;Resize=(412,232))
ನಟ ಡಾಲಿ ಧನಂಜಯ ಅವರು ಅಭಿಮಾನಿಗಳ ಜೊತೆಗೆ ಭಾನುವಾರ (ಆ.23) ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ನಡೆದ ಸಂಭ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದೊಡ್ಡ ಮಟ್ಟದಲ್ಲಿ ಧನಂಜಯ ಅವರ ಅಭಿಮಾನಿಗಳು ಆಗಮಿಸಿದ್ದರು. ತಮ್ಮ ಹುಟ್ಟುಹಬ್ಬದ ಅಂಗವಾಗಿ ಬಿಬಿಎಂಪಿ ಪೌರಕಾರ್ಮಿಕರಿಗೆ ಹಾಗೂ ಆಟೋ ಚಾಲಕರಿಗೆ ಧನಂಜಯ ಅವರೇ ಹೊಸ ಬಟ್ಟೆ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಡಾಲಿ ಅಭಿಮಾನಿಗಳ ಸಂಘದಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ 3.5 ಟನ್ ಅಕ್ಕಿ ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಇನ್ನೂ ಎಂಇಎಸ್ ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ ‘ಅಣ್ಣ ಫ್ರಮ್ ಮೆಕ್ಸಿಕೋ’, ‘ಜಿಂಗೋ’, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹಾಗೂ ತೆಲುಗಿನ ‘ಎಸ್‌ವೈಜಿ’ ಚಿತ್ರಗಳ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆಯಾ ಚಿತ್ರತಂಡಗಳ ವತಿಯಂದಲೂ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಡಾಲಿ ಧನಂಜಯ ಮಾತನಾಡಿ, ‘ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಹೀಗೆ ಪ್ರತಿ ವರ್ಷವೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಆ ಮೂಲಕ ನನ್ನ ಕಲಾ ಪಯಣದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಅಭಿಮಾನಿಗಳ ಸಂಭ್ರಮ ನೋಡಿದಾಗ ಖುಷಿ ಮತ್ತು ಸಾರ್ಥಕದ ಭಾವನೆ ಮೂಡುತ್ತದೆ’ ಎಂದು ಸಂಭ್ರಮ ವ್ಯಕ್ತಪಡಿಸಿದರು.