ಸಿನಿವಾರ್ತೆ
ದರ್ಶನ್‌ರಂಥಾ ಸ್ಟಾರ್ ನಟರ ಚಿತ್ರಗಳು ಬರದೇ ಹೋದರೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿರುವಾಗಲೇ ನಟಿ ರಮ್ಯಾ ‘ಸಿನಿಮಾ ಗೆಲ್ಲಲು ಸ್ಟಾರ್‌ಗಳು ಬೇಕಿಲ್ಲ’ ಎಂಬ ದಿಟ್ಟತನದ ನುಡಿಗಳನ್ನಾಡಿದ್ದಾರೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ರಮ್ಯಾ, ‘ ಸು ಫ್ರಂ ಸೋ ಸಿನಿಮಾದಿಂದ ನಾವು ಪಾಠ ಕಲಿಯಬೇಕಿದೆ. ಸಿನಿಮಾವೊಂದು ಗೆಲ್ಲಲು ದೊಡ್ಡ ಹೀರೋ, ದೊಡ್ಡ ಬಜೆಟ್ ಏನೂ ಬೇಕಾಗಿಲ್ಲ. ಕಥೆ ಚೆನ್ನಾಗಿದ್ರೆ ಫ್ಯಾಮಿಲಿ ಆಡಿಯನ್ಸ್ ಬಂದು ನೋಡಿದರೆ ಸಿನಿಮಾ ಹಿಟ್ ಆಗುತ್ತದೆ ಎನ್ನುವುದನ್ನು ಈ ಚಿತ್ರ ನಮಗೆ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ.
‘ಸು ಫ್ರಂ ಸೋ ಚಿತ್ರದ ನಿರ್ದೇಶಕ ಜೆ ಪಿ ತುಮಿನಾಡು ನಮ್ಮ ಬ್ಯಾನರ್ ಸಿನಿಮಾದಲ್ಲೂ ನಟಿಸಿದ್ದರು. ರಾಜ್ ಬಿ ಶೆಟ್ಟಿ ಆ ಸಿನಿಮಾ ನಿರ್ದೇಶನ ಮಾಡಿದ್ದರು. ಇವರಿಬ್ಬರೂ ಇದೀಗ ಹೊಸ ಕಲಾವಿದರು, ತಂತ್ರಜ್ಞರ ಜೊತೆಗೆ ಸಿನಿಮಾ ಮಾಡಿ ಯಶಸ್ವಿ ಆಗಿರೋದು ಖುಷಿ, ಜೊತೆಗೆ ಸ್ಯಾಂಡಲ್‌ವುಡ್‌ಗೆ ಒಂದು ಮಾದರಿಯನ್ನೂ ಸೃಷ್ಟಿಸಿದೆ’ ಎಂದಿದ್ದಾರೆ.
ಈ ವೇಳೆ ಡೆವಿಲ್ ಸಿನಿಮಾದ ನಿರ್ಮಾಪಕರಿಗೆ ಆಗುತ್ತಿರುವ ನಷ್ಟದ ಬಗ್ಗೆ ಪ್ರಶ್ನಿಸಿದಾಗ, ‘ಸಿನಿಮಾ ಒಂದೇ ಅಲ್ಲ, ನಾವು ಸಮಾಜದ ಬಗ್ಗೆಯೂ ಯೋಚನೆ ಮಾಡಬೇಕು. ಡೆವಿಲ್ ಸಿನಿಮಾ ವಿಚಾರದಲ್ಲಿ ಸನ್ನಿವೇಶವೇ ಹಾಕಿದೆ. ಸುಪ್ರೀಂ ಕೋರ್ಟ್ ನ್ಯಾಯದ ಪರ ತೀರ್ಪು ನೀಡಲೇ ಬೇಕು’ ಎಂದಿದ್ದಾರೆ.
‘ಅಸಭ್ಯ ಕಾಮೆಂಟ್ ಮಾಡಿರುವ ಪ್ರಕರಣದಲ್ಲಿ ಈಗಾಗಲೇ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯದಲ್ಲೇ ಇನ್ನೊಂದಿಷ್ಟು ಜನರ ಬಂಧನವಾಗಲಿದೆ. ಎಷ್ಟೋ ಜನ ಫೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟು ಹೋಗಿದ್ದಾರೆ. ನಾನವರಿಗೆ ಹೇಳೋದು ನಿಮ್ಮ ಬದುಕನ್ನು ಹೀಗೆ ವ್ಯರ್ಥ ಮಾಡುವ ಬದಲು ಏನಾದ್ರೂ ಒಳ್ಳೆಯದನ್ನು ಮಾಡಿ. ಕೆಲಸ ಇಲ್ಲದೆ ಸುಮ್ಮನೆ ಕೂತರೆ ತಲೆಯಲ್ಲಿ ಕೆಟ್ಟ ವಿಚಾರಗಳು ಬರುತ್ತವೆ. ಕೆಲಸದಲ್ಲಿ ಬ್ಯುಸಿ ಆಗಿರಿ. ಜೀವನದಲ್ಲಿ ಮುಂದೆ ಬನ್ನಿ’ ಎಂಬ ಹಿತವಚನವನ್ನೂ ರಮ್ಯಾ ಹೇಳಿದ್ದಾರೆ.