;Resize=(412,232))
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಹರಿದುಬಂದಿದೆ. ಆದರೆ ಇದು ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೇಲೆ ಅಷ್ಟೇನೂ ಪರಿಣಾಮ ಬೀರಿದಂತಿಲ್ಲ. ವಿಶ್ವಾದ್ಯಂತ ಚಿತ್ರದ ಮೊದಲ ದಿನದ ಕಲೆಕ್ಷನ್ ರೂ.125 ಕೋಟಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸಿನಿಮಾ ರೂ.90ರಿಂದ 95 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ.
ಯಾವುದೇ ಪ್ರೀಮಿಯರ್ ಶೋ, ಸೆಲೆಬ್ರಿಟಿ ಶೋಗಳಿಲ್ಲದೇ ಆರು ಭಾಷೆಗಳಲ್ಲಿ ರಿಲೀಸ್ ದಿನದಂದೇ ತೆರೆಗೆ ಬಂದ ಸಿನಿಮಾದ ಹೆಚ್ಚಿನೆಲ್ಲ ಫ್ಯಾನ್ ಶೋಗಳು ಹೌಸ್‌ಫುಲ್ ಆಗಿದ್ದವು. ಕನ್ನಡದಲ್ಲಿ ಚಿತ್ರ ಮೊದಲ ದಿನ 20 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದರೆ, ಹಿಂದಿ ಭಾಷೆಯಲ್ಲಿ 50 ಕೋಟಿ ರು.ಗಳಿಗೂ ಹೆಚ್ಚು ಕಲೆಕ್ಷನ್ ಆಗಿದೆ. ತೆಲುಗು ಭಾಷೆಯಲ್ಲಿ 11 ಕೋಟಿ ರು.ಗಳಷ್ಟು ಗಳಿಕೆ ದಾಖಲಾಗಿದೆ.
ಕನ್ನಡದಲ್ಲಿ ಈ ಹಿಂದೆ ‘ಕೆಜಿಎಫ್ 2’ ಈ ರೀತಿಯ ತೀವ್ರ ಗಳಿಕೆಯ ಮೂಲಕ ಸುದ್ದಿಯಾಗಿತ್ತು. ಆ ಬಳಿಕ ಯಶ್ ಅವರದೇ ಎರಡನೇ ಸಿನಿಮಾ ಮತ್ತೆ ದಾಖಲೆ ಮಾಡುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಮಾರ್ಚ್‌ನಲ್ಲಿ ತೆರೆಕಂಡ ‘ಧುರಂಧರ್ 2’ ಸಿನಿಮಾ 146 ಕೋಟಿ ರು. ಮೂಲಕ ಮೊದಲ ದಿನವೇ ಅತ್ಯಧಿಕ ಗಳಿಕೆ ದಾಖಲಿಸಿತ್ತು. ಎರಡನೇ ಸ್ಥಾನದಲ್ಲಿ ‘ಟಾಕ್ಸಿಕ್’ ಇದೆ.
ಯಶ್ ಅಭಿಮಾನಿಗಳು 4 ವರ್ಷಗಳ ಬಳಿಕ ಬಂದ ಯಶ್ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಒಟ್ಟಾರೆಯಾಗಿ ಟಾಕ್ಸಿಕ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ.