ಹಿಜಾಬ್‌ ವಿಚಾರದಲ್ಲಿ ಮುಂದಿದ್ದ ಕಾಂಗ್ರೆಸ್ಸಿಗರು ಜನಿವಾರಕೆ ಮೌನ? ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

KannadaprabhaNewsNetwork |  
Published : Apr 21, 2025, 12:47 AM ISTUpdated : Apr 21, 2025, 06:37 AM IST
ಡಾ.ಶಂಕರ ಗುಹಾ ದ್ವಾರಕಾನಾಥ್‌ | Kannada Prabha

ಸಾರಾಂಶ

ಹಿಜಾಬ್‌ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವಾಗ ಮುಂಚೂಣಿಯಲ್ಲಿದ್ದ ನಮ್ಮ ಪಕ್ಷದ ನಾಯಕರು, ಬ್ರಾಹ್ಮಣರಿಗೆ ಅಪಮಾನವಾದಾಗ ಏಕೆ ಸುಮ್ಮನಿದ್ದಾರೆಂದು ನನಗೆ ಅಚ್ಚರಿಯಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕಾನಾಥ್‌ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಹಿಜಾಬ್‌ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವಾಗ ಮುಂಚೂಣಿಯಲ್ಲಿದ್ದ ನಮ್ಮ ಪಕ್ಷದ ನಾಯಕರು, ಬ್ರಾಹ್ಮಣರಿಗೆ ಅಪಮಾನವಾದಾಗ ಏಕೆ ಸುಮ್ಮನಿದ್ದಾರೆಂದು ನನಗೆ ಅಚ್ಚರಿಯಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕಾನಾಥ್‌ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೀದರ್‌ ಜಿಲ್ಲೆಯ ಸಿಇಟಿ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ರಾಹ್ಮಣ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿಯೂ ಆದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, ಘಟನೆ ಸಂಬಂಧ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರೂ ತಪ್ಪಿತಸ್ಥರ ವಿರುದ್ಧ ಈವರೆಗೂ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ. ಇದು ಇಡೀ ರಾಜ್ಯ ಮತ್ತು ದೇಶದ ಬ್ರಾಹ್ಮಣ ಸಮುದಾಯಕ್ಕೆ ಮಾಡಿರುವ ಅವಮಾನ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬ್ರಾಹ್ಮಣರಿಗೆ ಅಪಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.

ನಾನು ಈ ಪತ್ರವನ್ನು ತಮಗೆ ತೀರ ಬೇಸರದಿಂದ ಬರೆಯುತ್ತಿದ್ದೇನೆ. ನಾನು ಬೇರೆ ಜಾತಿ ಧರ್ಮಗಳ ಬಗ್ಗೆ ಮಾತಾಡುವುದು ಸರಿಯಲ್ಲ. ಆದರೆ ಮತ್ಯಾರಿಗೆ ಆದರೂ ಈ ರೀತಿಯ ಘಟನೆ ನಡೆದಿದ್ದರೆ ಸರ್ಕಾರದ ನಿಲುವು ಏನಾಗುತ್ತಿತ್ತು. ಹಿಜಾಬ್ ವಿಷಯದಲ್ಲಿ ನಮ್ಮ ಪಕ್ಷ ಸಾಕಷ್ಟು ಮುಂಚೂಣಿಯಲ್ಲಿತ್ತು. ಆದರೆ ಬ್ರಾಹ್ಮಣರಿಗೆ ಅಪಮಾನವಾದಾಗ ಎಲ್ಲರೂ ಏಕೆ ಸುಮ್ಮನಿದ್ದಾರೆ? ಕೂಡಲೆ ಬೀದರ್ ಜಿಲ್ಲಾಧಿಕಾರಿಗಳಿಗೆ ತಾವು ಆದೇಶ ಕೊಟ್ಟು ಇಂಥ ನೀಚ ಕೆಲಸ ಮಾಡಿದಂತಹ ವ್ಯಕ್ತಿಗೆ ಶಿಕ್ಷೆ ಆಗಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಅಲ್ಲದೆ, ಈ ವಿಷಯದಲ್ಲಿ ಸರ್ಕಾರದ ನಿಲುವು ಏನೆಂಬುದು ಕೂಡ ಸರಿಯಾಗಿ ನಮಗೆ ತಿಳಿದು ಬಂದಿಲ್ಲ. ಸರ್ಕಾರದ ನಿಲುವನ್ನೂ ತಿಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬ್ರಾಹ್ಮಣರಿಗೆ ಯಜ್ಞೋಪವೀತ (ಜನಿವಾರ) ಪರಮ ಪವಿತ್ರವಾದಂತಹ ಒಂದು ವಸ್ತು. ಒಬ್ಬ ಹುಡುಗನಿಗೆ ಗಾಯತ್ರಿ ಮಂತ್ರ ಉಪದೇಶ ಮಾಡಿ ಸಂಸ್ಕಾರ ಕೊಟ್ಟು ಅವನಿಂದ ಸಮಾಜಕ್ಕೆ ಒಳ್ಳೆಯದಾಗಲೆಂದು ಮಾಡುವಂತಹ ಒಂದು ಕ್ರಿಯೆ ಇದು. ಇಂತಹ ಪವಿತ್ರ ವಸ್ತುವನ್ನು ವಿನಾ ಕಾರಣ ತೆಗೆಸಿ ಬೇಕಂತಲೇ ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಬೇಕೆಂದು ಮಾಡಿರುವಂತಹ ಕೃತ್ಯಕ್ಕೆ ನಮ್ಮ ಧಿಕ್ಕಾರ ಎಂದಿದ್ದಾರೆ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ