ಸಾರಾಂಶ
ಜೀವನಮಟ್ಟ ಸುಧಾರಿಸಲಿದ್ದು, ಶೇ.99 ನಿತ್ಯೋಪಯೋಗಿ ವಸ್ತುಗಳು ಅಗ್ಗವಾಗುವ ನಿರೀಕ್ಷೆಯಿದೆ.
ಬಳ್ಳಾರಿ: ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳನ್ನು ತಂದ ಕೇಂದ್ರದ ಬಿಜೆಪಿ ಸರ್ಕಾರದ ನಿಲುವು ಸ್ವಾಗತಿಸಿ ನೂರಾರು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಸಿದರು.
ನಗರದ ಬೆಂಗಳೂರು ರಸ್ತೆಯ ಬ್ರೂಸ್‌ಪೇಟೆ ವೃತ್ತದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೊಕ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ನಗರ ಘಟಕದ ಅಧ್ಯಕ್ಷ ಜಿ.ವೆಂಕಟರಮಣ, ಪ್ರಮುಖ ಪದಾಧಿಕಾರಿಗಳು, ನಗರ ಪಾಲಿಕೆಯ ಸದಸ್ಯರು ಭಾಗವಹಿಸಿ, ಕೇಂದ್ರ ಸರ್ಕಾರದ ಜನಪರ ಧೋರಣೆಗಳನ್ನು ಸ್ಮರಿಸಿದರು.ಐತಿಹಾಸಿಕ ಜಿಎಸ್‌ಟಿ ಸುಧಾರಣೆಗಳಿಂದ ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನಮಟ್ಟ ಸುಧಾರಿಸಲಿದ್ದು, ಶೇ.99 ನಿತ್ಯೋಪಯೋಗಿ ವಸ್ತುಗಳು ಅಗ್ಗವಾಗುವ ನಿರೀಕ್ಷೆಯಿದೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ನವರಾತ್ರಿ ಉಡುಗೊರೆಯಾಗಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ಅಸ್ವಿತ್ವಕ್ಕೆ ಬಂದ ಬಳಿಕ ಹತ್ತಾರು ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದೀಗ ಜಿಎಸ್ಟಿ ಸುಧಾರಣೆಯಿಂದ ಬಡಜನರಿಗೆ ಮತ್ತಷ್ಟೂ ಅನುಕೂಲವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲೆ ಹಾಗೂ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಮತ್ತು ನೂರಾರು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಕೇಂದ್ರ ಸರ್ಕಾರ ಪರ ಘೋಷಣೆಗಳನ್ನು ಕೂಗಿದರು.
ಜಿಎಸ್‌ಟಿ ಸುಧಾರಣೆಗಳನ್ನು ತಂದ ಕೇಂದ್ರ ಸರ್ಕಾರದ ನಿಲುವು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ಬಳ್ಳಾರಿಯಲ್ಲಿ ಸೋಮವಾರ ಸಂಭ್ರಮಾಚರಿಸಿದರು.