ಈಗ ಕೆಲಸ ಮುಗಿಸೋಣ, ನಿದ್ರೆ ಆಮೇಲೆ ಮಾಡಿದರಾಯಿತು! ಇದು ನಮ್ಮಲ್ಲಿ ಅನೇಕರ ದಿನಚರಿ. ಕಚೇರಿಯಲ್ಲಿ ದೀರ್ಘ ಕೆಲಸ, ಮನೆಗೆ ಬಂದ ಮೇಲೂ ಫೋನ್ ಕರೆಗಳು, ರಾತ್ರಿ ತಡವಾಗಿ ಊಟ, ಮಲಗುವವರೆಗೂ ಮೊಬೈಲ್ ಬಳಕೆ. ಇವೆಲ್ಲದರ ನಡುವೆ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯೇ ಮರೆಯಾಗುತ್ತಿದೆ.ಇದರ ಪರಿಣಾಮ ಕೇವಲ ಮರುದಿನದ ಸುಸ್ತಿಗೆ ಸೀಮಿತವಲ್ಲ. ದೀರ್ಘ ಕೆಲಸದ ಅವಧಿ ಮತ್ತು ಕಡಿಮೆ ನಿದ್ರೆ, ಪಾರ್ಶ್ವವಾಯು ಅಥವಾ ‘ಬ್ರೇನ್ ಸ್ಟ್ರೋಕ್’ ಅಪಾಯದೊಂದಿಗೆ ಸಂಬಂಧ ಹೊಂದಿವೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಅಧ್ಯಯನಗಳು, ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುವವರಲ್ಲಿ ಪಾರ್ಶ್ವವಾಯುವಿನ ಅಪಾಯ ಹೆಚ್ಚಿರುವುದನ್ನು ಸೂಚಿಸುತ್ತವೆ. ಇದರರ್ಥ ಹೆಚ್ಚು ಕೆಲಸ ಮಾಡುವ ಪ್ರತಿಯೊಬ್ಬರಿಗೂ ಪಾರ್ಶ್ವವಾಯು ಬರುತ್ತದೆ ಎಂದಲ್ಲ; ಆದರೆ ಇದಕ್ಕಿರುವ ಸಂಬಂಧವನ್ನು ನಿರ್ಲಕ್ಷಿಸಬಾರದು.ಕೆಲಸದ ಒತ್ತಡ ಹೆಚ್ಚಿದಾಗ ಊಟದ ಸಮಯ ತಪ್ಪುತ್ತದೆ, ವ್ಯಾಯಾಮ ಕಡಿಮೆಯಾಗುತ್ತದೆ. ಕೆಲವರು ಒತ್ತಡ ನಿವಾರಣೆಗೆ ಧೂಮಪಾನ ಅಥವಾ ಮದ್ಯಪಾನದ ಮೊರೆ ಹೋಗುತ್ತಾರೆ. ಆರೋಗ್ಯ ತಪಾಸಣೆ ಮತ್ತು ಸಕಾಲದಲ್ಲಿ ಔಷಧ ತೆಗೆದುಕೊಳ್ಳುವುದಿಲ್ಲ. ಇಂತಹ ಅಭ್ಯಾಸಗಳು ರಕ್ತದೊತ್ತಡ, ಮಧುಮೇಹ ಮತ್ತು ದೇಹದ ತೂಕದ ನಿಯಂತ್ರಣವನ್ನು ಅಸಮತೋಲನಗೊಳಿಸಿ, ಪಾರ್ಶ್ವವಾಯುವಿನ ಅಪಾಯ ಹೆಚ್ಚಿಸಬಹುದು.ನಿದ್ರೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು. ಜೋರಾಗಿ ಗೊರಕೆ ಹೊಡೆಯುವುದು, ನಿದ್ರೆಯಲ್ಲಿ ಉಸಿರು ನಿಂತಂತಾಗುವುದು, ಹಗಲು ಅತಿಯಾದ ತೂಕಡಿಕೆ ಕಾಣಿಸುವುದು ‘ಸ್ಲೀಪ್ ಅಪ್ನಿಯಾ’ ಲಕ್ಷಣಗಳಾಗಿರಬಹುದು. ಈ ಸಮಸ್ಯೆ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನ ಅಪಾಯದೊಂದಿಗೆ ಸಂಬಂಧ ಹೊಂದಿದೆ. ಇದನ್ನು ಸಾಮಾನ್ಯ ಗೊರಕೆ ಎಂದು ಕಡೆಗಣಿಸಬೇಡಿ.ಕೆಲವು ಸಣ್ಣ ಬದಲಾವಣೆಗಳಿಂದ ಪಾರ್ಶ್ವವಾಯುವಿನಿಂದ ಪಾರಾಗಲು ಯೋಜನೆ ರೂಪಿಸಿ. ಪ್ರತಿದಿನ ನಿದ್ರೆಗೆ ಸಾಕಷ್ಟು ಸಮಯ ಮೀಸಲಿಡಿ. ಮಲಗುವ ಮತ್ತು ಏಳುವ ಸಮಯ ಸಾಧ್ಯವಾದಷ್ಟು ಒಂದೇ ಆಗಿರಲಿ. ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡಿ. ಕೆಲಸದ ನಡುವೆ ಎದ್ದು ನಡೆಯುತ್ತಿರಿ. ನಿಯಮಿತ ವ್ಯಾಯಾಮ ಮಾಡಿ. ಉಪ್ಪು ಮತ್ತು ಸಂಸ್ಕರಿಸಿದ ಆಹಾರ ಕಡಿಮೆ ಮಾಡಿ. ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ; ವೈದ್ಯರು ನೀಡಿದ ಔಷಧಗಳನ್ನು ತಪ್ಪಿಸಬೇಡಿ.ಉದ್ಯೋಗದಲ್ಲಿ, ಸರಿಯಾದ ಕೆಲಸದ ಅವಧಿ, ವಿರಾಮ ಮತ್ತು ಕೆಲಸದ ನಂತರ ವಿಶ್ರಾಂತಿಗೆ ಅವಕಾಶ ನೀಡುವ ವಾತಾವರಣವೂ ಅಗತ್ಯ. ಮುಖ ಓರೆಯಾಗುವುದು, ಕೈಕಾಲುಗಳಲ್ಲಿ ಹಠಾತ್ ಬಲಹೀನತೆ ಅಥವಾ ಮಾತು ತೊದಲುವುದು ಕಂಡರೆ ತಕ್ಷಣ ತುರ್ತು ಚಿಕಿತ್ಸೆ ಪಡೆಯಿರಿ. ನಿದ್ರೆ ಮಾಡಿದರೆ ಸರಿಯಾಗುತ್ತದೆ ಎಂದು ಕಾಯಬೇಡಿ.
Consultant – Radiology and Interventional Neuroradiology, Manipal Hospital Kanakapura Road