ಸಾರಾಂಶ
ನವದೆಹಲಿ: ಭಾರತ-ಅಮೆರಿಕ ಸಂಬಂಧವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಭಾರಿ ಆಮದು ತೆರಿಗೆ ಕಾರಣ ಹಳಸಿರುವ ನಡುವೆಯೇ, ಭಾರತದ ನಿಯೋಜಿತ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಈ ವೇಳೆ, ‘ಭಾರತದ ಜತೆಗಿನ ಸಂಬಂಧ ಸುಧಾರಣೆಗೆ ಅಮೆರಿಕ ಆದ್ಯತೆ ನೀಡುತ್ತದೆ’ ಎಂದಿರುವ ಗೋರ್, ಪ್ರಧಾನಿ ಮೋದಿಗೆ ‘ಪ್ರೈಮ್ ಮಿನಿಸ್ಟರ್ ಯು ಆರ್ ಗ್ರೇಟ್’ ಎಂದು ಟ್ರಂಪ್ ಬರೆದು ಹಸ್ತಾಂಕ್ಷರ ಮಾಡಿರುವ ಇಬ್ಬರೂ ನಾಯಕರ ಫೋಟೋ ಕಾಣಿಕೆ ನೀಡಿದ್ದಾರೆ.
ಇದೇ ವೇಳೆ ಮೋದಿ ಕೂಡ ಪ್ರತಿಕ್ರಿಯಿಸಿ, ‘ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿ ಸರ್ಗಿಯೊ ಗೋರ್ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಅವರ ಅಧಿಕಾರಾವಧಿಯು ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮೋದಿ ಭೇಟಿ ಬಳಿಕ ಗೋರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಟ್ರಂಪ್ ಅವರು ಮೋದಿಯವರನ್ನು ಉತ್ತಮ ಸ್ನೇಹಿತ ಎಂದು ಪರಿಗಣಿಸುತ್ತಾರೆ. ನಾನು ದಿಲ್ಲಿಗೆ ಹೊರಡುವ ಮುನ್ನ, ಇಬ್ಬರೂ ನಾಯಕರು ಫೋನ್‌ನಲ್ಲಿ ಮಾತನಾಡಿದರು. ಇದೇ ಬಾಂಧವ್ಯ ಮುಂಬರುವ ದಿನಗಳಲ್ಲಿ ಮುಂದುವರಿಯುವ ವಿಶ್ವಾಸವಿದೆ. ಭಾರತದಲ್ಲಿ ಟ್ರಂಪ್ ಅವರ ರಾಯಭಾರಿಯಾಗಿ ಸೇವೆ ಸಲ್ಲಿಸುವುದು ಗೌರವ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬೆಳೆಸಲು ಮತ್ತು ಗಾಢವಾಗಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಮೋದಿ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋರ್, ‘ಮೋದಿ ಜತೆ ಅದ್ಭುತ ಭೇಟಿ ನಡೆಯಿತು. ರಕ್ಷಣೆ, ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ದ್ವಿಪಕ್ಷೀಯ ವಿಷಯಗಳು ಮತ್ತು ಅಮೂಲ್ಯ ಖನಿಜಗಳ ಬಗ್ಗೆಯೂ ಚರ್ಚಿಸಿದೆವು’ ಎಂದರು.
- ದೂತನ ಕೈಯಲ್ಲಿ ಮೋದಿ ಹೊಳುವ ಬರಹದ ಫೋಟೋ ಕಳಿಸಿದ ಟ್ರಂಪ್
- ಹಳಸಿದ ಸಂಬಂಧಕ್ಕೆ ತೇಪೆ ಯತ್ನ । ಬಾಂಧವ್ಯಕ್ಕೆ ಬಲ: ಮೋದಿ ವಿಶ್ವಾಸ
- ಸಂಬಂಧ ಸುಧಾರಣೆಗೆ ಆದ್ಯತೆ: ಅಮೆರಿಕ ನಿಯೋಜಿತ ರಾಯಭಾರಿ ಗೋರ್
- ಗೋರ್‌ರಿಂದ ಭಾರತ-ಅಮೆರಿಕ ಬಾಂಧವ್ಯಕ್ಕೆ ಬಲ: ಮೋದಿ ವಿಶ್ವಾಸ