270ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸರಿಗಮ ವಿಜಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಆರ್.ವಿಜಯ್ ಕುಮಾರ್(76) ಬಹು ಅಂಗಾಗ ವೈಫಲ್ಯದಿಂದ ವಿಧಿವಶರಾಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬೆಂಗಳೂರು : 270ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸರಿಗಮ ವಿಜಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಆರ್.ವಿಜಯ್ ಕುಮಾರ್(76) ಬಹು ಅಂಗಾಗ ವೈಫಲ್ಯದಿಂದ ವಿಧಿವಶರಾಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಶ್ವಾಸಕೋಶ ಸೋಂಕಿನಿಂದ ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಜಿ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅಸುನೀಗಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ರಾಜಕೀಯ, ಸಿನಿಮಾ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಗುರುವಾರ ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರಿಗಮ ವಿಜಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಬಳಿಕ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
''ಬೆಳವಲದ ಮಡಿಲಲ್ಲಿ'' ಮೂಲಕ ಸಿನಿಮಾಗೆ ಎಂಟ್ರಿ:
‘ಸಂಸಾರದಲ್ಲಿ ಸರಿಗಮ’ ನಾಟಕದ ಹೆಸರನ್ನು ತನ್ನ ಹೆಸರಿಗೆ ಜೋಡಿಸಿಕೊಂಡಿದ್ದ ಸರಿಗಮ ವಿಜಿ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದು 1975ರಲ್ಲಿ ತೆರೆಕಂಡ ಗೀತಪ್ರಿಯ ನಿರ್ದೇಶನದ ‘ಬೆಳುವಲದ ಮಡಿಲಲ್ಲಿ’ ಸಿನಿಮಾ ಮೂಲಕ. ಈ ಸಿನಿಮಾಕ್ಕೆ ಅವರು ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು ಎಂಬುದು ವಿಶೇಷ.
ಮುಂದೆ ‘ಹರಕೆ’, ‘ಕಪ್ಪು ಕೋಲ’, ‘ಚಂಡ ಮಾರುತ’, ‘ಜಗತ್ ಕಿಲಾಡಿ’, ‘ಯಮಲೋಕದಲ್ಲಿ ವೀರಪ್ಪನ್’, ‘ದುರ್ಗಿ’ ಸೇರಿ 270ಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದರು. 80ಕ್ಕೂ ಅಧಿಕ ಸಿನಿಮಾಗಳ ಸಹ ನಿರ್ದೇಶಕರಾಗಿ ದುಡಿದರು.
ಟೈಗರ್ ಪ್ರಭಾಕರ್ ಅವರಿಗೆ ಆಪ್ತರಾಗಿದ್ದ ವಿಜಿ ಅವರ ಜೊತೆಗೆ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಕಲಾವಿದರಾಗಿ ನಟಿಸಿದ್ದಾರೆ. ‘ಕೆಂಪಯ್ಯ ಐಪಿಎಸ್’, ‘ಯಮ ಕಿಂಕರ’, ‘ಮಾರ್ತಾಂಡ’ದಂಥ ಸಿನಿಮಾಗಳಲ್ಲಿ ಪ್ರಭಾಕರ್ ಜೊತೆಗಿನ ಇವರ ಅಭಿನಯ ಜನಮೆಚ್ಚುಗೆ ಗಳಿಸಿತ್ತು. 2018ರಲ್ಲಿ ತೆರೆಕಂಡ ‘ಡಕೋಟಾ ಎಕ್ಸ್‌ಪ್ರೆಸ್’ ಇವರ ನಟನೆಯ ಕೊನೆಯ ಸಿನಿಮಾ. ಈ ನಡುವೆ ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು.
‘ಕಿರಣ್ ಬೇಡಿ’ ಸಿನಿಮಾ ಶೂಟಿಂಗ್ ವೇಳೆ ಕಾಲಿಗೆ ಏಟು ತಗುಲಿ ಸಾಕಷ್ಟು ಸಮಯ ಹಾಸಿಗೆ ಹಿಡಿಯುವಂತಾಗಿತ್ತು. ಆ ಬಳಿಕ ಇವರ ನಟನೆಯ ಸಿನಿಮಾಗಳ ಸಂಖ್ಯೆಯೂ ಕ್ಷೀಣಿಸತೊಡಗಿತ್ತು. ಅದಕ್ಕೂ ಮೊದಲು ಅವರು ರಂಗಭೂಮಿಯಲ್ಲಿ ತನ್ನ ಛಾಪು ಮೂಡಿಸಿದ್ದರು.
ಸರಿಗಮ ವಿಜಿ ಅವರಿಗೆ ಖ್ಯಾತಿ ತಂದುಕೊಟ್ಟ ನಾಟಕ ‘ಸಂಸಾರದಲ್ಲಿ ಸರಿಗಮ’. ವಿಜಿ ಅವರು ತಾವೇ ಬರೆದು ನಿರ್ದೇಶಿಸಿ, ನಟಿಸಿದ ಈ ನಾಟಕ 1300ಕ್ಕೂ ಅಧಿಕ ಪ್ರದರ್ಶನ ಕಂಡು ವಿಜಯ್ ಕುಮಾರ್ ಹೆಸರನ್ನು ‘ಸರಿಗಮ ವಿಜಿ’ ಎಂದು ಜನಪ್ರಿಯಗೊಳಿಸಿತು. ಈ ನಾಟಕದಲ್ಲಿ ಹೆಸರಾಂತ ಕಲಾವಿದರಾದ ಉಮಾಶ್ರೀ, ವಿನಯಾ ಪ್ರಸಾದ್, ಶ್ರೀದೇವಿ ಮೊದಲಾದವರು ಬಣ್ಣ ಹಚ್ಚಿದ್ದರು. ಪ್ರತೀ ಯುಗಾದಿ ಹಬ್ಬಕ್ಕೂ ಬೇವು ಬೆಲ್ಲ ನೀಡಿ ಈ ನಾಟಕ ಪ್ರದರ್ಶನ ಮಾಡುವ ಪರಂಪರೆಯನ್ನು ವಿಜಿ ನಡೆಸಿಕೊಂಡು ಬರುತ್ತಿದ್ದರು.
ಸರಿಗಮ ವಿಜಿ ಜನಪ್ರಿಯ ಚಿತ್ರಗಳು
1. ಬೆಳುವಲದ ಮಡಿಲಲ್ಲಿ
2. ಹರಕೆ
3. ಕಪ್ಪುಕೊಳ
4. ಚಂಡಮಾರುತ
5. ತಾಳಿ ಭಾಗ್ಯ
6. ಬಡ್ಡಿ ಬಂಗಾರಮ್ಮ
7. ಕಿಲಾಡಿ ಅಳಿಯ
8. ಚಿಕ್ಕೆಜಮಾನ್ರು
9. ಪುಟ್ಮಲ್ಲಿ
10. ಏಪ್ರಿಲ್‌ಫೂಲ್