ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕದಲ್ಲಿ ಭಾರಿ ತೆರಿಗೆ ಹೇರುತ್ತಿದ್ದಾರೆ. ಇಂಥ ತೆರಿಗೆ ಶಾಕ್‌ನಿಂದ ಭಾರತದ ಉದ್ಯಮವನ್ನು ರಕ್ಷಿಸಲು ಹಲವು ಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

 ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನಿರಂತರವಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ತೆರಿಗೆ ದಾಳಿ ಮಾಡುತ್ತಿದ್ದಾರೆ. ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕದಲ್ಲಿ ಭಾರಿ ತೆರಿಗೆ ಹೇರುತ್ತಿದ್ದಾರೆ. ಇಂಥ ತೆರಿಗೆ ಶಾಕ್‌ನಿಂದ ಭಾರತದ ಉದ್ಯಮವನ್ನು ರಕ್ಷಿಸಲು ಹಲವು ಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ಅರೆವಾಹಕಗಳು (ಸೆಮಿಕಂಡಕ್ಟರ್‌), ಬಯೋಫಾರ್ಮಾ, ಜವಳಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಮತ್ತು ನಗರ ಎಕಾನಾಮಿಕ್‌ ಕ್ಲಸ್ಟರ್‌ವರೆಗೆ- ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಆರ್ಥಿಕತೆಯನ್ನು ಬಾಹ್ಯ ಆಘಾತಗಳಿಂದ ರಕ್ಷಿಸುವ ಸ್ಪಷ್ಟ ಉದ್ದೇಶ ಸಾರಿದ್ದಾರೆ.

ಬಯೋಫಾರ್ಮಾ ವಲಯಕ್ಕೆ ಉತ್ತೇಜನ:

ಈ ಬಜೆಟ್‌ನಲ್ಲಿ ಬಯೋಫಾರ್ಮಾ ಆರೋಗ್ಯ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ. ಕೋವಿಡ್‌ ಅವಧಿಯಲ್ಲಿ ಕಲಿತ ಪಾಠದಿಂದ ಆಭರತವು ಔಷಧ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗುವತ್ತ ಗಮನ ಹರಿಸಲು ಆರಂಭಿಸಿತು. ಇದೀಗ ಬಯೋಫಾರ್ಮಾ ಆರೋಗ್ಯ ಕಾರ್ಯಕ್ರಮದ ಮೂಲಕ ನಾವೀನ್ಯತೆ ಹಾಗೂ ತಂತ್ರಜ್ಞಾನದತ್ತ ಗಮನ ಹರಿಸಲಾಗುತ್ತದೆ. 2025-26ರಲ್ಲಿ ಔಷಧ ಕ್ಷೇತ್ರದ ಸಂಶೋಧನೆಗೆ ಆದ್ಯತೆ ನೀಡಲಾಗಿತ್ತು. ಈ ಬಾರಿ ನಾವೀನ್ಯತೆ ಹಾಗೂ ತಂತ್ರಜ್ಞಾನದ ಮೂಲಕ ಹೆಚ್ಚು ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಔಷಧ ಕಂಪನಿಗಳಿಗೆ ಪ್ರೋತ್ಸಾಹಕಗಳು ದೊರಕಲಿವೆ.

ಸೆಮಿಕಂಡಕ್ಟರ್‌ನಲ್ಲಿ ಆತ್ಮನಿರ್ಭರತೆ

ಸೆಮಿಕಂಡಕ್ಟರ್‌ (ಅರೆವಾಹಕ) ಇಂದು ಮೊಬೈಲ್, ಟೀವಿ, ಫ್ರಿಡ್ಜ್‌, ವಾಷಿಂಗ್‌ ಮಷಿನ್‌. ಕಾರು ಸೇರಿ ವಿವಿಧ ಆವಹನಗಳಿಗೆ ಅತೀ ಅವಶ್ಯಕ. ಆದರೆ ಇವುಗಳ ಉತ್ಪಾದನೆಗೆ ಬೇಕಾದ ಅಪರೂಪದ ಖನಿಜಗಳು ಚೀನಾ ಸೇರಿ ಕೆಲವು ದೇಶಗಳಲ್ಲಿ ಮಾತ್ರ ಲಭ್ಯ ಇವೆ. ಅಮೆರಿಕವು ಈ ಕುರಿತು ಚೀನಾದೊಂದಿಗೆ ಕಾದಾಟಕ್ಕಿಳಿದಿದೆ. ಹೀಗಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಭಾರತವು ‘ಅಪರೂಪದ ಶಾಶ್ವತ ಖನಿಜ ಯೋಜನೆ ಆರಂಭಿಸಿತ್ತು, ಬಜೆಟ್‌ನಲ್ಲಿ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಖನಿಜ-ಸಮೃದ್ಧ ರಾಜ್ಯಗಳಲ್ಲಿ ಅಪರೂಪದ ಖನಿಜಗಳ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ಅಮೆರಿಕ-ಚೀನಾದಂಥ ದೇಶಗಳ ಮೇಲೆ ಅವಲಂಬನೆ ಕಡಿಮೆ ಮಾಡಲಾಗಉ್ತದೆ. ಈ ಕ್ರಮವು ಭಾರತದ ವಿದ್ಯುತ್‌, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಮಹತ್ವಾಕಾಂಕ್ಷೆಗಳಿಗೆ ಸ್ವದೇಶಿ ಪೂರೈಕೆಯನ್ನೇ ಆಧಾರ ಆಗಿರಿಸಿಕೊಳ್ಳಲಾಗುತ್ತದೆ.

ಎಂಎಸ್‌ಎಂಇಗಳಿಗೆ ಪ್ರೋತ್ಸಾಹ:

ಸಣ್ಣ-ಮಧ್ಯಮ ಕೈಗಾರಿಕೆಗಳು ಭಾರತದ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾಗಿವೆ. 2025-26ರಂತೆ ಈ ಬಾರಿಯೂ ಉತ್ಪಾದನತೆ ಆಧರಿತ ವಿಶೇಷ ಪ್ರೋತ್ಸಾಹಕ (ಪಿಎಲ್ಐ) ಮುಂದುವರಿಸಲು ನಿರ್ಧರಿಸಲಾಗಿದೆ. 7 ದೇಶಗಳ ಕೂಟವಾದ ಯುರೋಪ್‌ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಅನುಕೂಲವಾಗಲಿದ್ದು, ಶೂನ್ಯ ಆಮದು ಸುಂಕದೊಂದಿಗೆ ಯುರೋಪ್‌ಗೆ ರಫ್ತು ಮಾಡಬಹುದಾಗಿದೆ. ಹೀಗಾಗಿ ಅಮೆರಿಕದ ಮೇಲಿನ ಅವಲಂಬನೆ ತಪ್ಪಿಸಬಹುದಾಗಿದೆ.

ನಗರಗಳ ಅಭಿವೃದ್ಧಿ, ಉದ್ಯಮಕ್ಕೆ ಆದ್ಯತೆ

ನಗರ ಮೂಲಸೌಕರ್ಯ ಮತ್ತು ನಗರಗಳ ಬೆಳವಣಿಗೆಯನ್ನು ಸ್ಥಿರಗೊಳಿಸುವುದರ ಜೊತೆಗೆ ಹಳೆಯ ಉದ್ಯಮಗಳನ್ನು ಉಳಿಸಿಕೊಂಡು, ಹೊಸ ಉದ್ಯಮ ಬೆಳವಣಿಗೆಗೆ ಬಜೆಟ್‌ ಗಮನ ಕೇಂದ್ರೀಕರಿಸಿದೆ. ಜವಳಿ ವಲಯವು ರಾಷ್ಟ್ರೀಯ ಫೈಬರ್ ಯೋಜನೆ, ಜವಳಿ ವಿಸ್ತರಣೆ, ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರ ಯೋಜನೆಗಳನ್ನು ಪಡೆಯಲಿದೆ. ಮೆಗಾ ಜವಳಿ ಪಾರ್ಕ್‌ಗಳ ಘೋಷಣೆಯು ಹಿಂದಿನ ಯೋಜನೆಗಳನ್ನು ಕೈಬಿಡದೇ ನಿರಂತರತೆಯನ್ನು ಸೂಚಿಸುತ್ತದೆ. ಇದೇ ವೇಳೆ, ಆಧುನೀಕರಣ, ಮೂಲಸೌಕರ್ಯ ಪರೀಕ್ಷೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡುತ್ತದೆ.

ವಿಶೇಷ ಆರ್ಥಿಕ ವಲಯಗಳಿಗೆ ರಿಯಾಯಿತಿ

ವಿಶೇಷ ಆರ್ಥಿಕ ವಲಯಗಳಲ್ಲಿ (ಎಸ್‌ಇಝಡ್‌) ಉದ್ಯೋಗ ನಷ್ಟವನ್ನು ತಡೆಗಟ್ಟುವ ಗುರಿಯನ್ನು ಹೊಂದಲಾಗಿದ್ದು, ಅಲ್ಲಿನ ಅರ್ಹ ಉತ್ಪಾದನಾ ಘಟಕಗಳಿಂದ ರಿಯಾಯಿತಿ ಸುಂಕ ಪ್ರಕಟಿಸಲಾಗಿದೆ. ಒಂದು ಬಾರಿ ಅನ್ವಯ ಆಗುವಂತೆ ಈ ಕ್ರಮ ಜಾರಿಗೊಳಿಸಲಾಗುತ್ತದೆ. ಈ ಪ್ರಕಾರ ಎಸ್‌ಇಝಡ್‌ಗಳಲ್ಲಿನ ಅರ್ಹ ಉತ್ಪಾದನಾ ಘಟಕಗಳಿಂದ ದೇಶೀ ಸುಂಕ ಪ್ರವೇಶಕ್ಕೆ (ಡಿಟಿಎ) ರಿಯಾಯಿತಿ ನೀಡಲಾಗುವುದು. ಜೂನ್ 2025 ರ ಹೊತ್ತಿಗೆ, ಭಾರತವು 370 ಎಸ್‌ಇಝಡ್ ಹೊಂದಿದೆ. ಅನೇಕವು ಅಮೆರಿಕ ಮಾರುಕಟ್ಟೆ ಮೇಲೆ ಅವಲಂಬಿತವಾಗಿದ್ದು, ಟ್ರಂಪ್‌ ಸುಂಕ ಹೊಡೆತದಿಂದ ತಪ್ಪಿಸಿಕೊಳ್ಳಲು ರಿಯಾಯಿತಿ ಪ್ರಕಟಿಸಲಾಗಿದೆ.

ಜವಳಿ ಕ್ಲಸ್ಟರ್ಸ್‌ ಆಧುನೀಕರಣ

ಜವಳಿ ವಲಯವನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಸಮಗ್ರ ಕಾರ್ಯಕ್ರಮವನ್ನು ಘೋಷಿಸಿದ್ದಾರೆ, ಇದು ಪೂರೈಕೆಯ ಮೇಲೆ ಕೇಂದ್ರೀಕರಿಸುತ್ತದೆ. ರೇಷ್ಮೆ, ಉಣ್ಣೆ ಮತ್ತು ಸೆಣಬು, ಮಾನವ ನಿರ್ಮಿತ ನಾರುಗಳು ಮತ್ತು ಹೊಸ ಯುಗದ ನಾರುಗಳಂತಹ ನೈಸರ್ಗಿಕ ನಾರುಗಳಲ್ಲಿ ಸ್ವಾವಲಂಬನೆಗಾಗಿ ರಾಷ್ಟ್ರೀಯ ನಾರು ಯೋಜನೆ ಘೋಷಿಸಲಾಗಿದೆ. ಯಂತ್ರೋಪಕರಣಗಳಿಗೆ ಬಂಡವಾಳ ಹೂಡಲು ಸರ್ಕಾರ ಬೆಂಬಲ ನೀಡಲಿದೆ. ಜತೆಗೆ ಸಾಂಪ್ರದಾಯಿಕ ಕ್ಲಸ್ಟರ್‌ಗಳನ್ನು ಆಧುನೀಕರಿಸಲು ನೆರವು ನೀಡಲಿದೆ.

ಭಾರತದ ಜವಳಿ ಮತ್ತು ಉಡುಪು ಉದ್ಯಮವು ಒಟ್ಟಾರೆ ಆರ್ಥಿಕತೆಗೆ ಗಮನಾರ್ಹವಾಗಿ ಮುಖ್ಯವಾಗಿದೆ. ಇದು ಕೈಗಾರಿಕಾ ಉತ್ಪಾದನೆಗೆ 13%, ರಫ್ತಿಗೆ 12% ಮತ್ತು ಜಿಡಿಪಿಗೆ ಸರಿಸುಮಾರು 2% ಕೊಡುಗೆ ನೀಡುತ್ತದೆ.

ಚೀನಾಗೆ ಸಡ್ಡು ಹೊಡೆಯಲು ಕಂಟೇನರ್‌ ಉತ್ಪಾದನೆ 

ವ್ಯಾಪಾರಕ್ಕೆ ಅಗತ್ಯವಾದ ಕಂಟೇನರ್‌ ಕೊರತೆ ಹಾಗೂ ಅವುಗಳ ಪೂರೈಕೆಗಾಗಿ ಭಾರತ ಈಗ ಚೀನಾವನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ 10,000 ಕೋಟಿ ರು.ಗಳ ಕಂಟೇನರ್ ಉತ್ಪಾದನಾ ಯೋಜನೆಯನ್ನು ಘೋಷಿಸಿದ್ದಾರೆ. ಈ ಹಂಚಿಕೆಯು ಐದು ವರ್ಷಗಳ ಅವಧಿಯನ್ನು ಒಳಗೊಂಡಿದೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಕಂಟೇನರ್ ಉತ್ಪಾದನಾ ಪರಿಸರ ವ್ಯವಸ್ಥೆ ರಚಿಸುವ ಗುರಿಯನ್ನು ಹೊಂದಿದೆ.