;Resize=(412,232))
ಡಿಸೆಂಬರ್ ತಿಂಗಳು ಬಂತೆಂದರೆ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಬೆಂಕಿಯಲ್ಲಿ ಕೂತಂಥಾ ಅನುಭವ. ಹಲವು ಸಿನಿಮಾ ತಂಡಗಳು ಏಕಾಏಕಿ ನುಗ್ಗಿ ಹೇಗಾದರೂ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೆಟ್ ನೀಡುವಂತೆ ದುಂಬಾಲು ಬೀಳುತ್ತವೆ. ಎಮೋಶನಲ್ ಬ್ಲಾಕ್‌ಮೇಲ್‌ಗಳೂ ನಡೆಯೋದುಂಟು. ಈ ವರ್ಷವೂ ಸನ್ನಿವೇಶ ಭಿನ್ನವಾಗಿಲ್ಲ.
ವರ್ಷಾಂತ್ಯದಲ್ಲಿ ಸೆನ್ಸಾರ್ ಬೋರ್ಡ್ ಮೇಲೆ ಬರುವ ಒತ್ತಡಗಳ ಬಗ್ಗೆ ವಿವರ ನೀಡಿದ ಯಶವಂತ್, ‘ಇಡೀ ವರ್ಷ ಸುಮ್ಮನಿರುವ ಸಿನಿಮಾ ಮಂದಿ ವರ್ಷಾಂತ್ಯದಲ್ಲಿ ಇದ್ದಕ್ಕಿದ್ದಂತೆ ಸೆನ್ಸಾರ್‌ಗೆ ಅಪ್ಲೈ ಮಾಡಿ ಸರ್ಟಿಫಿಕೆಟ್ ನೀಡುವಂತೆ ಗೋಗರೆಯುತ್ತಾರೆ. ಸರ್ಟಿಫಿಕೆಟ್ ಕೊಡದಿದ್ದರೆ ನಿರ್ಮಾಪಕರು ನೇ8 ಹಾಕಿಕೊಳ್ತಾರೆ ಎಂದೆಲ್ಲ ಬೆದರಿಕೆ ಹಾಕುತ್ತಾರೆ. ಕಣ್ಣೀರು ಹಾಕುವುದು, ಎಮೋಶನಲ್ ಆಗಿ ಗೋಗರೆಯುವುದು ಎಲ್ಲವೂ ನಡೆಯುತ್ತದೆ’ ಎನ್ನುತ್ತಾರೆ.
‘ಇಲ್ಲಿ ಇರುವುದು ಒಬ್ಬ ಅಧಿಕಾರಿ. ಆತ ಸಿನಿಮಾ ನೋಡುವುದಾ, ಆಫೀಸ್ ಕೆಲಸ ಮಾಡುವುದಾ, ಕೋರ್ಟ್‌ಗೆ ಹೋಗಿ ಕೇಸ್ ಅಟೆಂಡ್ ಮಾಡುವುದಾ.. ಆದರೂ ಶಕ್ತಿಮೀರಿ ಸಿನಿಮಾ ನೋಡುತ್ತೇವೆ. ಇದು ಸಿನಿಮಾಗೆ ಸೆನ್ಸಾರ್ ನೀಡುವ ಕೆಲಸ ಆದ್ದರಿಂದ ಹೆಚ್ಚು ಜಾಗರೂಕತೆ ಅವಶ್ಯಕ. ಸ್ವಲ್ಪ ಎಚ್ಚರ ತಪ್ಪಿದರೂ ಕ್ರೈಮ್, ಸೆಕ್ಸ್ ಸೀನ್ ಇರುವ ಸಿನಿಮಾಗಳಿಗೆ ‘ಯು’ ಸರ್ಟಿಫಿಕೆಟ್ ಕೊಟ್ಟು ಅದನ್ನು ಮಕ್ಕಳೆಲ್ಲ ನೋಡುವಂತಾದರೆ ದೊಡ್ಡ ಅವಾಂತರವಾಗುತ್ತದೆ. ಈಗಾಗಲೇ ಸೆನ್ಸಾರ್ ಮಂಡಳಿಗೆ ಇಬ್ಬರು ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಇನ್ನೂ ಯಾರೂ ಬಂದಿಲ್ಲ’ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸಮಸ್ಯೆ ಹೇಗಾಗುತ್ತದೆ?
‘ಸದ್ಯ ಡಾಕ್ಯುಮೆಂಟ್ ಎಲ್ಲ ಸರಿ ಇರುವ 12 ಸಿನಿಮಾಗಳಿಗೆ ಸರ್ಟಿಫಿಕೆಟ್ ನೀಡಬೇಕಿದೆ. ಡಾಕ್ಯುಮೆಂಟೇಶನ್ ಸಮಸ್ಯೆ ಇರುವ ಸಿನಿಮಾಗಳು ಹಲವಾರು ಇರಬಹುದು. ಕೆಲವೊಬ್ಬರು ಸಿನಿಮಾವಿನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ ಸರ್ಟಿಫಿಕೇಟ್‌ಗೆ ಅರ್ಜಿ ಹಾಕಿರುತ್ತಾರೆ. ಬೇಕಾದ ಯಾವ ಡಾಕ್ಯುಮೆಂಟ್‌ಗಳೂ ಇರುವುದಿಲ್ಲ. ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚಿಸಿದರೆ ಸುಮ್ಮನಿದ್ದು ಬಿಡುತ್ತಾರೆ. ಕೊನೆಯಲ್ಲಿ ಹಾವಳಿ ಎಬ್ಬಿಸುತ್ತಾರೆ. ಕೆಲವರಿಗೆ ಕಟ್, ಮ್ಯೂಟ್ ಇತ್ಯಾದಿ ಮಾಡಿಕೊಂಡು ಬರಲು ಸೂಚನೆ ನೀಡಿರುತ್ತೇವೆ. ಅವರೂ ಕೊನೇ ಹಂತದವರೆಗೆ ಸುಮ್ಮನಿದ್ದು, ವರ್ಷಾಂತ್ಯದಲ್ಲಿ ಬಂದು ಬೇಗ ಸರ್ಟಿಫಿಕೆಟ್ ನೀಡುವಂತೆ ದುಂಬಾಲು ಬೀಳುತ್ತಾರೆ. ಇದರ ಜೊತೆಗೆ ಕೊನೆಯ ಹಂತದಲ್ಲಿ ಸಿನಿಮಾ ಕೆಲಸ ಮುಗಿಸಿ ಸರ್ಟಿಫಿಕೆಟ್ ನೀಡುವಂತೆ ಒತ್ತಡ ಹಾಕುವವರೂ ಇದ್ದಾರೆ’ ಎಂದಿದ್ದಾರೆ ಅಧಿಕಾರಿ ಯಶವಂತ್ ಶೆಣೈ.
ವರ್ಷಾಂತ್ಯಕ್ಕೆ ಮುಗಿಬೀಳಲು ಏನು ಕಾರಣ?
ಸಿನಿಮೋತ್ಸವಗಳಿಗೆ, ಪ್ರಶಸ್ತಿಗಳಿಗೆ ಸಿನಿಮಾ ಕಳಿಸುವ ಉದ್ದೇಶದಿಂದ ಈ ರೀತಿಯ ಒತ್ತಡ ಸೃಷ್ಟಿಸುತ್ತಾರೆ. 2025ನೇ ವರ್ಷದಲ್ಲಿ ಸರ್ಟಿಫೈಡ್ ಆದ ಸಿನಿಮಾ ಎಂಬ ದಾಖಲೆ ಸಿಕ್ಕರೆ ಅವರು ಮುಂದಿನ ವರ್ಷದ ಎಲ್ಲ ಸಿನಿಮೋತ್ಸವಗಳಿಗೆ, ಪ್ರಶಸ್ತಿಗಳಿಗೆ ತಮ್ಮ ಚಿತ್ರವನ್ನು ಕಳುಹಿಸಬಹುದು. ಒಮ್ಮೆ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೆಟ್ ಸಿಕ್ಕರೆ ಮುಂದಿನ ವರ್ಷದ ಆರಂಭದಲ್ಲಿ ತಮ್ಮ ಅನುಕೂಲದ ದಿನಕ್ಕೆ ರಿಲೀಸ್ ಅನ್ನು ಮಾಡಬಹುದು.