ನವದೆಹಲಿ : ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 24 ಮಕ್ಕಳನ್ನು ಬಲಿ ಪಡೆದ ವಿಷಪೂರಿತ ಕೋಲ್ಡ್ರಿಫ್ ಕೆಮ್ಮಿನೌಷಧ ದುರಂತಕ್ಕೆ, ಔಷಧ ತಯಾರಿಸಿದ ಕಾಂಚಿಪುರಂ ಮೂಲದ ಶ್ರೀಶನ್ ಕಂಪನಿ ಮತ್ತು ಕಾಲಕಾಲಕ್ಕೆ ಅದನ್ನು ತಪಾಸಣೆ ಮಾಡದ ತಮಿಳುನಾಡು ರಾಜ್ಯ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಗಳೆರಡೂ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಮೂಲಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ‘2011ರಲ್ಲಿ ಶ್ರೀಶನ್ ಕಂಪನಿಗೆ ಔಷಧ ತಯಾರಿ ಲೈಸೆನ್ಸ್ ನೀಡಲಾಗಿತ್ತು. ಆ ಬಳಿಕ ದಶಕದ ಕಾಲ ಅದು ಏನೇನು ತಯಾರಿಸುತ್ತಿದೆ ಎಂಬ ಯಾವ ತಪಾಸಣೆಯನ್ನು ರಾಜ್ಯದಲ್ಲಿ ಅಧಿಕಾರಿಗಳು ನಡೆಸಿಲ್ಲ. ಶ್ರೀಶನ್ ಕಂಪನಿಯಲ್ಲಿ ಔಷಧ ತಯಾರಿಕೆಯ ಮೂಲಸೌಕರ್ಯ ಮತ್ತು ಔಷಧ ತಯಾರಿಕೆಯಲ್ಲಿನ ಸುರಕ್ಷತಾ ಕ್ರಮಗಳು ದಶಕದ ಕಾಲ ಪರಿಶೀಲನೆಗೆ ಒಳಪಟ್ಟಿರಲಿಲ್ಲ’ ಎಂದಿವೆ.
‘ಸಿಡಿಎಸ್‌ಸಿಒ ಅಧಿಕಾರಿಗಳ ತಂಡ ಇತ್ತೀಚೆಗೆ ಶ್ರೀಶನ್ ಕಂಪನಿಗೆ ಭೇಟಿ ನೀಡಿದಾಗ ಅಲ್ಲಿ ಗುಣಮಟ್ಟದ ಉತ್ಪಾದನಾ ಮಾನದಂಡ ಪಾಲನೆ ಮಾಡದೇ ಇರುವುದು ಕಂಡುಬಂದಿದೆ. ಇದನ್ನೆಲ್ಲಾ ಗಮನಿಸಬೇಕಿದ್ದ ರಾಜ್ಯದ ಅಧಿಕಾರಿಗಳ ತಂಡ 10 ವರ್ಷ ಕಾಲ ಕಣ್ಣು ಮುಚ್ಚಿಕೊಂಡು ಕುಳಿತಿತ್ತು. ಇನ್ನೊಂದೆಡೆ ತಾನು ಉತ್ಪಾದಿಸುವ ಎಲ್ಲಾ ಔಷಧಗಳ ಮಾಹಿತಿಯನ್ನು ಶ್ರೀಶನ್ ಕಂಪನಿ ಸುಗಮ್ ಪೋರ್ಟಲ್‌ನಲ್ಲಿ ನಮೂದಿಸಬೇಕಿತ್ತಾದರೂ ಅದನ್ನು ಮಾಡಿಲ್ಲ. ಈ ನಿಯಮ ಪಾಲನೆ ಜಾರಿ ಖಚಿತಪಡಿಸಬೇಕಿದ್ದ ತಮಿಳುನಾಡಿನ ಅಧಿಕಾರಿಗಳು ಕೂಡಾ ಆ ಕರ್ತವ್ಯದಿಂದ ವಿಮುಖರಾಗಿದ್ದರು. ಸಾವಿನ ಪ್ರಕರಣ ಬೆಳಕಿಗೆ ಬಂದ ಬಳಿಕದ ತಪಾಸಣಾ ವರದಿಯನ್ನು ಕೂಡಾ ಸಿಡಿಎಸ್‌ಸಿಒ ಜತೆ ರಾಜ್ಯದ ಅಧಿಕಾರಿಗಳು ಹಂಚಿಕೊಂಡಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.