ಬೆಂಗಳೂರು : ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಫ್ರಾನ್ಸ್‌ನ ಏರ್‌ಬಸ್ ಕಂಪನಿ ಸಹಯೋಗದಲ್ಲಿ ನಿರ್ಮಾಣವಾಗಿರುವ ದೇಶದ ಮೊಟ್ಟಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ‘ಅಂತಿಮ ಜೋಡಣಾ ಘಟಕ’ವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರು ವರ್ಚ್ಯುಯಲ್ ಆಗಿ ಉದ್ಘಾಟಿಸಿದರು.
ಮಂಗಳವಾರ ನಡೆದ ಸಮಾರಂಭದಲ್ಲಿ ಉತ್ಪಾದನಾ ಘಟಕದಲ್ಲಿ ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವೌಟ್ರಿನ್ ಅವರೊಂದಿಗೆ ಉಪಸ್ಥಿತರಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ‘ಭಾರತ ಕೇವಲ ರಕ್ಷಣಾ ಸಾಧನಗಳ ಗ್ರಾಹಕ ರಾಷ್ಟ್ರವಾಗಿ ಉಳಿಯದೆ, ಉತ್ಪಾದನಾ ಹಬ್ ಆಗಿ ಹೊರಹೊಮ್ಮುತ್ತಿದೆ. ವೇಮಗಲ್‌ನ ಈ ಘಟಕ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನದ ಸಂಕೇತ. 1,000 ಕೋಟಿಗೂ ಹೆಚ್ಚು ಹೂಡಿಕೆಯ ಈ ಯೋಜನೆ ಕರ್ನಾಟಕದ ಯುವಜನತೆಗೆ ಸಾವಿರಾರು ಉದ್ಯೋಗಾವಕಾಶ ಸೃಷ್ಟಿಸಲಿದೆ’ ಎಂದರು.
‘ಇಲ್ಲಿ ತಯಾರಾಗುವ ಎಚ್-125 ಹೆಲಿಕಾಪ್ಟರ್‌ಗಳು ಭಾರತದ ರಕ್ಷಣಾ ಪಡೆಗಳಿಗೆ ಶಕ್ತಿ ತುಂಬುವುದಲ್ಲದೆ, ಭವಿಷ್ಯದಲ್ಲಿ ನೆರೆ ರಾಷ್ಟ್ರಗಳಿಗೂ ರಫ್ತಾಗಲಿವೆ. ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಬಾಂಧವ್ಯ ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ, ಇದು ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉತ್ಪಾದನೆಯ ಹೊಸ ಹಂತಕ್ಕೆ ತಲುಪಿದೆ’ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ನೂತನ ಘಟಕವು ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 2027ರ ವೇಳೆಗೆ ಮೊದಲ ‘ಮೇಡ್ ಇನ್ ಇಂಡಿಯಾ’ ಹೆಲಿಕಾಪ್ಟರ್ ಹಾರಾಡುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.
ಮುಂದಿನ 20 ವರ್ಷಗಳಲ್ಲಿ ಎಚ್-125 ದರ್ಜೆಯ 500 ಲಘು ಹೆಲಿಕಾಪ್ಟರ್ ಸಿದ್ಧ
ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಮುಂದಿನ 20 ವರ್ಷಗಳಲ್ಲಿ ಎಚ್-125 ದರ್ಜೆಯ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಈ ಘಟಕ ರಾಜ್ಯದಲ್ಲಿ ಕಾರ್ಯಾರಂಭ ಮಾಡುತ್ತಿರುವುದು ಐತಿಹಾಸಿಕ ಸಾಧನೆಯಾಗಿ ಚಿರಸ್ಥಾಯಿಯಾಗಿ ಉಳಿಯಲಿದೆ. ಈ ಘಟಕಕ್ಕೆ ನಾನು ಕೈಗಾರಿಕಾ ಸಚಿವನಾದ ಮೇಲೆ 17 ಎಕರೆ ಜಾಗ ಕೊಟ್ಟಿದ್ದೆ. ದಾಖಲೆ ಅವಧಿ ಅಂದರೆ 1.5 ವರ್ಷದಲ್ಲೇ ಘಟಕ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಫ್ರಾನ್ಸ್, ಅಮೆರಿಕ, ಬ್ರೆಜಿಲ್ ನಂತರ ನಮ್ಮಲ್ಲಿ ಜಗತ್ತಿನ ನಾಲ್ಕನೆಯ ಎಚ್ 125 ಹೆಲಿಕಾಪ್ಟರ್ ತಯಾರಿಕೆ ಮತ್ತು ಅಂತಿಮ ಜೋಡಣೆ ಘಟಕ ಸ್ಥಾಪನೆಯಾಗಿರುವುದು ಈ ವಲಯಕ್ಕೆ ಮತ್ತಷ್ಟು ಬಲ ಬಂದಿದೆ. ಯೋಜನೆಗೆ ತ್ವರಿತಗತಿಯಲ್ಲಿ ಅನುಮೋದನೆ, ಇಲಾಖೆಗಳ ನಡುವೆ ಅತ್ಯುತ್ತಮ ಸಮನ್ವಯ, ಮೂಲಸೌಕರ್ಯ ಸನ್ನದ್ಧತೆ ಮತ್ತು ಕೈಗಾರಿಕಾ ಪಾಲುದಾರರೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುವಿಕೆಗಳಿಂದ ಈ ಚಾರಿತ್ರಿಕ ಯೋಜನೆ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಂಡಿದೆ ಎಂದು ಸಚಿವರು ತಿಳಿಸಿದರು.
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಮಾತನಾಡಿ, ದೇಶದ ಖಾಸಗಿ ವಲಯದಲ್ಲಿ ಮೊದಲಿಗರಾಗಿ ಎಚ್-125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಸ್ಥಾಪಿಸಲು ನಾವು ಹೆಮ್ಮೆಪಡುತ್ತೇವೆ. ಏರ್‌ಬಸ್ ಜೊತೆಗೂಡಿ ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಏರೋಸ್ಪೇಸ್ ಪರಿಸರ ವ್ಯವಸ್ಥೆ ನಿರ್ಮಿಸಲು ಕೊಡುಗೆ ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು, ಕೋಲಾರ ಸಂಸದ ಮಲ್ಲೇಶಬಾಬು, ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಈ ಘಟಕದ ವಿಶೇಷತೆಗಳೇನು?
- ಇದು ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಉತ್ಪಾದನಾ ಘಟಕ
- ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್-ಏರ್‌ಬಸ್ ಕಂಪನಿಗಳ ಸಹಯೋಗದಲ್ಲಿ ನಿರ್ಮಾಣ
- ವೇಮಗಲ್‌ನದು ಏರ್‌ಬಸ್ ಕಂಪನಿಯ ಜಾಗತಿಕ ಮಟ್ಟದ 4ನೇ ಉತ್ಪಾದನಾ ಘಟಕ
- ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಮೇಲಿಳಿದ ಏಕೈಕ ಕಾಪ್ಟರ್ ಎಚ್125
- ವರ್ಷಕ್ಕೆ 10 ಹೆಲಿಕಾಪ್ಟರ್ ಉತ್ಪಾದನೆ, ಬೇಡಿಕೆ ಹೆಚ್ಚಾದರೆ ಘಟಕ ವಿಸ್ತರಣೆಗೆ ಅವಕಾಶ
- ಇಲ್ಲಿಂದ ಭಾರತ ಮತ್ತು ದಕ್ಷಿಣ ಏಷ್ಯಾ ದೇಶಗಳಿಗೂ ರಫ್ತು, ಸಾವಿರಾರು ಉದ್ಯೋಗ ಸೃಷ್ಟಿ
- ನಾಗರಿಕ ಬಳಕೆ ಮತ್ತು ಮಿಲಿಟರಿ ಬಳಕೆ ವಿಮಾನಗಳ ಅಭಿವೃದ್ಧಿಗೆ ಈ ಘಟಕದ ಮೂಲಕ ಕ್ರಮ
- ಕಾಪ್ಟರ್‌ನ ಪ್ರಮುಖ ಭಾಗವಾದ ಫ್ಯೂಸೆಲೇಜ್ ಮಹೀಂದ್ರಾ ಏರೋಸ್ಟ್ರಕ್ಚರ್ಸ್ ನಿಂದ ಪೂರೈಕೆ
- ಯುರೋಪಿಯನ್ ಒಕ್ಕೂಟದ ವಿಮಾನಯಾನ ಸುರಕ್ಷತಾ ಏಜೆನ್ಸಿ ಪ್ರಮಾಣಪತ್ರ ಪಡೆದ ಘಟಕ
