗೆ ಕತೆ ಹೇಳುತ್ತಿದ್ದರು. ನನ್ನ ಹಲವು ಸೂಪರ್‌ಹಿಟ್ ಸಿನಿಮಾಗಳು ಇನ್ಯಾರೋ ಮಾಡುವುದಿಲ್ಲ ಎಂದು ಹೇಳಿದ ಸ್ಕ್ರಿಪ್ಟ್‌ಗಳು. ನಾನು ಒಪ್ಪಿದೆ. ಮೊದಲು ಕತೆ, ಆಮೇಲೆ ಕಲಾವಿದ. ಈಗೀಗ ಪೂರ್ತಿ ಕತೆ ಹೇಳುವುದಿಲ್ಲ. ನನ್ನ ಪಾತ್ರದ ಕತೆ ಮಾತ್ರ ಹೇಳುತ್ತಾರೆ. ಹಾಗಾಗಿಯೇ ನಾನು ನಟಿಸುವುದನ್ನು ಬಿಟ್ಟಿದ್ದೇನೆ.
ಈಗ ನಿರ್ದೇಶಕರು ಶಿಕ್ಷಕರ ಸ್ಥಾನದಲ್ಲಿ ಇಲ್ಲ. ಶಿಕ್ಷಣ ಕೊಡುವ ಶಕ್ತಿ ಇಲ್ಲ. ಒಬ್ಬ ಶಕ್ತಿಯುತ ನಿರ್ದೇಶಕ ಸ್ಟಾರ್‌ನನ್ನು ಹುಟ್ಟುಹಾಕಬಲ್ಲ. ನಮ್ಮ ಕಾಲದಲ್ಲಿ ನಿರ್ದೇಶಕರು ಎಷ್ಟು ಮಂದಿ ಸ್ಟಾರ್‌ರನ್ನು ಹುಟ್ಟುಹಾಕಿದರು ಅಂತ ನೋಡಿದರೆ ಅಚ್ಚರಿಯಾಗುತ್ತದೆ. ನಿರ್ದೇಶಕರು ಅಷ್ಟು ಶಕ್ತಿ ಹೊಂದಬೇಕು. ಉತ್ತಮ ಬರಹಗಾರರನ್ನು ಜೊತೆಗಿಟ್ಟುಕೊಳ್ಳಬೇಕು. ಚಿತ್ರರಂಗದಲ್ಲಿ ಬರಹಗಾರರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಕ್ರಮ ಇಲ್ಲವೇ ಇಲ್ಲ.
ಸ್ಟಾರ್‌ಗಳಂತೂ ಓದುವುದಿಲ್ಲ. ಚಿತ್ರಕತೆ ಕುರಿತು ಆಳವಾದ ಜ್ಞಾನವಿಲ್ಲ. ಅಂಥಾ ಸ್ಟಾರ್‌ಗಳ ಅವಲಂಬನೆ ಜಾಸ್ತಿಯಾಗಿದೆ ಮತ್ತು ಅದರಿಂದಲೇ ಚಿತ್ರರಂಗಕ್ಕೆ ಹೀಗಾಗಿದೆ.
Go to Basic. ಬೇಸಿಕ್ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು. ಸಿನಿಮಾ ಮಾಡಬೇಕು ಅಂತ ಬರುವ ನಿರ್ಮಾಪಕರು ದುಡ್ಡಿದೆ ಅಂತ ಬರಬಾರದು. ದುಡ್ಡಿದೆ ಅಂತ ಬಂದಾಗ ದುಡ್ಡು ಕಿತ್ತುಕೊಳ್ಳುವವರು ಇದ್ದೇ ಇರುತ್ತಾರೆ. ಬದಲಿಗೆ ಸಿನಿಮಾ ಬಗ್ಗೆ ತಿಳಿದುಕೊಳ್ಳಿ. ಎಲ್ಲಿ ಎಷ್ಟು ಖರ್ಚಾಗುತ್ತದೆ ಎಂದು ಅರಿಯಿರಿ. ಸ್ಟಾರ್ ಸಂಭಾವನೆ ಜಾಸ್ತಿಯಾಗುತ್ತದೆ ಎಂದರೆ ಸ್ಟಾರ್‌ನನ್ನು ಬಿಟ್ಟುಬಿಡಿ, ಹೊಸಬರನ್ನು ಇಟ್ಟುಕೊಂಡು ಸಿನಿಮಾ ಮಾಡಿ. ರಂಗಭೂಮಿಯಲ್ಲಿ, ಟಿವಿಗಳಲ್ಲಿ ಕೆಲಸ ಮಾಡುತ್ತಿರುವ ಸಾಕಷ್ಟು ಕಲಾವಿದರಿದ್ದಾರೆ. ಹೊಸ ಸ್ಟಾರ್‌ನ ಹುಟ್ಟುಹಾಕಿ.
ನಾನು 50 ಸಾವಿರ ಸಬ್ಸಿಡಿಯಿಂದಲೂ ಈ ಚಿತ್ರರಂಗವನ್ನು ನೋಡುತ್ತಾ ಬಂದಿದ್ದೇನೆ. ಈಗ ಸಬ್ಸಿಡಿಯೇ 15- 25 ಲಕ್ಷ ಕೊಡುತ್ತಾರೆ. ಸಿನಿಮಾ ಮಾಡುವ ನಿರ್ಮಾಪಕನಿಗೆ ಹಣದ ಮೌಲ್ಯ ಗೊತ್ತಿರಬೇಕು. ಈಗೆಲ್ಲಾ ಕೋಟಿಗಳಲ್ಲಿ ಲೆಕ್ಕ ಹಾಕುತ್ತಾರೆ. ಲಕ್ಷಗಳೂ ಹಣವೇ ಅಲ್ಲವೇ. ಒಂದೊಂದು ರೂಪಾಯಿಯೂ ಹಣವೇ. ಆ ಮೌಲ್ಯ ಅರಿಯಿರಿ. ಎಲ್ಲವನ್ನೂ ಕಳೆದುಕೊಂಡ ಮೇಲೆ ನಿಮ್ಮ ಗೋಳಿನ ಕತೆ ಕೇಳಲು ಈ ಜಗತ್ತಲ್ಲಿ ಯಾರಿಗೂ ಪುರುಸೊತ್ತಿಲ್ಲ. ಆಥರದ ಕೆಲಸ ಮಾಡಬೇಡಿ.
ಮೊದಲು ಕಾದಂಬರಿ ಆಧಾರಿತ ಸಿನಿಮಾಗಳು ಬರುತ್ತಿದ್ದವು. ಮಹಿಳಾ ಬರಹಗಾರರಿದ್ದಾರಲ್ಲ, ಅವರಿಗಿಂತ ಹೆಚ್ಚು ಜೀವನವನ್ನು ನೋಡಿರುವವರು ಬೇರೆ ಇರಲು ಸಾಧ್ಯವಿಲ್ಲ. ಅಂಥಾ ಬರಹಗಾರರನ್ನು ಕರೆತನ್ನಿ. ಮಹಿಳಾ ಆಧರಿತ ಕತೆಗಳನ್ನು ಮಾಡಿ. ಆಗ ಮಹಿಳೆಯರು ಚಿತ್ರಮಂದಿರಕ್ಕೆ ಬರುತ್ತಾರೆ. ಅವರು ಚಿತ್ರಮಂದಿರಕ್ಕೆ ಬಂದರೆ ಅದೇ ದೊಡ್ಡ ಗೆಲುವು.
ನನ್ನ ತಮ್ಮ ಶಂಕರ ಕೇವಲ 12 ವರ್ಷದಲ್ಲಿ ಎಷ್ಟು ಸಿನಿಮಾಗಳನ್ನು ಮಾಡಿದ್ದಾನೆ, ಅದರಲ್ಲಿ ಹಿಟ್ ಎಷ್ಟು, ಹಿಟ್ ಅಲ್ಲದ ಸಿನಿಮಾಗಳೆಷ್ಟು ಎಂದು ಲೆಕ್ಕ ಹಾಕಿ ನೋಡಿ. ಶ್ರಮ ಬೇಕು. ಯಾರೂ ಇಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾಗಲ್ಲ. ಅದೇ ಥರ ನಮ್ಮಲ್ಲಿ ಬಹುತೇಕರು ಕಷ್ಟಪಟ್ಟು ಸ್ಟಾರ್‌ಗಳಾದವರು. ನಿರ್ದೇಶಕರು ಅವರಿಗೆ ಬೆಳಕು ತೋರಬೇಕು. ಯಾರೂ ಭೂತವನ್ನು ನಂಬಿಕೊಂಡು ಕತ್ತಲಲ್ಲಿ ನಡೆಯುವುದಿಲ್ಲ. ದೀಪ ಹಿಡಿದು ಹೋಗಬೇಕು.
ಬೇರೆಲ್ಲಾ ಕಲೆಗಳು ಚೆನ್ನಾಗಿಯೇ ನಡೆಯುತ್ತಿವೆ, ಜನಪ್ರೀತಿ ಗಳಿಸುತ್ತಿವೆ. ಸಿನಿಮಾ ಕೂಡ ಆ ದಾರಿಯಲ್ಲಿಯೇ ನಡೆಯಬೇಕಾದರೆ ಮತ್ತೆ ಬೇಸಿಕ್‌ಗೆ ಹೋಗಬೇಕು. ಹೊಸ ಚಿಂತನೆ ಬೇಕು. ಹಳ್ಳಿ ಮಾರ್ಗದಲ್ಲಿ ನಡೆಯಬೇಕು. ಹೊಸ ಕತೆಗಳು ಬರಬೇಕು. ದಾರಿ ನಿಚ್ಚಳವಾಗುತ್ತದೆ.