ಜಿಎಸ್‌ಟಿ ಸುಧಾರಣೆಯಿಂದ ಪ್ರತಿ ವರ್ಗಕ್ಕೂ ಪ್ರಯೋಜನ: ಮೋದಿ

| Published : Sep 23 2025, 01:03 AM IST

ಜಿಎಸ್‌ಟಿ ಸುಧಾರಣೆಯಿಂದ ಪ್ರತಿ ವರ್ಗಕ್ಕೂ ಪ್ರಯೋಜನ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

‘ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಉತ್ತೇಜಿಸಲಿದೆ ಮತ್ತು ಸಮಾಜದ ಪ್ರತಿ ವರ್ಗಕ್ಕೂ ನೇರವಾಗಿ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

-ಸ್ವದೇಶಿ ಉತ್ಪನ್ನಗಳ ಖರೀದಿ, ಮಾರಾಟಕ್ಕೆ ಪ್ರಧಾನಿ ಕರೆ-ಇನ್ನು ‘ಜಿಎಸ್‌ಟಿ ಉಳಿತಾಯ ಉತ್ಸವ’ ಆರಂಭ

- ಜನರಿಗೆ ಬರೆದ ಬಹಿರಂಗ ಪತ್ರದಲ್ಲಿ ಪ್ರಧಾನಿ ಸಂತಸ

ಪಿಟಿಐ ನವದೆಹಲಿ

‘ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಉತ್ತೇಜಿಸಲಿದೆ ಮತ್ತು ಸಮಾಜದ ಪ್ರತಿ ವರ್ಗಕ್ಕೂ ನೇರವಾಗಿ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.ಸೋಮವಾರ ಎಕ್ಸ್‌ ಖಾತೆಯ ಮೂಲಕ ದೇಶವಾಸಿಗಳಿಗೆ ಬಹಿರಂಗ ಪತ್ರ ಬರೆದಿರುವ ಅವರು, ಹೊಸ ಜಿಎಸ್‌ಟಿ ನೀತಿಯ ಲಾಭಗಳನ್ನು ವಿವರಿಸಿದ್ದಾರೆ. ‘ಸೆ.22ರಿಂದ, ಮುಂಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಅಸ್ತಿತ್ವಕ್ಕೆ ಬಂದಿವೆ. ಇದು ಉಳಿತಾಯ ಉತ್ಸವದ ಆರಂಭವನ್ನು ಸೂಚಿಸುತ್ತದೆ. ಜಿಎಸ್‌ಟಿ ಸುಧಾರಣೆ ಉಳಿತಾಯವನ್ನು ಹೆಚ್ಚಿಸುತ್ತದೆ. ರೈತರು, ಮಹಿಳೆಯರು, ಯುವಕರು, ಬಡವರು, ಮಧ್ಯಮ ವರ್ಗ ಅಥವಾ ವ್ಯಾಪಾರಿಗಳು- ಹೀಗೆ ಸಮಾಜದ ಪ್ರತಿಯೊಂದು ವರ್ಗಕ್ಕೂ ನೇರವಾಗಿ ಪ್ರಯೋಜನ ನೀಡುತ್ತದೆ. ಹೆಚ್ಚಿನ ಬೆಳವಣಿಗೆ ಮತ್ತು ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಆಹಾರ, ಔಷಧಿ, ಸೋಪ್, ಟೂತ್‌ಪೇಸ್ಟ್, ವಿಮೆ ಮತ್ತು ಇನ್ನೂ ಅನೇಕ ವಸ್ತುಗಳು ಈಗ ತೆರಿಗೆಮುಕ್ತವಾಗಿವೆ ಅಥವಾ ಶೇ.5ರ ತೆರಿಗೆ ಸ್ತರಕ್ಕೆ ಇಳಿದಿವೆ. ಈ ಹಿಂದೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸರಕುಗಳು ಈಗ ಬಹುತೇಕ ಶೇ.5ಕ್ಕೆ ಬದಲಾಗಿವೆ. ವ್ಯಾಪಾರಿಗಳು ಜಿಎಸ್‌ಟಿ ಸುಧಾರಣೆಗಳ ಮೊದಲು ಮತ್ತು ನಂತರದ ತೆರಿಗೆಗಳನ್ನು ಸೂಚಿಸುವ ಫಲಕ ಹಾಕುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ’ ಎಂದಿದ್ದಾರೆ. ‘2047ರ ವೇಳೆಗೆ ವಿಕಸಿತ ಭಾರತದ ಸಾಮೂಹಿಕ ಗುರಿಯನ್ನು ಸಾಧಿಸಲು ಸ್ವಾವಲಂಬನೆಯ ಹಾದಿಯಲ್ಲಿ ನಡೆಯುವುದು ಅತ್ಯಗತ್ಯ. ನಾವು ಖರೀದಿಸುವುದು ಸ್ವದೇಶಿ, ನಾವು ಮಾರಾಟ ಮಾಡುವುದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳೋಣ. ಜಿಎಸ್‌ಟಿ ಉಳಿತಾಯ ಉತ್ಸವವನ್ನು ಆಚರಿಸೋಣ’ ಎಂದು ಕರೆ ನೀಡಿದ್ದಾರೆ.