ನವದೆಹಲಿ : ಅಫ್ಘಾನಿಸ್ತಾನದಲ್ಲಿ ‘ಮಹಿಳಾ ವಿರೋಧಿ’ ಎಂಬ ಹಣೆಪಟ್ಟಿ ಹೊತ್ತಿರುವ ತಾಲಿಬಾನ್ ಸರ್ಕಾರ ದಿಲ್ಲಿಯಲ್ಲಿ ಕೂಡ ಅಂಥದ್ದೇ ಧೋರಣೆ ತಾಳಿರುವುದು ವಿವಾದಕ್ಕೆ ಕಾರಣವಾಗಿದೆ. ದಿಲ್ಲಿಯ ಆಫ್ಘನ್ ರಾಯಭಾರ ಕಚೇರಿಯಲ್ಲಿ ನಡೆದ ಅಲ್ಲಿನ ಸಚಿವ ಅಮೀರ್ ಖಾನ್ ಮುತ್ತಖಿಯ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ್ದು, ಭಾರಿ ವಿವಾದ ಹುಟ್ಟುಹಾಕಿದೆ.
ಪತ್ರಕರ್ತರು, ಮಹಿಳಾ ರಾಜಕಾರಣಿಗಳು ಹಾಗೂ ವಿಪಕ್ಷ ನಾಯಕರು ಘಟನೆಯನ್ನು ಖಂಡಿಸಿದ್ದಾರೆ ಹಾಗೂ ಭಾರತ ಸರ್ಕಾರ ಈ ಬಗ್ಗೆ ಏಕೆ ಮೌನ ತಾಳಿದೆ ಎಂದಿದ್ದಾರೆ. ಆದರೆ ಇದರಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ವಿವಾದದ ಬಳಿತ ತಾಲಿಬಾನ್ ವಕ್ತಾರ ಪ್ರತಿಕ್ರಿಯಿಸಿ, ‘ನಿರ್ಬಂಧ ನಮ್ಮ ನೀತಿ ಅಲ್ಲ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಇದು ಉದ್ದೇಶಪೂಕರ್ವಕವಲ್ಲ’ ಎಂದು ಹೇಳಿದ್ದು, ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದ್ದಾನೆ.
ಆಗಿದ್ದೇನು?:
ಭಾರತ ಪ್ರವಾಸದಲ್ಲಿರುವ ಆಫ್ಘನ್ ಸಚಿವ ಅಮೀರ್ ಖಾನ್ ಮುತ್ತಖಿ, ಶುಕ್ರವಾರ ಆಫ್ಘನ್ ದೂತಾವಾಸದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಮಹಿಳಾ ಪತ್ರಕರ್ತರಿಗೆ ಅವಕಾಶ ನಿರಾಕರಿಸಲಾಯಿತು. ಇದನ್ನು ಪ್ರಶ್ನಿಸಿದ ಪುರುಷ ಪತ್ರಕರ್ತರ ಮೇಲೆ ಭದ್ರತಾ ಸಿಬ್ಬಂದಿ ಹರಿಹಾಯ್ದರು ಎನ್ನಲಾಗಿದೆ. ಈ ಪ್ರಸಂಗವನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಅನೇಕರು ಖಂಡಿಸಿದ್ದಾರೆ.
ಆದರೆ ಭಾರತ ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಿದ್ದು, ‘ಅಂತಾರಾಷ್ಟ್ರೀಯ ನಿಯಮದ ಪ್ರಕಾರ ವಿದೇಶಗಳ ರಾಯಭಾರ ಕಚೇರಿಯ ಪ್ರದೇಶಗಳು ಭಾರತ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಮುತ್ತಖಿ ತಮ್ಮ ಪತ್ರಿಕಾಗೋಷ್ಠಿಗೆ ಮಹಿಳೆಯರಿಗೆ ಅವಕಾಶ ನೀಡಲಿಲ್ಲ ಎಂಬ ವಿಚಾರದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ’ ಎಂದು ಹೇಳಿದೆ.
ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ- ತಾಲಿಬಾನ್:
ಇನ್ನು ತಾಲಿಬಾನ್ ವಕ್ತಾರ ಕೂಡ ಸ್ಪಷ್ಟನೆ ನೀಡಿ, ‘ನಾನೇ ಮಹಿಳಾ ಪತ್ರಕರ್ತರ ಜತೆ ಸಂವಾದ ನಡೆಸುವೆ. ಮುತ್ತಖಿ ಅವರೂ ಕಾಬೂಲ್‌ನಲ್ಲಿ ಮಹಿಳಾ ಪತ್ರಕರ್ತರಿಗೆ ಸಂದರ್ಶನ ನೀಡುತ್ತಾರೆ. ಹೀಗಿದ್ದಾಗ ಮಹಿಳಾ ಪತ್ರಕರ್ತರಿಗೆ ನಾವು ನಿರ್ಬಂಧ ಹೇರಿಲ್ಲ. ಏನೋ ‘ತಾಂತ್ರಿಕ ಸಮಸ್ಯೆ’ಯಿಂದ ಹೀಗಾಗಿರಬಹುದು. ಅದು ನಮ್ಮ ನೀತಿ ಅಲ್ಲ. ಇದು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ’ ಎಂದಿದ್ದಾನೆ.
ಮಹಿಳಾ ವಿರೋಧಿ ತಾಲಿಬಾನ್:
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮಹಿಳಾ ವಿರೋಧಿ ಎಂದೇ ಕುಖ್ಯಾತಿ ಪಡೆದಿದೆ. ಮಹಿಳೆಯರ ಉದ್ಯೋಗ, ಶಿಕ್ಷಣ, ಉಡುಪು ಧಾರಣೆ. ಹೊರಗಡೆ ಪುರುಷರ ಜತೆ ಸುತ್ತಾಟ, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಸಲೂನ್‌ಗೆ ತೆರಳುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು, ಸಿನಿಮಾಗಳಲ್ಲಿ ನಟಿಸುವುದು- ಹೀಗೆ ಅನೇಕ ವಿಚಾರಗಳಲ್ಲಿ ನಿರ್ಬಂಧ ಹೇರಿದೆ.
ಮಹಿಳಾ ಪತ್ರಕರ್ತರಿಗೆ ನಿಷೇಧ
ಶುಕ್ರವಾರ ದೆಹಲಿಯ ಆಫ್ಘನ್ ರಾಯಭಾರಿ ಕಚೇರಿಯಲ್ಲಿ ನಡೆದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮುತ್ತಖಿ ಸುದ್ದಿಗೋಷ್ಠಿ
ಇದಕ್ಕೆ ಆಗಮಿಸಿದ ಮಹಿಳಾ ಪತ್ರಕರ್ತರಿಗೆ ಒಳಗೆ ಪ್ರವೇಶ ನೀಡದೇ ತಡೆದ ಆರೋಪ. ಇದಕ್ಕೆ ಪತ್ರಕರ್ತರು, ವಿಪಕ್ಷಗಳ ಆಕ್ರೋಶ
ಭಾರೀ ವಿವಾದದ ಬಳಿಕ, ತಾಂತ್ರಿಕ ದೋಷದಿಂದ ಹೀಗಾಗಿದೆ. ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಆಫ್ಘನ್ ಸರ್ಕಾರದಿಂದ ಸ್ಪಷ್ಟನೆ